ಮೂಡಿಗೆರೆ: ತಾಲೂಕಿನ ಊರುಬಗೆ ಗ್ರಾಪಂ ವ್ಯಾಪ್ತಿಯ ಹಳೆಕೆರೆ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪರ್ಯಾಯ ವ್ಯವಸ್ಥೆ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಬೇಕೆಂದು ಒತ್ತಾಯಿಸಿ ಜೆಡಿಎಸ್, ರೈತ ಸಂಘ ಹಾಗೂ ಹಳೆಕೆರೆ ಗ್ರಾಮಸ್ಥರು ತಹಶೀಲ್ದಾರ್‌ರಿಗೆ ಮನವಿ ಪತ್ರ
ಸಲ್ಲಿಸಿದರು.
ಕುಡಿಯುವ ನೀರಿನ ಮೂಲಾಧಾರವಾಗಿರುವ ಹಳ್ಳಕ್ಕೆ ಕಾμ ಪಲ್ಪರ್ ತ್ಯಾಜ್ಯವನ್ನು ಹರಿಯಲು ಬಿಡುವ ತೋಟದ ಮಾಲಿಕರ ವಿರುದ್ಧ ಮೊಕ್ಕದ್ದಮೆ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಬೇಕು ಎಂದು ತಹಶೀಲ್ದಾರ್‌ರಿಗೆ ಆಗ್ರಹಿಸಿದರು.
ಕುಡಿಯಲು ನೀರಿಲ್ಲದೇ ಕಂಗಾಲಾಗಿರುವ ಗ್ರಾಮದ ಜನರ ಪರವಾಗಿ ತಾಲೂಕು ಆಡಳಿತ ನಿಲ್ಲಬೇಕು. ಹೇಮಾವತಿ ನದಿಗೆ ಮರಳು ಮೂಟೆಗಳನ್ನು ಅಡ್ಡಲಾಗಿ ಇಟ್ಟು ನೀರನ್ನು ತಮ್ಮ ತೋಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹರಿಯುವ ನೀರಿಗೆ ಅಡ್ಡಲಾಗಿ ಇಟ್ಟಿರುವ ಮರಳು ಮೂಟೆಗಳನ್ನು ತೆರವುಗೊಳಿಸಿ, ಸಂಬಂಧಪಟ್ಟ ತೋಟದ ಮಾಲಿಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.
15 ದಿನಗಳ ಹಿಂದೆ ತಹಶೀಲ್ದಾರ್ ರಿಗೆ ದೂರು ನೀಡಿದಾಗ ಗೋಣಿಬೀಡು ಪೊಲೀಸರಿಗೆ ಅಕ್ರಮ ಎಸಗಿರುವ ತೋಟದ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದರು. ಆದರೆ ಗೋಣಿಬೀಡು ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ ಉಳ್ಳವರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಚಾರವಾಗಿ ಪರಿಸರ ಇಲಾಖೆಗೆ ಕೂಡ ದೂರು ನೀಡಲಾಗಿದೆ. ಎರಡು ದಿನಗಳ ಒಳಗಾಗಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪ ಗೌಡ, ತಾಲೂಕು ಉಪಾಧ್ಯಕ್ಷ ಹಳೆಕೆರೆ ರಘು, ಗ್ರಾ.ಪಂ. ಸದಸ್ಯ ಎಚ್. ಆರ್. ಚಂದ್ರು, ಗ್ರಾಮಸ್ಥರಾದ ಎಚ್ .ಪಿ.ಪೂರ್ಣೇಶ್, ಪಾರ್ವತಿ, ಇಂದಿರಾ,
ರುಕ್ಮಿಣಿ ಮತ್ತಿತರರು ಹಾಜರಿದ್ದರು.