Advertisement

19ರಂದು ಬಣಕಲ್‌ ಸಹಕಾರಿ ಸಂಘದ ಚುನಾವಣೆ

01:00 PM Jan 06, 2020 | Team Udayavani |

ಮೂಡಿಗೆರೆ: ಬಣಕಲ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣಾ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿ ಗೆ ನಡೆಯುವ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಗೆ ಚುನಾವಣಾ ದಿನಾಂಕ ನಿಗದಿಪಡಿಸಲಾಗಿದೆ.

Advertisement

ಜ.19ರಂದು ಭಾನುವಾರ ಖಾಲಿಯಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಸಹಕಾರಿ ಸಂಘದ ಕಟ್ಟಡದಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಅ ಧಿಕಾರಿಯಾಗಿ ಬಿ.ಕೆ. ವಿಜಯೇಂದ್ರ ಅವರು ಕಾರ್ಯ ನಿರ್ವಹಿಸಲಿದ್ದಾರೆ. ಸಹಕಾರಿ ಸಂಘದ ನಿರ್ದೇಶಕರ ಸ್ಥಾನಗಳಿಗೆ ವಿವಿಧ ಪಕ್ಷಗಳಿಗೆ ಸೇರಿದ ಅಭ್ಯರ್ಥಿಗಳು ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಕೂಡ ನಾಮಪತ್ರ ಸಲ್ಲಿಸಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸದ್ಯ ಚುನಾವಣೆಯಿಂದಾಗಿ ರಂಗೇರಿರುವ ಬಣಕಲ್‌ ಗ್ರಾಮವು ಜಿದ್ದಾಜಿದ್ದಿನ ಕಣವಾಗಿ ಪರಿವರ್ತನೆಯಾಗಿದೆ.

ಜ.11 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಜ.12 ನಾಮಪತ್ರ ಪರಿಶೀಲನೆ. 13 ರಂದು ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇತ್ತ ಪಕ್ಷಗಳ ಕಡೆಯಿಂದ ಟಿಕೆಟ್‌ ಸಿಗದ ಆಕಾಂಕ್ಷಿಗಳು ಪಕ್ಷೇತರರಾಗಿ ಅದೃಷ್ಟ ಪರೀಕ್ಷೆಗೆ ಅಣಿಯಾಗಿದ್ದಾರೆ. ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 11 ಸ್ಥಾನಗಳ ಪೈಕಿ ಜನರಲ್‌-5, ಬಿ.ಸಿ.ಎಂ ಎ-2 , ಎಸ್‌.ಸಿ-1, ಎಸ್‌.ಟಿ-1, ಸಾಮಾನ್ಯ ಮಹಿಳೆ-2 ಎಂದು ವಿಂಗಡಿಸಲಾಗಿದೆ. ಸಂಘದಲ್ಲಿ ಸುಮಾರು 900 ಮತದಾರರಿದ್ದು, ಪ್ರತಿಯೊಬ್ಬ ಮತದಾರನಿಗೂ 11 ಮತಗಳನ್ನು ಚಲಾಯಿಸುವ ಅಧಿಕಾರ ಸಿಗಲಿದೆ. ಸಂಘದ ಸದಸ್ಯರು ಯಾವ ಅಭ್ಯರ್ಥಿಯ ಕಡೆ ಒಲವು ತೋರುತ್ತಾರೆ ಎಂದು ಚುನಾವಣೆ ಕಳೆದ ಬಳಿಕವೇ ನಿರ್ಧಾರವಾಗಬೇಕಿದೆ.

ಗ್ರಾಮಗಳ ಮಟ್ಟದಲ್ಲಿ ನಡೆಯುವ ಇಂತಹ ಚುನಾವಣೆಯಲ್ಲಿ ಸಹಕಾರಿ ಸಂಸ್ಥೆಗಳ
ನಿರ್ದೇಶಕರಾಗುವುದು ಆಕಾಂಕ್ಷಿಗಳಿಗೆ ಪ್ರತಿಷ್ಠೆಯ ವಿಚಾರವಾಗಿರುತ್ತದೆ. ಸಹಜವಾಗಿ ಒಬ್ಬೊಬ್ಬ ಅಭ್ಯರ್ಥಿಯೂ ಕೂಡ ಒಂದೊಂದು ಪಕ್ಷದೊಂದಿಗೆ ಗುರುತಿಸಿಕೊಂಡಿರುತ್ತಾನೆ. ಒಟ್ಟು 13 ಸ್ಥಾನಗಳಿದ್ದು, ಅದರಲ್ಲಿ 11 ಸಾಲಗಾರರ ಕ್ಷೇತ್ರದಿಂದಲೂ, 1 ಸಾಲಗಾರರಲ್ಲದ ಕ್ಷೇತ್ರದಿಂದಲೂ ಮತ್ತೂಂದು ಸಂಘದ ನಾಮ ನಿರ್ದೇಶಿತ ಸದಸ್ಯರನ್ನು
ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಸಹಕಾರ ಸಂಘಗಳಲ್ಲಿ ಆಯಾ ಸಂಘದ ಷೇರುದಾರ ಸದಸ್ಯರು ಚುನಾವಣೆಗಳ ಮೂಲಕ ಸಂಘದ ನಿರ್ದೇಶಕರನ್ನು ಆಯ್ಕೆ ಮಾಡುತ್ತಾರೆ. ನಂತರ ಚುನಾವಣೆಯಲ್ಲಿ ಗೆಲುವು ಕಂಡ ನಿರ್ದೇಶಕರು ಒಟ್ಟಾಗಿ ಸಂಘದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಇದೇ ಪ್ರಕಾರವಾಗಿ ಬಣಕಲ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯೂ ಸಹ ನಡೆಯಲಿದ್ದು, ಅಭ್ಯರ್ಥಿಗಳ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ.

ಹೀಗಾಗಿ ನಾಮಪತ್ರ ಸಲ್ಲಿಕೆಗೆ ದಿನಗಳು ಬಾಕಿ ಇದ್ದರೂ ಕೂಡ ಬಹುತೇಕ ಅಭ್ಯರ್ಥಿಗಳು
ಮತಯಾಚನೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಬಿಜೆಪಿ ಪಕ್ಷದಲ್ಲಿಯೇ 2 ಬಣಗಳಾಗಿ ರೂಪುಗೊಂಡಿದ್ದು, ಪಕ್ಷದ ಒಳಗೇ ಜಿದ್ದಾಜಿದ್ದಿಗೆ ಕಾರಣವಾಗಿದೆ. ಬಣಕಲ್‌ನ ವಿಕ್ರಮ್‌ ಹಾಗೂ ಬಾಳೆ ಹಳ್ಳಿ ಸತೀಶ್‌ ಎಂಬುವವರದ್ದು ಒಂದು ತಂಡವಾದರೆ, ಬಾಳೂರು ಭರತ್‌ ಎಂಬುವವರದ್ದು ಇನ್ನೊಂದು ತಂಡ ಎಂದು ತಿಳಿದು ಬಂದಿದೆ. ಕಾಂಗ್ರೆಸ್‌ ಪಕ್ಷ ಕೂಡ ಇದಕ್ಕೆ ಹೊರತಾಗದೆ ಬಾಳೂರು ಕೃಷ್ಣೇಗೌಡ ಅವರ ತಂಡ ಪ್ರತ್ಯೇಕವಾಗಿ ಗುರುತಿಸಿಕೊಂಡಿದೆ ಎನ್ನಲಾಗಿದೆ. ಪಕ್ಷದ ಒಳಗೆ ಜಿದ್ದಾಜಿದ್ದಿನ ಕಣ ಮಾರ್ಪಾಟಾಗಿರುವುದು ಪಕ್ಷದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಹಿರಿಯ ನಾಯಕರ ಮುಖಂಡತ್ವದಲ್ಲಿ ಅಭ್ಯರ್ಥಿಗಳ ಮನವೊಲಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ತಂತ್ರಕ್ಕೆ ಎಲ್ಲರೂ ಮೊರೆ ಹೋಗಿದ್ದಾರೆ. ಇತ್ತ ಸಾಲಗಾರರ
ಕ್ಷೇತ್ರದಲ್ಲಿ ಸಾಮಾನ್ಯ ಅಭ್ಯರ್ಥಿಯಾಗಿ ಟಿ.ಎಂ. ಆದರ್ಶ್‌ ಅವರು ಎಲ್ಲರಿಗಿಂತಲೂ ಮುಂಚಿತವಾಗಿ ಮತಬೇಟೆಗೆ ತೊಡಗಿದ್ದು, ರಾಜಕೀಯ ಪಕ್ಷಗಳ ತಲೆನೋವಿಗೆ ಕಾರಣವಾಗಿದೆ.

Advertisement

ಒಟ್ಟಾರೆ ಸ್ಥಳೀಯವಾಗಿ ಪ್ರತಿಷ್ಠೆಯ ಪ್ರತಿಬಿಂಬ ಎಂದೇ ಭಾವಿಸಲಾಗಿರುವ ಬಣಕಲ್‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಗೆ ಇನ್ನು ಕೆಲವೇ ದಿನಗಳು ಉಳಿದಿದ್ದು, ಯಾವ ರೀತಿಯ ಬೆಳವಣಿಗೆಗಳು ನಡೆಯುತ್ತವೆ ಎಂದು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next