Advertisement

ಮೂಡಬಿದಿರೆ: ಗೂಡುದೀಪ ಸ್ಪರ್ಧಾ ಸಂಭ್ರಮೋತ್ಸವ 

12:33 PM Oct 19, 2017 | Team Udayavani |

ಮೂಡಬಿದಿರೆ: ಸಪಲಿಗರ ಯಾನೆ ಗಾಣಿಗರ ಸಂಘದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಮೂಡಬಿದಿರೆಯ ಬೆಟ್ಕೇರಿ ಫ್ರೆಂಡ್ಸ್‌, ತುಳು ಕೂಟ ಬೆದ್ರ ಇವುಗಳ ಸಹಭಾಗಿತ್ವದಲ್ಲಿ ಸಮಾಜ ಮಂದಿರದಲ್ಲಿ ದೀಪಾವಳಿ ಪ್ರಯುಕ್ತ ರವಿವಾರ ಏರ್ಪಡಿಸಿದ್ದ ಹತ್ತನೇ ವರ್ಷದ ಗೂಡುದೀಪ ಸ್ಪರ್ಧಾ ಸಂಭ್ರಮೋತ್ಸವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಬಂದ 113 ಪ್ರವೇಶಿಕೆಗಳು ಗಮನ ಸೆಳೆಯುವಂತಿದ್ದವು.

Advertisement

ಟೂತ್‌ಪೇಸ್ಟ್‌ ಟ್ಯೂಬು, ಮುಚ್ಚಳಗಳನ್ನು ಬಳಸಿ 8 ತಿಂಗಳ ಪರಿಶ್ರಮದಿಂದ ಮಂಗಳೂರು ರಥಬೀದಿಯ ವಿಠಲ್‌ ಭಟ್‌ ಅವರು ನಿರ್ಮಿಸಿದ ಗೂಡುದೀಪದಲ್ಲಿ ದೊಡ್ಡ ಗಾತ್ರದ 912, ಸಣ್ಣ ಗಾತ್ರದದ 1455 ಹೀಗೆ ಒಟ್ಟು 2, 367 ಟ್ಯೂಬ್‌ ಗಳು ಬಳಕೆಯಾಗಿದ್ದು ಕಸದಿಂದ ರಸ ಎಂಬ ಶೀರ್ಷಿಕೆಗೆ ಸೂಕ್ತವಾಗಿ ಕಂಡಿತು. ರಥಬೀದಿಯ ಇನ್ನೋರ್ವ ಯುವಕ ಆದಿತ್ಯ 8000 ಪೇಪರ್‌ ಕೋನ್‌ಗಳನ್ನೇ ಕಲಾತ್ಮಕವಾಗಿ ಜೋಡಿಸಿ ನಿರ್ಮಿಸಿದ ಗೂಡುದೀಪ 6 ತಿಂಗಳ ಪರಿಶ್ರಮ ಬೇಕಿತ್ತಂತೆ. ಕೋಡಿಕಲ್‌ನ ಹೇಮಂತ ಅವರು 16 ಕೆಜಿ ನೆಲಕಡ್ಲೆ ಬಳಸಿ, ಕಬ್ಬಿಣದ ಗೂಡಿಗೆ ಅಂಟಿಸಿ ಮಾಡಿದ ಗೂಡುದೀಪ ಈ ಮಾಧ್ಯಮದಲ್ಲಿ ಅವರದು ಮೊದಲ ಪ್ರಯತ್ನ. ಅರ್ಧ ಇಂಚಿನ ಪಿವಿಸಿ ಪೈಪ್‌ಗ್ಳನ್ನು ಕತ್ತರಿಸಿ ಜೋಡಿಸಿ ಕಟ್ಟಿದ ಗೂಡುದೀಪ, ಗುರುಪುರದ ಪ್ರಶಾಂತ್‌ 7,500 ಪ್ಲಾಸ್ಟಿಕ್‌ ಚಮಚಗಳನ್ನೇ ಬಳಸಿ ರೂಪಿಸಿದ ಗೂಡುದೀಪ ಆಕರ್ಷಕವಾಗಿದ್ದವು. ತೊಕ್ಕೊಟ್ಟಿನ ಸುಧೀರ್‌ ಅವರು 450 ವಿವಿಧ ಬಣ್ಣಗಳ ಪೆನ್ಸಿಲ್‌ಗ‌ಳನ್ನು ಕಟ್ಟರ್‌ನಿಂದ ಹೆರೆದು ರೂಪಿಸಿದ ಗೂಡುದೀಪದಲ್ಲಿ ಕಬ್ಬಿಣದ ತಂತಿಗೆ ಅಂಟಿಸಿದ ಬಾಲಗಳನ್ನು ಜೋಡಿಸಿದ ನಾಜೂಕುತನ ನಿಜಕ್ಕೂ ವೀಕ್ಷಕರನ್ನು ನಿಬ್ಬೆರಗಾಗಿಸುವಂತಿತ್ತು. ಇನ್ನೊಂದೆಡೆ ಧಾನ್ಯ, ನೈಸರ್ಗಿಕ ಕಲ್ಲುಗಳನ್ನು ಬಳಸಿ ಮಾಡಿದ ಗೂಡುದೀಪ, ಅರಳು ಬಳಸಿಮಾಡಿದ ಗೂಡುದೀಪ, ಪೇಪರ್‌ ಲೋಟಗಳನ್ನೇ ಜೋಡಿಸಿ ಮಾಡಿದ ಗೂಡುದೀಪ ಹೀಗೆ ಆಧುನಿಕ, ಪ್ರತಿಕೃತಿ ವಿಭಾಗಗಳಲ್ಲಿ ಹಲವಾರು ಹೊಸ ಹೊಸ
ಬಗೆಯ ಗೂಡುದೀಪಗಳು ನಿರ್ಮಾಪಕರ ಕರಕೌಶಲ್ಯಕ್ಕೆ ಸಾಕ್ಷಿಯಾಗಿದ್ದವು.

ವಿಜೇತರು
ಸಾಂಪ್ರದಾಯಿಕ ವಿಭಾಗದಲ್ಲಿ ರಕ್ಷಿತ್‌ ಕುಮಾರ್‌ ಚಿನ್ನದ ಪದಕ, ಮಂಗಳೂರಿನ ವಿಖ್ಯಾತ್‌ ಭಟ್‌ ರಜತ ಪದಕ, ಅಧುನಿಕ ವಿಭಾಗದಲ್ಲಿ ರಾಜೇಶ್‌ ಚಿಲಿಂಬಿ ಚಿನ್ನ, ವಿಠಲ್‌ ಭಟ್‌ ರಜತ, ಪ್ರತಿಕೃತಿ ವಿಭಾಗದಲ್ಲಿ  ಬೆಟ್ಕೇರಿಯ ನಿಧಿ ಚಿನ್ನ, ಪ್ರವೀಣ್‌ ಅಲಂಗಾರ್‌ ರಜತ ಪದಕ ಗಳಿಸಿದರು. ಎಲ್ಲ ಪ್ರವೇಶಿಕೆಗಳಿಗೆ ಸ್ಮರಣಿಕೆಯಾಗಿ ಲೋಹದ ಹಣತೆ ನೀಡಿ ಪುರಸ್ಕರಿಸಲಾಯಿತು. ಅಮೋಲ್‌ ಅದೃಷ್ಟಶಾಲಿಯಾಗಿ ಸ್ಟೀಲ್‌ ಕಪಾಟು ಬಹುಮಾನ ಗೆದ್ದರು.

ಸಮಾರೋಪ ಸಮಾರಂಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮಂಗಳೂರು ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ, ಸಪಲಿಗರ ಸಂಘದ ಅಧ್ಯಕ್ಷ ಪ್ರತಾಪ್‌ ಬೆಟ್ಕೇರಿ, ತುಳುಕೂಟ ಬೆದ್ರದ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಬಹುಮಾನ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next