Advertisement

ಮೂಡ್ಲಕಟ್ಟೆ ರೈಲು ನಿಲ್ದಾಣ ಸರ್ಕಲ್‌ಗೆ ನವರೂಪ

10:36 AM Mar 30, 2022 | Team Udayavani |

ಕುಂದಾಪುರ: ಇಲ್ಲಿನ ರೈಲು ನಿಲ್ದಾಣವನ್ನು ಸಂಪರ್ಕಿಸುವ ಮೂಡ್ಲಕಟ್ಟೆಯ ಜಂಕ್ಷನ್‌ಗೆ ಹೊಸ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಈಗಿರುವ ಹಳೆಯ ಜಂಕ್ಷನ್‌ ತೆಗೆದು, ಅಲ್ಲಿ ಮಾಜಿ ಸಂಸದ, ಶಾಸಕರಾಗಿದ್ದ ಐ.ಎಂ. ಜಯರಾಮ ಶೆಟ್ಟರ ಹೆಸರಲ್ಲಿ ಹೊಸ ರೂಪದಲ್ಲಿ ಸರ್ಕಲ್‌ ನಿರ್ಮಾಣಗೊಳ್ಳುತ್ತಿದೆ. ಮೂಡ್ಲಕಟ್ಟೆಯಲ್ಲಿರುವ ರೈಲು ನಿಲ್ದಾಣವನ್ನು ಸಂಪರ್ಕಿಸುವ ಕುಂದಾಪುರ-ತೀರ್ಥಹಳ್ಳಿ ಹೆದ್ದಾರಿಯ ಮೂಡ್ಲಕಟ್ಟೆಯ ತಿರುವಿನಲ್ಲಿ ಸರ್ಕಲ್‌ವೊಂದಿದ್ದು, ಅದನ್ನೀಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಮಾಜಿ ಸಂಸದ ಐ.ಎಂ. ಜಯರಾಮ ಶೆಟ್ಟರ ಮನೆಯವರು ಲಕ್ಷಾಂತರ ರೂ. ವೆಚ್ಚದಲ್ಲಿ ಈ ಸರ್ಕಲ್‌ ಅನ್ನು ಸುಂದರವಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

Advertisement

ಪ್ರಮುಖ ನಿಲ್ದಾಣ

ಕೊಂಕಣ ರೈಲ್ವೇಯ ಪ್ರಮುಖ ನಿಲ್ದಾಣಗಳಲ್ಲಿ ಒಂದಾ ಗಿರುವ ಕುಂದಾಪುರದ ಮೂಡ್ಲಕಟ್ಟೆ ರೈಲು ನಿಲ್ದಾಣದಲ್ಲಿ ನಿತ್ಯ 15 ಕ್ಕೂ ಅಧಿಕ ರೈಲುಗಳ ನಿಲುಗಡೆಯಿದೆ. ಕೊಲ್ಲೂರು ಸಹಿತ ಅನೇಕ ಊರುಗಳಿಗೆ ಆಗಮಿಸುವ ಸಾವಿರಾರು ಭಕ್ತರು, ಪ್ರವಾಸಿಗರು ಈ ನಿಲ್ದಾಣವನ್ನೇ ಆಶ್ರಯಿಸಿದ್ದಾರೆ. ಬೆಂಗಳೂರು, ಕೇರಳ, ಗೋವಾ, ಮಹಾರಾಷ್ಟ್ರ ಕಡೆಗೆ ತೆರಳುವವರು ಇದೇ ನಿಲ್ದಾಣವನ್ನು ಅವಲಂಬಿಸಿದ್ದಾರೆ.

ಜಯರಾಮ ಶೆಟ್ಟರ ಹೆಸರು

1990ರ ದಶಕದಲ್ಲಿ ಜಾರ್ಜ್‌ ಫೆರ್ನಾಂಡೀಸ್‌ ಅವರ ಪ್ರಯತ್ನದಿಂದಾಗಿ ಕರ್ನಾಟಕ, ಗೋವಾ, ಮಹಾರಾಷ್ಟ್ರವನ್ನು ಬೆಸೆಯುವ ಕೊಂಕಣ್‌ ರೈಲ್ವೇ ಮಾರ್ಗ ನಿರ್ಮಾಣಗೊಂಡಿತ್ತು. ಕುಂದಾಪುರ ಭಾಗದಲ್ಲಿ ಕೊಂಕಣ ರೈಲ್ವೇ ಹಳಿ ನಿರ್ಮಾಣವಾಗುವ ವೇಳೆ ಐ.ಎಂ. ಜಯರಾಮ ಶೆಟ್ಟಿಯವರು ಈ ಭಾಗದ ಸಂಸದರಾಗಿದ್ದರು. ಈ ಭಾಗಕ್ಕೆ ರೈಲ್ವೇ ಹಳಿ ವಿಸ್ತಾರಗೊಳ್ಳುವಲ್ಲಿ ಜಯರಾಮ ಶೆಟ್ಟರ ಸಹಕಾರವೂ ಪ್ರಮುಖವಾಗಿತ್ತು. 1994ರಲ್ಲಿ ಬೈಂದೂರು ಶಾಸಕರಾಗಿ, 1998ರಲ್ಲಿ ಉಡುಪಿ ಸಂಸದರಾಗಿದ್ದರು. ಇದಲ್ಲದೆ ಮೂಡ್ಲಕಟ್ಟೆಯಲ್ಲಿಯೇ ಇವರ ಮನೆ, ತಾಂತ್ರಿಕ ಮಹಾವಿದ್ಯಾಲಯವಿದೆ. ಈ ಎಲ್ಲ ಕಾರಣಗಳಿಂದಾಗಿ ಅವರ ಮನೆಯವರಿಂದ ಊರಿಗೆ ಕೊಡುಗೆಯಾಗಿ ಈ ಸರ್ಕಲ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸರ್ಕಲ್‌ಗೆ “ಐ.ಎಂ. ಜಯರಾಮ ಶೆಟ್ಟಿ ಸರ್ಕಲ್‌’ ಎಂದೇ ಹೆಸರಿಡಲು ನಿರ್ಧರಿಸಲಾಗಿದೆ.

Advertisement

ಜನ್ಮದಿನದಂದು ಉದ್ಘಾಟನೆ

ತಂದೆಯವರ ಹೆಸರಲ್ಲಿ ಊರಿಗೆ ಏನಾದರೂ ಕೊಡುಗೆ ನೀಡಬೇಕು ಅನ್ನುವ ನೆಲೆಯಲ್ಲಿ ಈ ಸರ್ಕಲ್‌ ಅಭಿವೃದ್ಧಿಪಡಿಸುತ್ತಿದ್ದೇವೆ. ಕಂದಾವರ ಗ್ರಾ.ಪಂ.ನವರು ಸಹ ಈ ಬಗ್ಗೆ ಮನವಿ ಮಾಡಿಕೊಂಡಿದ್ದರು. ಅದೀಗ ಕಾರ್ಯರೂಪಕ್ಕೆ ಬರುತ್ತಿದೆ. ಎ.10 ರಂದು ಅವರ ಜನ್ಮ ದಿನದಂದು ಉದ್ಘಾಟನೆಗೊಳ್ಳಲಿದೆ. ಐ.ಎಂ. ಸಿದ್ಧಾರ್ಥ ಶೆಟ್ಟಿ, ಅಧ್ಯಕ್ಷರು, ಮೂಡ್ಲಕಟ್ಟೆ ಎಂಐಟಿ (ಐ.ಎಂ. ಜಯರಾಮ ಶೆಟ್ಟರ ಪುತ್ರ)

ಉತ್ತಮ ನಿರ್ಧಾರ

ಮೂಡ್ಲಕಟ್ಟೆಯಲ್ಲಿ ಐ.ಎಂ. ಜಯರಾಮ ಶೆಟ್ಟರ ಹೆಸರಲ್ಲಿ ಸರ್ಕಲ್‌ ನಿರ್ಮಾಣವಾಗುತ್ತಿರುವುದು ಉತ್ತಮ ನಿರ್ಧಾರ. ಸರ್ಕಲ್‌ಗೆ ಅವರದೇ ಹೆಸರಿಡುವುದು ಸಹ ಸೂಕ್ತವಾಗಿದೆ. ಇಲ್ಲಿನ ರೈಲ್ವೇ ಹಳಿ ಆಗುವ ವೇಳೆ ಅವರೇ ಸಂಸದರಾಗಿದ್ದು, ಒಂದಷ್ಟು ಜಾಗವನ್ನು ನೀಡಿದ್ದಾರೆ. ಅವರ ಪ್ರಯತ್ನವೂ ಇದೆ. ಸರ್ಕಲ್‌ ಇನ್ನಷ್ಟು ಸುಂದರವಾಗಿರಲು ರೈಲಿನ ಮಾದರಿಯನ್ನೊಂದನ್ನು ಇಡಲು ಮನವಿ ಮಾಡಿದ್ದೇವೆ. ಗಣೇಶ್‌ ಪುತ್ರನ್‌, ಅಧ್ಯಕ್ಷರು, ರೈಲ್ವೇ ಪ್ರಯಾಣಿಕರ ಹಿತರಕ್ಷಣಣಸಮಿತಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next