Advertisement

ಮೂಡುಬಿದಿರೆ, ಮೂಲ್ಕಿ: ಶಾಂತಿಯುತ ಮತದಾನ

11:15 PM May 29, 2019 | Sriram |

ಮೂಡುಬಿದಿರೆ: ಮೂಡುಬಿದಿರೆ ಪುರಸಭೆ ಹಾಗೂ ಮೂಲ್ಕಿ ನಗರ ಪಂಚಾಯತ್‌ ಆಡಳಿತಕ್ಕಾಗಿ ಬುಧವಾರ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.

Advertisement

ಮೂಡುಬಿದಿರೆ ಜೈನ ಪೇಟೆ ವಾರ್ಡ್‌ 9ರ ಮತಗಟ್ಟೆ ವ್ಯವಸ್ಥೆ ಗೊಳಿಸಲಾಗಿದ್ದ ಡಿಜೆ ಶಾಲೆಯಲ್ಲಿ ಆರಂಭದಲ್ಲೇ ಮತ ಯಂತ್ರ ದೋಷದಿಂದಾಗಿ ಸುಮಾರು 15- 20 ನಿಮಿಷ ವಿಳಂಬವಾಗಿ ಮತದಾನ ಪ್ರಕ್ರಿಯೆ ಆರಂಭಗೊಂಡಿತ್ತು.

ಸಮಯಕ್ಕೆ ಸರಿಯಾಗಿ ಆಗಮಿಸಿದ್ದ ಮಾಜಿ ಸಚಿವ ಕೆ. ಅಭಯಚಂದ್ರ, ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ, ಈ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳೂ ಮತದಾನಕ್ಕಾಗಿ ಕಾದುನಿಲ್ಲಬೇಕಾಯಿತು. ಕೊನೆಗೂ ಮತಯಂತ್ರ ಸರಿಪಡಿಸಿದ ಬಳಿಕ ಮತದಾನ ಪ್ರಾರಂಭವಾಯಿತು. ಬೆಳಂಬೆಳಗ್ಗೆ ಮೋಡ ಕವಿದ ವಾತಾ ವರಣವಿದ್ದು ಮತದಾನವೂ ಕೆಲಕಾಲ ಮಂಕಾಗಿದ್ದಂತೆ ಕಂಡಿತು.

ರೇಂಜ್‌ ಫಾರೆಸ್ಟ್‌ ಆಫೀಸ್‌ ವಲಯ ವಾರ್ಡ್‌ 13ರ ಹೋಲಿ ರೋಸರಿ ಪ್ರೌಢಶಾಲೆ ಮತದಾನ ಕೇಂದ್ರದಲ್ಲಿ ಮಧ್ಯಾಹ್ನ 12 ಗಂಟೆಗೆ ಅಟೋದಲ್ಲಿ ಆಗಮಿಸಿದ ಎರಡೂ ಕಾಲು ನೋವಿನ ರೋಸ್ಲಿನ್‌ ಅವರನ್ನು ಮತಯಂತ್ರದತ್ತ ಒಯ್ಯಲು ಗಾಲಿ ಕುರ್ಚಿ ವ್ಯವಸ್ಥೆ ಇರಲಿಲ್ಲ.

ಅಕೆಯನ್ನು ಕರೆದುಕೊಂಡು ಬಂದವರು ಈ ಬಗ್ಗೆ ಮತದಾನ ಕೇಂದ್ರದ ಅಧಿಕಾರಿಗಳಲ್ಲಿ ವಿಚಾರಿಸಿ ದಾಗ ‘ಎಲ್ಲ ಕಡೆ ವೀಲ್ ಚೇರ್‌ ಇದೆ, ಇಲ್ಲಿ ಬಂದಿಲ್ಲ, ತರಿಸುತ್ತೇವೆ’ ಎಂದರು.

Advertisement

ಬಳಿಕ ಎಲ್ಲೆಲ್ಲೋ ಪೋನ್‌ ಮಾಡಿ ದದ್ದೂ ಆಯಿತು. ಅಂತೂ ಇಂತೂ ‘ಪಿಎಚ್ಸಿ ಶಿರ್ತಾಡಿ’ ಎಂದು ಚೀಟಿ ಅಂಟಿಸಿದ್ದ ಗಾಲಿ ಕುರ್ಚಿಯನ್ನು ತರಿಸಲಾಯಿತು. ಅಷ್ಟೂ ಹೊತ್ತು ಈ ಮಹಿಳೆ ರಿಕ್ಷಾವನ್ನು ಬಾಡಿಗೆ ತೆತ್ತು ನಿಲ್ಲಿಸಿದ್ದರು. ಮುಂಜಾನೆ ಕೊಂಚ ಬಿರುಸಾಗಿ ನಡೆದ ಮತದಾನ ಪ್ರಕ್ರಿಯೆ ಮಧ್ಯಾ ಹ್ನದ ವೇಳೆಗೆ ಕೊಂಚ ನಿಧಾನಗತಿ ತಲುಪಿದ್ದು ಸಂಜೆ ವೇಳೆಗೆ ಮತ್ತೆ ಚುರುಕುಕೊಂಡಿತು.

ನಗರ ಪ್ರದೇಶದಲ್ಲಿ ಕೆಲವೆಡೆ ಶೇ. 50ರಿಂದ 60ರಷ್ಟು ಮತದಾನ ವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ಬಿಸಿಲ ಬೇಗೆ ತೀವ್ರವಾಗಿದ್ದ ಕಾರಣ ಹೆಚ್ಚಿನವರು, ಮಹಿಳೆಯರು, ವೃದ್ಧರು ಅಟೋ ರಿಕ್ಷಾಗಳಲ್ಲೇ ಬರ ಬೇಕಾಯಿತು. ಹೆಚ್ಚಿನ ಕಡೆಗಳಲ್ಲಿ ಅಭ್ಯರ್ಥಿಗಳ ಬೂತ್‌ಗಳು ಪರಸ್ಪರ ತೀರಾ ಸನಿಹದಲ್ಲಿದ್ದವು.

ಮಾತಿನ ಚಕಮಕಿ
ಜೈನ ಪ.ಪೂ. ಕಾಲೇಜಿನ ಮತಗಟ್ಟೆ ಯಲ್ಲಿ ಮತದಾರರ ಕೈ ಹಿಡಿದುಕೊಂಡು ಬರುತ್ತಿರುವ ಪ್ರಕರಣ ದಲ್ಲಿ ಎಸ್‌ಡಿಪಿಐ ಮತ್ತು ಸಿಪಿಎಂ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ತಣ್ಣಗಾಯಿತು.

ಮತಗಟ್ಟೆಯ ಬಳಿ ಹಾಕಲಾದ ‘ಬಿಳಿ ಬಣ್ಣದ ಲಕ್ಷಣ ರೇಖೆ’ ದಾಟಿ ಮತ ದಾರರು ತಮ್ಮ ವಾಹನದಲ್ಲಿ ಬರುತ್ತಿದ್ದ ಅನೇಕ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದು ಹಿಂದೆ ಕಳುಹಿಸಿದ್ದು ಕಂಡುಬಂದಿದೆ.

ಬಿಗಿ ಬಂದೋಬಸ್ತ್
ಪಿಎಸ್‌ಐ ಸಾವಿತ್ರಿ ನೇತೃತ್ವದಲ್ಲಿ 50 ಮಂದಿ ಪೊಲೀಸ್‌ ಸಿಬಂದಿ, ಮೀಸಲು ಪಡೆಯ 1 ಘಟಕ, ಡಿ. ಆರ್‌. ಪೊಲೀಸರು ಹಾಗೂ 20ರಷ್ಟು ಗೃಹರಕ್ಷಕದಳದವರ ಸಹಕಾರದಲ್ಲಿ ಬಂದೋಬಸ್ತ್ ಯಶಸ್ವಿಯಾಗಿ ನೆರವೇರಿದೆ. ಮತ ಎಣಿಕೆ ಮೇ 31ರಂದು ಶ್ರೀ ಮಹಾವೀರ ಕಾಲೇಜಿನಲ್ಲಿ ಜರಗಲಿದೆ.

ಒಂದೇ ಶಾಲೆಯಲ್ಲಿ 7 ಮತ ಗಟ್ಟೆ
ಮೂಲ್ಕಿ: ನಗರ ಪಂಚಾಯತ್‌ ಆಡಳಿತಕ್ಕಾಗಿ ಬುಧವಾರ ನಡೆದ ಮತದಾನ ಪ್ರಕ್ರಿಯೆ ನಗರದ 18 ವಾರ್ಡ್‌ಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯವರೆಗೆ ನಡೆದಿದೆ. ಬಳಿಕ ಮತ ಪೆಟ್ಟಿಗೆಗಳನ್ನು ಭದ್ರವಾಗಿ ಸಮುದಾಯ ಭವನದಲ್ಲಿ ಸ್ಥಾಪಿಸಲಾದ ಸ್ಟ್ರಾಂಗ್‌ ರೂಮ್‌ನಲ್ಲಿ ಇರಿಸಲಾಯಿತು.

ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಬಪ್ಪನಾಡು, ಚಿತ್ರಾಪು, ಮಾನಂಪಾಡಿ ಹಾಗೂ ಕಾರ್ನಾಡು ಗ್ರಾಮದ ವ್ಯಾಪ್ತಿಯಲ್ಲಿ ಒಟ್ಟು ಸದಸ್ಯರ ಆಯ್ಕೆಗೆ ಅವಕಾಶ 18 ಸ್ಥಾನಗಳಾದರೆ ಕಾರ್ನಾಡು ಗ್ರಾಮದ ಒಂದು ಮೂಲೆಯಲ್ಲಿ ಇರುವ ಕಾರ್ನಾಡು ಸದಾಶಿವ ರಾವ್‌ ನಗರದ ಶಾಲಾ ವಠಾರದಲ್ಲಿ 7 ಮತ ಗಟ್ಟೆಗಳು ಈ ಶಾಲೆಯಲ್ಲಿ ಇತ್ತು. ಕಾರಣ ಇಲ್ಲಿರುವ ಜನ ಸಂಖ್ಯೆಯ ಪ್ರಮಾಣವಾಗಿದೆ.

10 ಸ್ಥಳಗಳಲ್ಲಿ 18 ಮತಗಟ್ಟೆಗಳು
ವಾರ್ಡ್‌ 1 ಮತ್ತು 2 ಬೋರ್ಡ್‌ ಶಾಲೆ, ವಾರ್ಡ್‌ 3 ವಿಜಯ ಕಾಲೇಜು, ವಾರ್ಡ್‌ 4 ಮಾನಂಪಾಡಿ ಶಾಲೆ, ವಾರ್ಡ್‌ 5 ಮೆಡಲಿನ್‌ ಶಾಲೆ, ವಾರ್ಡ್‌ 6 ನಾರಾಯಣ ಗುರು ಆಂಗ್ಲಮಾಧ್ಯಮ ಶಾಲೆ, ವಾರ್ಡ್‌ 8 ಕೊಳಚಿಕಂಬಳ ಅಂಗನ ವಾಡಿ ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು.

ಮೂಲ್ಕಿಯ ವಾರ್ಡ್‌ 8 ಕಾರ್ನಾಡು ಸಿ.ಎಸ್‌.ಐ. ಶಾಲೆ, ವಾರ್ಡ್‌ 9 ಮತ್ತು 10 ಸರಕಾರಿ ಪ್ರೌಢಶಾಲೆ ಮೂಲ್ಕಿ, ವಾರ್ಡ್‌ 10 ರಿಂದ 17 ಕಾರ್ನಾಡು ಸದಾಶಿವ ರಾವ್‌ ನಗರ ಶಾಲಾ ವಠಾರ, ವಾರ್ಡ್‌ 18 ಚಿತ್ರಾಪು ಶಾಲೆ ಹೀಗೆ 10 ಕಡೆಗಳಲ್ಲಿ 18 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಬಿಗಿ ಪೊಲೀಸ್‌ ಭದ್ರತೆ
ಮಂಗಳೂರು ಟ್ರಾಫಿಕ್‌ ಎ.ಸಿ.ಪಿ. ಮಂಜುನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ ಸತೀಶ್‌ ಜಿ. ಅವರ ಉಸ್ತುವಾರಿಯಲ್ಲಿ ಪಣಂಬೂರು, ಸುರತ್ಕಲ್ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬಂದಿ ಮತ್ತು ಒಂದು ತುಕಡಿ ಸಿ.ಎ.ಆರ್‌. ಪೊಲೀಸರ ತಂಡ ಬಿಗಿ ಭದ್ರತೆ ವ್ಯವಸ್ಥೆ ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡರು.

ನಗರ ಪಂಚಾಯತ್‌ ವ್ಯಾಪ್ತಿಯ 18 ವಾರ್ಡ್‌ಗಳಲ್ಲಿ ಏಕ ಕಾಲದಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ ನಡೆದಿದೆ ಎಂದು ಮೂಲ್ಕಿ ತಹಶೀಲ್ದಾರ್‌ ಅವರು ತಿಳಿಸಿದ್ದಾರೆ.

ನಾಳೆ ಫಲಿತಾಂಶ
ಮೇ 31ರಂದು ಸುಮಾರು 11 ಗಂಟೆ ವೇಳೆಗೆ ಹೆಚ್ಚಿನ ಎಲ್ಲ ಫಲಿತಾಂಶ ಹೊರಬರುವ ಸಾಧ್ಯತೆ ಇದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next