Advertisement

ಮೂಡಬಿದಿರೆ: ಗೊಂದಲದ ಗೂಡಾಗಿದೆ ಪಾರ್ಕಿಂಗ್‌ ವ್ಯವಸ್ಥೆ 

10:44 AM Aug 30, 2018 | Team Udayavani |

ಮೂಡಬಿದಿರೆ: ಮೇಲ್ನೋಟಕ್ಕೆ ವಿಶಾಲವಾಗಿ ಕಾಣುವ ಮೂಡಬಿದಿರೆ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಪಾರ್ಕಿಂಗ್‌ ವ್ಯವಸ್ಥೆಯೇ ಗೊಂದಲಗಳ ಗೂಡಾಗಿದೆ. ಮಂಗಳೂರು, ಕಾರ್ಕಳ, ಬೆಳ್ತಂಗಡಿಯ ಬಸ್‌ಗಳಿಗೆ ಹೊರತುಪಡಿಸಿ ಉಳಿದ ಬಸ್‌ ಗಳ ನಿಲ್ದಾಣಕ್ಕೆ ಸರಿಯಾದ ಜಾಗವೇ ಇಲ್ಲದಂತಾಗಿದೆ. ಏಕಕಾಲಕ್ಕೆ 30ರಿಂದ 50 ಬಸ್‌ಗಳು ನಿಲ್ಲಬಹುದಾದಷ್ಟು ಸ್ಥಳ ಇಲ್ಲಿದ್ದರೂ ಈಗ ಕೇವಲ 15 ಬಸ್‌ಗಳು ಮಾತ್ರ ನಿಲ್ಲಬಹುದಾದ ಪರಿಸ್ಥಿತಿ ಇದೆ.

Advertisement

ರಸ್ತೆಯಲ್ಲೇ ಪಾರ್ಕಿಂಗ್‌
ಬಸ್‌ನಿಲ್ದಾಣದ ದಕ್ಷಿಣದಲ್ಲಿರುವ ಪುರಸಭಾ ವಾಣಿಜ್ಯ ಸಂಕೀರ್ಣದ 2 ಅಂತಸ್ತು ಮತ್ತು ಪೂರ್ವದಲ್ಲಿರುವ ಖಾಸಗಿ ವಾಣಿಜ್ಯ ಸಂಕೀರ್ಣಗಳಲ್ಲಿ ಈಗಾಗಲೇ 150 ವರ್ತಕರ ಅಂಗಡಿಗಳಿವೆ. ಈ ಎಲ್ಲ ಅಂಗಡಿಗಳ ಮಾಲಕರು, ಕೆಲಸಗಾರರ ವಾಹನಗಳು, ಅಂಗಡಿಗಳಿಗೆ ಬರುವ ಗ್ರಾಹಕರ ವಾಹನಗಳ ನಿಲುಗಡೆಗೆ ಸೂಕ್ತ ಜಾಗಕ್ಕೆ ಅವಕಾಶ ಕಲ್ಪಿಸದೆ ಇರುವುದರಿಂದ ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಮನವಿಗೂ ಸ್ಪಂದನೆಯಿಲ್ಲ
ಈ ಬಗ್ಗೆ ಸಾಕಷ್ಟು ಬಾರಿ ವರ್ತಕರಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ನಿಗದಿಪಡಿಸಿ, ಪೇ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಅಳವಡಿಸಿ ಪುರಸಭೆ ಸಮಸ್ಯೆ ನಿವಾರಿಸಲು ಮುಂದಾದರೂ ಅದರ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಬಿ.ಸಿ.ರೋಡ್‌, ನಾರಾವಿ, ಮಿತ್ತಬೈಲು, ಶಿರ್ತಾಡಿ ಹೀಗೆ ಗ್ರಾಮಾಂತರ ಪರಿಸರದ ಬಸ್ಸುಗಳ ನಿಲುಗಡೆಯಾಗುವಲ್ಲಿ ಇತರೆ ಖಾಸಗಿ ವಾಹನಗಳು ಸ್ಥಳ ಆಕ್ರಮಿಸಿಕೊಳ್ಳುತ್ತಿವೆ. 

ಪರಿಹಾರ ಹೇಗೆ?
ಮುಖ್ಯರಸ್ತೆಯಿಂದ ಎತ್ತರದಲ್ಲಿ ರುವ ಬಸ್‌ ನಿಲ್ದಾಣವನ್ನು ಸಮತಟ್ಟುಗೊಳಿಸಿ ಅಂಡರ್‌ ಗ್ರೌಂಡ್‌ ಪಾರ್ಕಿಂಗ್‌ ಯೋಜನೆ ಜಾರಿಗೊಳಿಸಲು ಸಾಧ್ಯವಾದರೆ ಪುರಸಭೆಗೂ ಆದಾಯ ಹೆಚ್ಚಲಿದೆ. ಹೆಚ್ಚುವರಿ ಸ್ಥಳಾವಕಾಶವೂ ದೊರೆಯಲಿದೆ. ಲಂಬಕೋನದಲ್ಲಿ ಬಸ್‌ ನಿಲ್ದಾಣವನ್ನು ಪ್ರವೇಶಿಸುವ ಅಪಾಯಕಾರಿ ಸನ್ನಿವೇಶವನ್ನು ನಿವಾರಿಸಿ ಪಿಡಬ್ಲ್ಯುಡಿ ಯಿಂದ ಇದೊಂದು ಕಾನೂನುಬದ್ಧ ಬಸ್‌ನಿಲ್ದಾಣವೆಂಬ  ಸಿರುನಿಶಾನೆ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಪುರಸಭೆ ಸಹಿತ ಸಂಬಂಧ ಪಟ್ಟವರೆಲ್ಲ ಯೋಜಿತ ಕ್ರಮ ಕೈಗೊಳ್ಳಲೇಬೇಕಾಗಿದೆ.

ಶೀಘ್ರ ಪರಿಹಾರ
ಕೆಳಗಡೆ ನಿರ್ಮಾಣವಾಗುತ್ತಿರುವ ಮಾರುಕಟ್ಟೆಯ ತಳ ಅಂತಸ್ತುಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ಕೆಲವೇ ತಿಂಗಳಲ್ಲಿ ಅಲ್ಲಿ ಪಾರ್ಕಿಂಗ್‌ಗೆ ಅವಕಾಶವಾಗಲಿದೆ. ತನ್ಮೂಲಕ ಬಸ್‌ನಿಲ್ದಾಣ ಮಾತ್ರವಲ್ಲ ಪೇಟೆಯನ್ನು ಕಾಡುತ್ತಿರುವ ಪಾರ್ಕಿಂಗ್‌ ಸಮಸ್ಯೆಗೆ ಪರಿಹಾರ ಸಿಗಲಿದೆ.
 - ಶೀನಾ ನಾಯ್ಕ ಪುರಸಭಾ ಮುಖ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next