Advertisement

ಕಾನೂನಿನ ಅರಿವು ಮೂಡಿದಾಗ ಅಪರಾಧ ಪ್ರಮಾಣ ಕಡಿಮೆ: ನ್ಯಾಯಾಧೀಶ ಮಲ್ಲನಗೌಡ

12:46 PM May 30, 2018 | |

ಮೂಡಬಿದಿರೆ: ಜನಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿ ಅಪರಾಧ ಕೃತ್ಯಗಳು ಕಡಿಮೆಯಾಗುವಲ್ಲಿ ಕಾನೂನು ಸಾಕ್ಷರತಾ ರಥವು ಸಹಕಾರಿಯಾಗಿದೆ ಎಂದು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಮಲ್ಲನಗೌಡ ಪಾಟೀಲ್‌ ಹೇಳಿದರು.

Advertisement

ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ಮೂಡಬಿದಿರೆಯ ವಕೀಲರ ಸಂಘ, ರೋಟರಿ ಕ್ಲಬ್‌ ಮತ್ತು ಶ್ರೀ ಮಹಾವೀರ ಕಾಲೇಜು ಇವುಗಳ ಸಹಭಾಗಿತ್ವದಲ್ಲಿ ಮೂಡಬಿದಿರೆ ಹೋಬಳಿ ಮಟ್ಟದಲ್ಲಿ ನಡೆದ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಕಾನೂನು ಅರಿವು ಕಾರ್ಯಕ್ರಮವನ್ನು ಮೂಡಬಿದಿರೆ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೂಡಬಿದಿರೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಯಶವಂತ ಕುಮಾರ್‌ ಆರ್‌. ಮುಖ್ಯ ಅತಿಥಿಯಾಗಿದ್ದರು. ‘ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೂ ಹಲವಾರು ಕಾನೂನುಗಳ ಅವಶ್ಯಕತೆಯಿದೆ. ಸಮಾಜದಲ್ಲಿರುವ ಶೇ. 67 ಜನರ ಬೇರೆ ಬೇರೆ ರೀತಿಯ ಮನೋಭಾವದಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸಮಾಜದಲ್ಲಿರುವ ಜನರು ಸುಭದ್ರವಾಗಿ, ಸಂತೋಷವಾಗಿ ಜೀವನ ನಡೆಸಲು ಕಾನೂನಿನ ಅರಿವು ಮುಖ್ಯವಾಗಿದೆ ಎಂದರು.

ಮೂಡಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ.ಬಾಹುಬಲಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರಕಾರಿ ಅಭಿಯೋಜಕ ದೇವೇಂದ್ರ ಎನ್‌.ಪಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಪೋಕ್ಸೊ  ಕಾಯಿದೆ’ಯ ಬಗ್ಗೆ ಮಾತನಾಡಿದರು.

ಮಕ್ಕಳು ಹಲವಾರು ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಅವುಗಳಲ್ಲಿ ಲೈಂಗಿಕ ದೌರ್ಜನ್ಯವೂ ಒಂದಾಗಿದ್ದು ಇಂತಹ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಕಾಯ್ದೆಗಳ ಅಗತ್ಯವಿದೆ ಎಂದರು. ವಕೀಲರಾದ ಎಂ.ಎಸ್‌. ತಂತ್ರಿ ಸ್ವಾಗತಿಸಿ, ವೀಣಾ ಭಟ್‌ ನಿರೂಪಿಸಿದರು. ಹರೀಶ್‌ ಪಿ.ವಂದಿಸಿದರು. ಬಳಿಕ, ಸಮಾಜಮಂದಿರ ಹಾಗೂ ಶ್ರೀ ಮಹಾವೀರ ಕಾಲೇಜಿನಲ್ಲೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಸಾಕ್ಷರತೆಗೊಂದು ಸವಾಲು : ‘ಸಾಕ್ಷಾರತಾ ರಥ’ದ ಆಮಂತ್ರಣ!
ಸಾಕ್ಷರತೆ ಯಾರಿಗೂ ಎಷ್ಟಿದ್ದರೂ ಸಾಲದು ಎಂಬುದಕ್ಕೆ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ ಕಾನೂನು ಅರಿವು ಕಾರ್ಯಕ್ರಮ ಕುರಿತಾದ ಆಮಂತ್ರಣ ಪತ್ರವೇ ಸಾಕ್ಷಿಯಾಗಿದೆ. ಕಾನೂನು ಸಾಕ್ಷರತಾ ರಥ ಎಂದಿರಬೇಕಾದಲ್ಲಿ ಕಾನೂನು ‘ಸಾಕ್ಷಾರತಾ ರಥ ‘ ಎಂದೇ ಮುದ್ರಣವಾಗಿದೆ. ಮುದ್ರಣದಲ್ಲಿ ಮುದ್ರಾರಾಕ್ಷಸನ ಹಾವಳಿ ಇರಬಹುದಾದರೂ ಆ ಮುದ್ರಾರಾಕ್ಷಸನ ಕಿವಿಹಿಂಡಿ ಆಮಂತ್ರಣ ಪತ್ರದಲ್ಲಾದ ಮುದ್ರಣದೋಷವನ್ನು ಕೈಬರೆಹದಲ್ಲಾದರೂ ಸರಿಪಡಿಸಿ ವಿತರಿಸಬಹುದಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next