Advertisement

Moodabidri 21ನೇ ಅಂತರ್‌ ಕಾಲೇಜು ಆ್ಯತ್ಲೆಟಿಕ್ಸ್‌ಗೆ ಚಾಲನೆ

11:10 PM Nov 28, 2023 | Team Udayavani |

ಮೂಡುಬಿದಿರೆ: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್‌ ಆಯುರ್ವೇದ ಮೆಡಿಕಲ್‌ ಕಾಲೇಜಿನ ಜಂಟಿ ಆಶ್ರಯದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಪ್ರಾರಂಭವಾದ 3 ದಿನಗಳ ರಾ.ಗಾ.ಆ.ವಿ.ವಿ.ವಿ.ಯ 21ನೇ ಅಂತರ್‌ ಕಾಲೇಜು ವಾರ್ಷಿಕ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ ಅನ್ನು ರಾಷ್ಟ್ರೀಯ ಕ್ರೀಡಾಪಟು, ಒಲಿಂಪಿಯನ್‌ ಎಂ.ಆರ್‌. ಪೂವಮ್ಮ ಉದ್ಘಾಟಿಸಿದರು.

Advertisement

ಆಳ್ವಾಸ್‌ನಲ್ಲಿರುವಾಗ ತನಗೆ ಲಭಿಸಿದ್ದ ಪ್ರೋತ್ಸಾಹ, ಬೆಂಬಲವನ್ನು ಸ್ಮರಿಸಿಕೊಂಡ ಅವರು “ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಸಮರ್ಪಕ ಬೆಂಬಲ ಮತ್ತು ಪ್ರೋತ್ಸಾಹದ ಜತೆಗೆ ಪರಿಶ್ರಮವಿದ್ದಾಗ ಸಾಧನೆಗೆ ಯಾವುದೂ ಅಡ್ಡಿಯಲ್ಲ’ ಎಂದರು.

ರಾ.ಗಾ. ವಿ.ವಿ. ಕುಲಪತಿ ಡಾ| ಎಂ.ಕೆ. ರಮೇಶ್‌ ಮಾತನಾಡಿ, ಜೀವನದಲ್ಲಿ ಕ್ರೀಡೆ, ಸಂಗೀತ ಉತ್ತಮ ಒತ್ತಡ ನಿವಾರಕ; ಗೆಲವು ಸೋಲುಗಳನ್ನು ಬದಿಗಿಟ್ಟು, ಶಿಸ್ತನ್ನು ಅಳವಡಿಸಿಕೊಂಡು ಪರಿಶ್ರಮ ಪಡುವವರಿಗೆ ಅವಕಾಶಗಳು ತನ್ನಿಂತಾನೆ ತೆರೆದುಕೊಳ್ಳುತ್ತವೆ’ ಎಂದರು.

ದ.ಕ. ಜಿ.ಪಂ. ಸಿಇಒ ಡಾ| ಆನಂದ್‌ ಕೆ. ಮಾತನಾಡಿ, ವೃತ್ತಿ ಜೀವನ ಯಾವುದೇ ಇರಲಿ, ಕ್ರೀಡೆ ಎಂಬುದು ಅತ್ಯವಶ್ಯ; ಯಾವುದೇ ಕ್ರೀಡೆಗೆ ವಯಸ್ಸಿನ ಮಿತಿಯಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಎ. ಕೋಟ್ಯಾನ್‌ ಆಳ್ವಾಸ್‌ ಆಯೋಜಿಸುತ್ತ ಬಂದಿರುವ ಕ್ರೀಡಾಕೂಟಗಳಲ್ಲಿ ರಾಷ್ಟ್ರೀಯ ಮಟ್ಟದ ವ್ಯವಸ್ಥೆ, ಶಿಸ್ತು, ಸೊಬಗು ಇದ್ದೇ ಇರುತ್ತದೆ ಎಂದು ಶ್ಲಾಘಿಸಿದರು.

Advertisement

ಕ್ರೀಡಾ ಜ್ಯೋತಿಯನ್ನು ಕ್ರೀಡಾಳು ಗಳಾದ ಲಕ್ಷ್ಮೀ ವೈಷ್ಣವಿ, ಪ್ರಣವ್‌ ಜಗದೀಶ್‌, ಡಾ| ವೈಷ್ಣವಿ, ಡಾ| ಮಾಧುರಿ ಕೆ. ಹಾಗೂ ಚಂದನ್‌ ಎಸ್‌. ಉದ್ಘಾಟಕರಿಗೆ ಹಸ್ತಾಂತರಿಸಿದರು.

ಸಮ್ಮಾನ
ಡಾ| ಎಂ.ಕೆ. ರಮೇಶ್‌, ಎಂ.ಆರ್‌. ಪೂವಮ್ಮ, ಡಾ| ಆನಂದ್‌ ಕೆ. ಅವರನ್ನು ಸಮ್ಮಾನಿಸಲಾಯಿತು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮಾಜಿ ಸಚಿವ ಕೆ. ಅಭಯಚಂದ್ರ, ರಾ.ಗಾ. ಆ.ವಿ.ವಿ.ವಿ. ಕುಲಸಚಿವ ಡಾ| ಬಿ. ವಸಂತ ಶೆಟ್ಟಿ, ಸೆನೆಟ್‌ ಸದಸ್ಯ ಡಾ| ಶರಣ್‌ ಶೆಟ್ಟಿ, ಉದ್ಯಮಿ ಶ್ರೀಪತಿ ಭಟ್‌, ಎಂಸಿಎಸ್‌ ಬ್ಯಾಂಕ್‌ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್‌, ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ರವೀಂದ್ರನಾಥ ಆಳ್ವ, ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ ಆಳ್ವ, ಡಾ| ವಿನಯ ಆಳ್ವ, ಡಾ| ಹನ ಶೆಟ್ಟಿ ಮೊದಲಾದವರಿದ್ದರು.

ಆಳ್ವಾಸ್‌ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ| ಸಜಿತ್‌ ಎಂ. ಸ್ವಾಗತಿಸಿ, ರಾಜೇಶ್‌ ಡಿ’ಸೋಜಾ ನಿರೂಪಿಸಿ, ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ| ಯತಿಕುಮಾರ್‌ ಸ್ವಾಮಿಗೌಡ ವಂದಿಸಿದರು.

ರಾ.ಗಾ. ಆ.ವಿ.ವಿ.ವಿ. ವ್ಯಾಪ್ತಿಯ 133 ಕಾಲೇಜುಗಳಿಂದ 780 ಪುರುಷರು ಹಾಗೂ 657 ಮಹಿಳೆಯರು ಸೇರಿದಂತೆ ಒಟ್ಟು 1,437 ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ನೂತನ ಕೂಟ ದಾಖಲೆಗಳು
1. ಆಳ್ವಾಸ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌ನ ಮನು ಹೈಜಂಪ್‌ ಸ್ಪರ್ಧೆಯಲ್ಲಿ 1.86 ಮೀ. ಹಾರಿ ನೂತನ ಕೂಟ ದಾಖಲೆ ಸ್ಥಾಪಿಸಿದರು. ಅವರು 2002-03ರಲ್ಲಿ ಸಿಎಚ್‌ಎಂಎಸ್‌ನ ರಾಘವೇಂದ್ರ-ಸ್ಥಾಪಿಸಿದ ದಾಖಲೆಯನ್ನು (1.80 ಮೀ.) ಅಳಿಸಿ ಹಾಕಿದರು.
2. ಆಳ್ವಾಸ್‌ನ ರಾಕೇಶ್‌ ಜಾವೆಲಿನ್‌ನಲ್ಲಿ 50.89 ಮೀ. ದೂರ ಎಸೆದು ಉಜಿರೆಯ ಎಸ್‌ಡಿಎಂ ನ್ಯಾಜುರೋಪತಿ ಕಾಲೇಜಿನ ಅರುಣ್‌ ತೇಜಸ್‌ 2013-14ರಲ್ಲಿ ಸ್ಥಾಪಿಸಿದ (46.56 ಮೀ.) ದಾಖಲೆಯನ್ನು ಅಳಿಸಿ ಹಾಕಿದರು.
3. ಆಳ್ವಾಸ್‌ನ ಕಾರ್ತಿಕ್‌ 400 ಹರ್ಡಲ್ಸ್‌ನಲ್ಲಿ 53.4 ಸೆ.ನಲಿಲ ಕ್ರಮಿಸಿ ಮಂಗಳೂರಿನ ಸಿಟಿ ಕಾಲೇಜಿನ ಅರ್ಜುನ್‌ ಜೋಯ್‌ 2006-07ರಲ್ಲಿ ಸ್ಥಾಪಿಸಿದ ದಾಖಲೆ (1.00.66ಸೆ. ) ಯನ್ನು ಮುರಿದರು.
4. ಮಹಿಳೆಯರ ವಿಭಾಗದ 400 ಮೀ ಹರ್ಡಲ್ಸ್‌ನಲ್ಲಿ ಆಳ್ವಾಸ್‌ನ ವಿಸ್ಮಯ 1.08.4 ಸೆ.ನಲ್ಲಿ ಗುರಿ ತಲುಪಿ ಮಂಗಳೂರಿನ ಬಿಎಂಸಿ ಕಾಲೇಜಿನ ಖ್ಯಾತಿ ಎಸ್‌.ವಿ. 2007-08ರಲ್ಲಿ ಸ್ಥಾಪಿಸಿದ ದಾಖಲೆ (1.18.88ಸೆ.) ಮುರಿದರು.
5. ಆಳ್ವಾಸ್‌ನ ಶ್ರವಣ್‌ಗಿರಿ 100 ಮೀ ಓಟದಲ್ಲಿ 10.09 ಸೆ.ನಲ್ಲಿ ಗುರಿ ತಲುಪಿ ದಾವಣಗೆರೆಯ ಜೆಜೆಎಂಸಿಯ ಅನಿಲ್‌ಕುಮಾರ್‌ ಗುಪ್ತಾ 2000-01ರಲ್ಲಿ ನಿರ್ಮಿಸಿದ ದಾಖಲೆ (11.02ಸೆ.)ಯನ್ನು ಅಳಿಸಿ ಹಾಕಿದರು.

ಮೊದಲ ದಿನ ಆಳ್ವಾಸ್‌ ಎಎಚ್‌ಎಸ್‌ ಮುನ್ನಡೆ
ಮೊದಲ ದಿನದ ಅಂತ್ಯಕ್ಕೆ ಅತಿಥೇಯ ಆಳ್ವಾಸ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜು (ಎಎಚ್‌ಎಸ್‌) ಮಹಿಳಾ ವಿಭಾಗದಲ್ಲಿ 13 ಅಂಕಗಳೊಂದಿಗೆ ಮುನ್ನಡೆಯಲ್ಲಿದ್ದರೆ, ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜು 10 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

ಪುರುಷರ ಭಾಗದಲ್ಲಿ ಆಳ್ವಾಸ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜು 39 ಅಂಕ, ಮೂಲ್ಕಿಯ ಸೈಂಟ್‌ ಅನ್ಸ್‌ ನರ್ಸಿಂಗ್‌ ಕಾಲೇಜು 5 ಅಂಕ ಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನದಲ್ಲಿವೆ.

ಆಳ್ವಾಸ್‌ ವಿದ್ಯಾರ್ಥಿಗಳು 5 ನೂತನ ಕೂಟ ದಾಖಲೆಗೈದು, ಪುರುಷರು ಹಾಗೂ ಮಹಿಳೆಯರ ವಿಭಾಗಗಳಲ್ಲಿ 7 ಚಿನ್ನ, 4 ಬೆಳ್ಳಿ, 2 ಕಂಚಿನ ಪದಕ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next