Advertisement

ಮೂಡಂಬೈಲು: ಕನ್ನಡಿಗರ ಪ್ರತಿಭಟನೆ

11:02 PM Oct 28, 2019 | Sriram |

ಮಂಜೇಶ್ವರ: ಬೇಕಲ, ಉದುಮ ಇದೀಗ ಮೂಡಂಬೈಲು ಶಾಲೆಗೆ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಅರಿಯದ ಮಲಯಾಳ ಅಧ್ಯಾಪಕರನ್ನು ನೇಮಿಸುವ ಮೂಲಕ ಮತ್ತೆ ಕನ್ನಡಿಗರಿಗೆ ಕೊಡಲಿಯೇಟು ನೀಡಿದೆ.

Advertisement

ಮೀಂಜ ಪಂಚಾಯತ್‌ನ ಅಚ್ಚಗನ್ನಡ ಪ್ರದೇಶವಾದ ಮೂಡಂಬೈಲು ಸರಕಾರಿ ಶಾಲೆಯಲ್ಲಿ ಹೈಸ್ಕೂಲ್‌ ವಿಭಾಗ ಎಚ್‌.ಎಸ್‌.ಟಿ. (ಫಿಸಿಕಲ್‌ ಸಯನ್ಸ್‌) ಕನ್ನಡ ಹುದ್ದೆಗೆ ಕನ್ನಡ ಅರಿಯದ ಮಲ ಯಾಳಿ ತಿರುವನಂತಪುರದ ಆಟಿಂಗಲ್‌ ಅಲಾಂಕೋಡು ಪೆರುಮಕುಲಂ ಟೊಪ್ಪಿಚಂತದ ಮೊಹಮ್ಮದ್‌ ಶಿಜೀರ್‌ ಎಸ್‌. ನೇಮಕಗೊಂಡಿದ್ದು, ಅ.31 ರೊಳಗೆ ಹಾಜರಾಗುವಂತೆ ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ. ಕನ್ನಡದ ಗಂಧಗಾಳಿ ತಿಳಿಯದ ಅಧ್ಯಾಪಕನನ್ನು ನೇಮಿಸಿದ್ದು, ಇದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಅರಿಯದ ಮಲಯಾಳಿ ಅಧ್ಯಾಪಕರ‌ ನೇಮಕವನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಮುಷ್ಕರ ನಡೆಸಿದರು.

ಕನ್ನಡಿಗರು ನಿರಂತರವಾಗಿ ನಡೆಸುವ ಪ್ರತಿಭಟನೆಗಳನ್ನು ತೃಣ ಸಮಾನವಾಗಿಸಿ ಕೇರಳ ಲೋಕಸೇವಾ ಆಯೋಗ ಮತ್ತೆ ಮತ್ತೆ ಕನ್ನಡಿಗ ವಿದ್ಯಾರ್ಥಿಗಳಿಗೆ ಕನ್ನಡ ಅರಿಯದ ಮಲಯಾಳಿ ಅಧ್ಯಾಪಕರನ್ನು ನೇಮಿಸುವ ಮೂಲಕ ಕನ್ನಡ ವಿರೋಧಿ ಧೋರಣೆಯನ್ನು ತೋರಿದೆ. ಕೆಲವು ದಿನಗಳ ಹಿಂದೆ ಬೇಕಲ, ಉದುಮ ಶಾಲೆಗಳಲ್ಲಿ ಸಮಾಜ ವಿಜ್ಞಾನ ತರಗತಿಗೆ ಕನ್ನಡ ಅರಿಯದ ಮಲಯಾಳಿ ಅಧ್ಯಾಪಕರನ್ನು ನೇಮಿಸಲಾಗಿತ್ತು. ಇದರ ವಿರುದ್ಧ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಇಲ್ಲಿ ನೇಮಕಗೊಂಡಿದ್ದ ಅಧ್ಯಾಪಕರು ರಜೆಯಲ್ಲಿ ತೆರಳಿದ್ದಾರೆ. ಹೀಗಿರುವಂತೆ ಮೂಡಂಬೈಲು ಶಾಲೆಯಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳಿ ಅಧ್ಯಾಪಕರ‌ನ್ನು ನೇಮಿಸಿ ಕನ್ನಡಿಗರನ್ನು ಹತ್ತಿಕ್ಕಲು ಪಿಎಸ್‌ಸಿ ಯತ್ನಿಸುತ್ತಿದೆ.ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಸಹಿತ ಸಮಿತಿ ಪದಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು ಸಭೆಯಲ್ಲಿ ಭಾಗವಹಿಸಿದರು.

ತರಗತಿ,ಬಹಿಷ್ಕಾರ,ಪ್ರತಿಭಟನೆ
ತರಗತಿ ಬಹಿಷ್ಕಾರ, ಪ್ರತಿಭಟನೆ ಮುಂತಾದ ಕಾರ್ಯಗಳ ಸಹಿತ ಸ್ಥಳೀಯ ಕನ್ನಡಿಗರು ಶಾಲೆಯಲ್ಲಿ ಜತೆಗೂಡಿದ್ದಾರೆ. ಕನ್ನಡ ಅರಿಯದ ಮಲಯಾಳಿ ಅಧ್ಯಾಪಕನ ನೇಮಕಾತಿ ಹಿನ್ನೆಲೆಯಲ್ಲಿ ಅಧ್ಯಾಪಕ ಕೆಲಸಕ್ಕೆ ಹಾಜರಾಗುವುದನ್ನು ತಡೆಯುವುದಕ್ಕಾಗಿ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಪದಾಧಿಕಾರಿಗಳು,ಬಿಜೆಪಿ ಮುಖಂಡ ರವೀಶ ತಂತ್ರಿ ಕುಂಟಾರು,ಜಿಲ್ಲಾ ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷದ್‌ ಮೊದಲಾದವರು ಜತೆಯಾಗಿ ಸಭೆ ನಡೆಸಿದ್ದಾರೆ. ಪಿಟಿಎ,ವಿದ್ಯಾರ್ಥಿಗಳು,ಕನ್ನಡಾಭಿಮಾನಿಗಳು ಶಾಲೆಯಲ್ಲಿ ಸೇರಿದ್ದಾರೆ. ಯಾವುದೇ ಕಾರಣಕ್ಕೂ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ತಿಳಿಯದ ಅಧ್ಯಾಪಕ ತರಗತಿ ನಡೆಸಲು ಬಿಡುವುದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಧ್ಯಾಪಕ ಹಾಜರಾಗಲು ಬರುವಾಗ ಪ್ರತಿಭಟನೆ ನಡೆಸುವುದಾಗಿ ಕನ್ನಡಿಗರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next