ಮೂಡಬಿದಿರೆ: “ಬುದ್ಧಿಶಕ್ತಿ ಇರುವುದರಿಂದ ಮನುಷ್ಯರು ಪ್ರಾಣಿ ಗಳಿಗಿಂತ ಶ್ರೇಷ್ಠ. ಮನುಷ್ಯರಿಗೆ ಮಾತ್ರಯುಕ್ತಾಯುಕ್ತತೆಯ ವಿವೇಚನಾ ಶಕ್ತಿ, ವಿವೇಕ ಇರುತ್ತದೆ. ಈ ಬುದ್ಧಿಶಕ್ತಿಯನ್ನು ವಿವೇಕದ ಮಾರ್ಗದಲ್ಲಿ ಮುನ್ನಡೆಸಿದಾಗ ಜೀವನವೂ ಪಾವನವಾಗು ತ್ತದೆ; ಭಗವದನುಗ್ರಹವೂ ಪ್ರಾಪ್ತಿಯಾಗುತ್ತದೆ’ ಎಂದು ಶ್ರೀ ದಕ್ಷಿಣಾ ಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ನುಡಿದರು.
ಶುಕ್ರವಾರ ಮೂಡಬಿದಿರೆ ವಿದ್ಯಾಗಿರಿಯಲ್ಲಿ “ಪೌರ ಸಮ್ಮಾನ’ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಗುರುಗಳನುಗ್ರಹ ಬೇಕು ಶ್ರೀಗಳ ಪಟ್ಟಶಿಷ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿ ಗಳು ಆಶೀರ್ವ ಚನದಲ್ಲಿ “ಮನುಷ್ಯರಿಗೆ ಸಹಜವಾಗಿರುವ ಚಿತ್ತ ಚಾಪಲ್ಯ, ಚಾಂಚಲ್ಯವನ್ನೆಲ್ಲ ನಿಗ್ರಹಿಸಿಕೊಂಡು ಸಂಸ್ಕಾರಯುತರಾಗಿ ಬದುಕಬೇ ಕಾದರೆ ಗುರುಗಳ ಅನುಗ್ರಹ, ಮಾರ್ಗ ದರ್ಶನ ಅಗತ್ಯ’ ಎಂದರು.
ಸುಂದರಿ ಆನಂದ ಆಳ್ವ ಕ್ಯಾಂಪಸ್‌ನ ಡಾ| ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ “ಪೌರ ಸಮ್ಮಾನ’ ಕಾರ್ಯ ಕ್ರಮದಲ್ಲಿ ಸಮಿತಿ ಕಾರ್ಯಾಧ್ಯಕ್ಷ ಡಾ| ಎಂ. ಮೋಹನ ಆಳ್ವ, ಗೌರವಾಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಅಧ್ಯಕ್ಷ ಶಾಸಕ ಕೆ. ಅಭಯಚಂದ್ರ, ಕಾರ್ಯದರ್ಶಿ ಕೆ. ಶ್ರೀಪತಿ ಭಟ್, ಜತೆ ಕಾರ್ಯದರ್ಶಿ ನಾರಾಯಣ ಪಿ.ಎಂ., ಉಪಾಧ್ಯಕ್ಷರಾದ ಚೌಟರ ಅರಮನೆ ಕುಲದೀಪ ಎಂ., ಬೊಕ್ಕಸ ಚಂದ್ರಶೇಖರ ರಾವ್, ಅಲಂಗಾರು ಈಶ್ವರ ಭಟ್ ಸಹಿತ ಪದಾಧಿಕಾರಿಗಳು, ಸದಸ್ಯರು ಸ್ವಾಮೀಜಿಯವರಿಗೆ ಬಿನ್ನವತ್ತಳೆ, ಶ್ರೀ ಶಾರದೆಯ ಕಾಷ್ಟಶಿಲ್ಪ ಕಲಾಕೃತಿ ಸಹಿತ ಗೌರವಾರ್ಪಣೆಗೈದು ಅಭಿವಂದಿಸಿದರು.
ಡಾ| ಎಂ. ಮೋಹನ ಆಳ್ವ ಶ್ರೀಗಳನ್ನು ಸ್ವಾಗತಿಸಿದರು. ವಿದ್ವಾನ್ ವಿನಾಯಕ ಭಟ್ ಗಾಳಿಮನೆ ಅವರು ಬಿನ್ನವತ್ತಳೆ ವಾಚಿಸಿದರು. ಆಳ್ವಾಸ್ ವಿದ್ಯಾರ್ಥಿನಿಯರಿಂದ ಶ್ರೀ ಭಾರತೀತೀರ್ಥ ಸ್ವಾಮೀಜಿ ವಿರಚಿತ ಸ್ತೋತ್ರಗಳನ್ನು ಪ್ರಸ್ತುತಪಡಿಸಿದರು. ಕಾಂಚನ ಸೋದರಿಯರಾದ ವಿ. ಶ್ರೀರಂಜನಿ ಮತ್ತು ವಿ. ಶ್ರುತಿ ರಂಜನಿ ಬಳಗದವರು ಸ್ತೋತ್ರ ಸಂಗೀತ ಸುಧಾ ಭಕ್ತಿ ಸಂಗೀತ ನಡೆಸಿಕೊಟ್ಟರು.ಸ್ವಾಮೀಜಿಯವರ ಆಪ್ತ ಸಹಾಯಕ ಕೃಷ್ಣಮೂರ್ತಿ, ಮೊಕ್ಕಾಂ ಪ್ರಭಾರಿ ತ್ಯಾಗರಾಜನ್, ಪ್ರಧಾನ ಪುರೋಹಿತ ಕೃಷ್ಣ ಭಟ್, ಕೋಟೆಕಾರು ಶೃಂಗೇರಿ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಸಹಿತ ಸುಮಾರು 60 ಮಂದಿ ಪರಿವಾರದಲ್ಲಿದ್ದರು.
ಕೆ.ವಿ. ರಮಣ್ ನಿರೂಪಿಸಿದರು. ಶ್ರೀಪತಿ ಭಟ್ ವಂದಿಸಿದರು.ತಮಿಳ್ನಾಡು, ಕೇರಳ ರಾಜ್ಯಗಳಲ್ಲಿ ಮೊಕ್ಕಾಂ ಹೂಡಿ ಮೂಡಬಿದಿರೆಗೆ ಆಗಮಿಸಿ ಶುಕ್ರವಾರ ಪೌರಸಮ್ಮಾನ ಸ್ವೀಕರಿಸಿದ ಯತಿದ್ವಯರು ಅಪರಾಹ್ನ ಶೃಂಗೇರಿಗೆ ಪಯಣ ಬೆಳೆಸಿದರು.