ಮೂಡಿಗೆರೆ: ಧರ್ಮಸ್ಥಳದಲ್ಲಿ ಶುಕ್ರವಾರದಂದು ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಪಾದಯಾತ್ರೆ ಕೈಗೊಂಡಿದ್ದು, ಈ ಯಾತ್ರಿಕರಿಗಾಗಿ ತಾಲೂಕಿನ ವಿವಿಧೆಡೆ ಸ್ಥಳೀಯರು ವಿಶ್ರಾಂತಿ ತಾಣ ಹಾಗೂ ಅನ್ನಸಂತರ್ಪಣೆ ಸೇವೆ ಕಲ್ಪಿಸುತ್ತಿದ್ದಾರೆ.
ಉತ್ತರ ಕರ್ನಾಟಕದ ಬಳ್ಳಾರಿ, ಗದಗ, ಹೊಸಪೇಟೆ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಕೋಲಾರ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದ್ದು, ದಾರಿಯುದ್ದಕ್ಕೂ ಭಕ್ತರ ದಂಡು ಕಾಣಸಿಗುತ್ತಿದೆ.
ಧರ್ಮಸ್ಥಳಕ್ಕೆ ತೆರಳುವ ಮಾರ್ಗಮಧ್ಯೆ ಮೂಡಿಗೆರೆ ತಾಲೂಕು ಪ್ರವೇಶಿಸುವ ಯಾತ್ರಾರ್ಥಿಗಳಿಗೆ ಕಸ್ಕೇಬೈಲಿನಿಂದ ಕೊಟ್ಟಿಗೆಹಾರದವೆರೆಗೂ ಅಲ್ಲಲ್ಲಿ ವಿಶ್ರಾಂತಿ ತಾಣಗಳು, ಅನ್ನಸಂತರ್ಪಣೆ ಕೇಂದ್ರಗಳು, ಆರೋಗ್ಯ ತಪಾಸಣೆ ಕೇಂದ್ರಗಳನ್ನು ತೆರೆದು ಯಾತ್ರಾರ್ಥಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳಲಾಗುತ್ತಿದೆ. ಸ್ಥಳೀಯ ಸ್ವಯಂಸೇವಕರು, ದಾನಿಗಳು ಯಾತ್ರಾರ್ಥಿಗಳಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹಲವೆಡೆ ಉಚಿತ ಆರೋಗ್ಯ ತಪಾಸಣೆ ಕೇಂದ್ರಗಳನ್ನು ತೆರೆದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಕಸ್ಕೆಬೈಲ್, ಹ್ಯಾಂಡ್‌ಪೋಸ್ಟ್, ಜನ್ನಾಪುರ ಗ್ರಾಮದಲ್ಲಿ ರಸ್ತೆ ಪಕ್ಕದಲ್ಲಿ ಉಚಿತವಾಗಿ ಪಾನಕ, ಮಜ್ಜಿಗೆ, ಕಾಫಿ, ಟೀ, ಹಾಲು ನೀಡಿ ಯಾತ್ರಾರ್ಥಿಗಳ ಸೇವೆ ಮಾಡಲಾಗುತ್ತಿದೆ. ಪಾದಯಾತ್ರಿಗಳಿಗಾಗಿ ದಾರಿಯುದ್ದಕ್ಕೂ ತಾತ್ಕಾಲಿಕ ಅಂಗಡಿಗಳನ್ನು ತೆರೆಯಲಾಗಿದ್ದು, ವ್ಯಾಪಾರದ ಭರಾಟೆ ಜೋರಾಗಿದೆ. ಸಂಜೆ ವೇಳೆಗೆ ಸುತ್ತಮುತ್ತಲ ಗ್ರಾಮಗಳಲ್ಲಿ ಉಳಿದುಕೊಳ್ಳುತ್ತಿರುವ ಪಾದಯಾತ್ರಿಗಳಿಗೆ ಸ್ಥಳೀಯರು ತಮ್ಮ ಮನೆಗಳ ಬಳಿ ಸ್ಥಳಾವಕಾಶ ಒದಗಿಸುತ್ತಿದ್ದು, ಊಟೋಪಚಾರ ಸೇರಿದಂತೆ, ಬಿಸಿ ನೀರಿನ ಸ್ನಾನಕ್ಕೆ ವ್ಯವಸ್ಥೆ ಮಾಡಿಕೊಡುತ್ತಿರುವುದು ಯಾತ್ರಾತ್ರಿಗಳ ಮನ ಗೆದ್ದಿದೆ.
ಬಿಳಗುಳದ ಗಜೇಂದ್ರ ಅವರು ತಮ್ಮ ಮನೆಯ ಬಳಿ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಹಾಗೂ ಭಜನೆ ಕಾರ್ಯಗಳನ್ನು ನಡೆಸಲು ವ್ಯವಸ್ಥೆ ಕಲ್ಪಿಸಿರುವುದು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತ ನೀರುಗಂಡಿಯ ಯೋಗೇಶ್ ಅವರ ಕಾಫಿ ಕ್ಯೂರಿಂಗ್ ಆವರಣದಲ್ಲಿ ಧರ್ಮಸ್ಥಳ ಯಾತ್ರಿಗಳ ಸಮಾಜ ಸೇವಾ ಸಂಘದ ವತಿಯಿಂದ ಬೃಹತ್ ಶಿಬಿರವನ್ನು ತೆರೆಯಲಾಗಿದೆ. ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ, ಸದ್ವಿದ್ಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯುರ್ವೇದ ಚಿಕಿತ್ಸೆ, ಪಾದಯಾತ್ರಿಗಳಿಗೆ ಸ್ನಾನದ ವ್ಯವಸ್ಥೆ, ಅನ್ನಸಂತರ್ಪಣೆ, ಪಾದ ಮಜ್ಜನ ಸೇರಿದಂತೆ ಹತ್ತು ಹಲವು ಸೇವೆಗಳನ್ನು ನೀಡಲಾಗುತ್ತಿದೆ.
ಹೆಸಗಲ್, ಚಿನ್ನಿಗಾ, ಗೋಣಿಬೀಡು, ಬಿದಿರಹಳ್ಳಿ, ಬಾಳೂರು, ಕೂವೆ, ತರುವೆ, ಬಣಕಲ್ ಮುಂತಾದ ಗ್ರಾಮ ಪಂಚಾಯತಿಗಳಿಂದ ಯಾತ್ರಿಗಳಿಗೆ ದಾರಿಯುದ್ದಕ್ಕೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಯಲ್ಲಿ ಹೆದ್ದಾರಿಯುದ್ದಕ್ಕೂ ವಾಹನಗಳ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹಾಗಾಗಿ, ಪಾದಯಾತ್ರಿಗಳು ಎಚ್ಚರಿಕೆಯಿಂದ ಚಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಶಿವರಾತ್ರಿಗೆ ಇನ್ನು ಕೇವಲ 2 ದಿನಗಳು ಬಾಕಿ ಇದ್ದು, ಹೆಚ್ಚಿನ ಯಾತ್ರಿಕರ ಆಗಮನದ ನಿರೀಕ್ಷೆ ಇರುವುದರಿಂದ ತಾಲೂಕು ಆಡಳಿತ ಹಾಗೂ ಸ್ಥಳೀಯ ಸ್ವಯಂಸೇವಕರು ಸೇವೆಗೆ ಸಕಲ ರೀತಿಯಿಂದ ಸಜ್ಜಾಗಿದ್ದಾರೆ.