Advertisement

ಮೂಡಬಿದಿರೆ ಪುರಸಭಾ ಮಾಸಿಕ ಅಧಿವೇಶನ 

01:53 PM Feb 07, 2018 | |

ಮೂಡಬಿದಿರೆ: ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಅನುದಾನದ ಮೊತ್ತ ಬಿಡುಗಡೆಯಾಗದಿರುವುದು ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್‌. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮಾಸಿಕ ಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.

Advertisement

ಪುರಸಭಾ ಕಾಂಗ್ರೆಸ್‌ ಸದಸ್ಯ ಕೊರಗಪ್ಪ ಮಾತನಾಡಿ, ಆಶ್ರಯ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರಕಾರದ ಹಣ ಬಂದಿದೆ; ಕೇಂದ್ರ ಸರಕಾರದ್ದು ಬಂದಿಲ್ಲ. ಕೇಂದ್ರದ ಪಾಲು ಬಿಡುಗಡೆಯಾಗದೇ ಇದ್ದರೆ ನಾಡಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ಸದಸ್ಯ ಎಂ. ಬಾಹುಬಲಿ ಪ್ರಸಾದ್‌, ಇದರಲ್ಲಿ ರಾಜ್ಯ, ಕೇಂದ್ರ ಎಂದು ಪ್ರತ್ಯೇಕಿಸಿ, ಪಕ್ಷ ರಾಜಕೀಯವನ್ನು ಎಳೆದು ತರುವುದು ಸಲ್ಲದು. ಕೈ ಕಟ್ಟಿ ಕುಳಿತರೆ ಹಣ ಬರುತ್ತದಾ? ಏಕೆ ಬಂದಿಲ್ಲ, ಎಲ್ಲಿ ದೋಷವಾಗಿದೆ, ಹೇಗೆ ಸರಿಪಡಿಸಬೇಕು ಎಂದು ಪರಿಶೀಲಿಸಬೇಕು. ಬನ್ನಿ, ಈ ಕುರಿತು ಎಂಪಿ ಜತೆ ಮಾತನಾಡೋಣ, ನಾನೂ ಬರ್ತೇನೆ ಎಂದರು.

ಇದಕ್ಕೆ ಕೊರಗಪ್ಪ ಸಹಿತ ಎಲ್ಲ ಸದಸ್ಯರೂ ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿದರು. ಈ ನಡುವೆ ಮಹಮ್ಮದ್‌ ಹನೀಫ್‌ ಮಾತನಾಡಿ, ಮಾರ್ಚ್‌ 20ರೊಳಗೆ ಎಲೆಕ್ಷನ್‌ ಡಿಕ್ಲೇರ್‌ ಆಗ್ತದೆ, ಮಾಡಿಸುವುದಾದರೆ ಅದರ ಮೊದಲು ಮಾಡಿಸಿ ಎಂದು ತಿಳಿಸಿದರು.

ಇಷ್ಟೆಲ್ಲ ಆದ ಬಳಿಕ ಸಭೆಗೆ ಆಗಮಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಗಿರೀಶ್‌ ಮಾತನಾಡಿ, 2016- 17ರ
ಅರ್ಜಿಗಳಿಗೆ ಸಂಬಂಧಿಸಿದಂತೆ ಆಧಾರ್‌, ಆದಾಯ, ಜಾತಿ ಪ್ರಮಾಣ ಪತ್ರ, ಜಿಪಿಎಸ್‌ ಇವುಗಳನ್ನೆಲ್ಲ ಪರಿಶೀಲಿಸಿ,
ಅನುದಾನ ಬಿಡುಗಡೆ ಮಾಡುವ ಪ್ರಕ್ರಿಯೆ ಕೆಲವು ತಿಂಗಳಿನಿಂದ ನಡೆಯುತ್ತಿದೆ. ಎಲ್ಲವೂ ಸರಿಯಾಗಿರುವ ಅರ್ಜಿಗಳಿಗೆ ಇನ್ನೇನು ಹಣ ಬಿಡುಗಡೆಯಾಗಲಿದೆ. ಆದರೆ, 2015- 16ರ ಅರ್ಜಿಗಳ ಬಗ್ಗೆ ಕೇಂದ್ರದ ಅನುದಾನ ಪ್ರಕ್ರಿಯೆ ನಡೆದಿಲ್ಲ. ಮನೆ ಇದ್ದವರೂ ಅರ್ಜಿ ಸಲ್ಲಿಸಿರುವುದು ಗೋಚರಿಸಿದ್ದು, ಎಲ್ಲ ದಾಖಲೆಗಳನ್ನು ಹೊಂದಿಸಿಕೊಂಡು ನಿಜವಾದ ಫಲಾನುಭವಿಗಳಿಗೆ ಅನುದಾನ ಲಭಿಸುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

Advertisement

ಪಿ.ಕೆ. ಥಾಮಸ್‌ ಮಾತನಾಡಿ, ಎರಡು ವರ್ಷ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಜೋಪಡಿಯಲ್ಲಿರುವವರ
ಸಂಕಷ್ಟಗಳ ಬಗ್ಗೆ ಸುಪ್ರಿಯಾ ಡಿ. ಶೆಟ್ಟಿ ಸಹಿತ ಸದಸ್ಯರು ವಿವರಿಸಿದರು.

ಮಹಾಲಸಾ ನಾರಾಯಣಿ ದೇವಸ್ಥಾನದ ಬಳಿ ಸರಕಾರಿ ಜಾಗದಲ್ಲಿ ಅಂಗಡಿ ಹಾಕಲು ಹೇಗೆ ಅವಕಾಶ ಕೊಡಲಾಗಿದೆ? ಅವರಿಗೆ ವಿದ್ಯುತ್‌ ಸಂಪರ್ಕ ಹೇಗೆ ಸಿಕ್ಕಿತು? ಪುರಸಭಾ ಕಾಯಿದೆಯನ್ನು ಇಲ್ಲಿ ಉಲ್ಲಂಘಿಸಲಾಗಿದೆ ಬಾಹುಬಲಿ ಪ್ರಸಾದ್‌ ದೂರಿದರು.

ಬೇರೆಯವರು ಎಲ್ಲದರೂ ಕಬ್ಬಿನ ಜ್ಯೂಸ್‌ ಅಂಗಡಿ ಹಾಕಿದರೆ ಕೂಡಲೇ ತೆಗೆಸುತ್ತೀರಿ? ಇಲ್ಲೇಕೆ ತಾರತಮ್ಯ? ಎಂದು ಲಕ್ಷ್ಮಣ ಪೂಜಾರಿ ಇದಕ್ಕೆ ಧ್ವನಿಗೂಡಿಸಿದರು. ಪುರಸಭೆಯು ತ್ಯಾಜ್ಯ ತೂಕ ಮಾಡುವ ಯಂತ್ರ ಖರೀದಿಸಲು ನಿರ್ಣಯಿಸಿರುವ ಬಗ್ಗೆ ಕೊರಗಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಯಂತ್ರಕ್ಕೆ ಯಾರು, ಹೇಗೆ ಹೇಸಿಗೆ ವಸ್ತುಗಳನ್ನು ಹಾಕುವುದು? ಕೈಯಲ್ಲಿ ಹಾಕುವುದೇ? ಅದರಲ್ಲಿ ಏನೆಲ್ಲ ಗಲೀಜು ಉಂಟು ಗೊತ್ತಾ? ನೋಡುವಾ ನೀವು ಹಾಕಿ ತೋರಿಸಿ, ನಾನೂ ನೋಡ್ತೇನೆ ಎಂದು ಜೋರಾಗಿ ಕೂಗಾಡಿದಾಗ ಹನೀಫ್‌ ಶೇಮ್‌ ಎಂದರು. ಇದು ಸೆಂಟ್ರಲ್‌ ಸ್ಕೀಂ ಎಂದು ಪರಿಸರ ಅಧಿಕಾರಿ ಶಿಲ್ಪಾ ಸ್ಪಷ್ಟನೆ ನೀಡಿದಾಗ, ಸೆಂಟ್ರಲ್‌ನವರೇ ಬಂದು ಕೈಯಲ್ಲಿ ತ್ಯಾಜ್ಯ ಎತ್ತಿ ಹಾಕಲಿ ಎಂದು ಹನೀಫ್‌ ವ್ಯಂಗ್ಯವಾಡಿದರು.

ಸುರೇಶ್‌ ಕೋಟ್ಯಾನ್‌, ಪ್ರೇಮಾ, ರಮಣಿ, ಪ್ರಸಾದ್‌ ಕುಮಾರ್‌, ದಿನೇಶ್‌ ಕುಮಾರ್‌, ಇಕ್ಬಾಲ್‌ ಕರೀಂ, ಲಕ್ಷ್ಮಣ ಪೂಜಾರಿ, ನಾಗರಾಜ ಪೂಜಾರಿ ಇದ್ದರು. ಉಪಾಧ್ಯಕ್ಷ ವಿನೋದ್‌ ಸೆರಾವೋ, ಅಧ್ಯಕ್ಷ ಅಬ್ದುಲ್‌ ಬಶೀರ್‌, ಅಧಿಕಾರಿಗಳು ಉಪಸ್ಥಿತರಿದ್ದರು .

ನೀರಿನ ಬಿಲ್‌
ನೀರಿನ ಮಿನಿಮಂ ಬಿಲ್‌ ರೂ. 90ಕ್ಕೆ 15,000 ಲೀಟರ್‌ ನೀರು ಎಂದಿರುವುದನ್ನು 20,000ಕ್ಕೆ ಏರಿಸಬೇಕು ಎಂದು ಕೊರಗಪ್ಪ ವಿನಂತಿಸಿದಾಗ ರತ್ನಾಕರ ದೇವಾಡಿಗರು ಅದನ್ನು 25,000ಕ್ಕೆ ಏರಿಸಲು ಸಲಹೆ ಮಾಡಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next