ಮೂಡುಬಿದಿರೆ: ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಪಟ್ಟಾಭಿಷೇಕದ ರಜತ ವರ್ಷಾಚರಣೆ ನಿಮಿತ್ತ ಶ್ರೀ ಮಠದ ವತಿಯಿಂದ ನಡೆಸಲಾಗುವ ಅಭಿವೃದ್ಧಿ ಕಾಮಗಾರಿ ಮತ್ತು ಇತರ ಕಾರ್ಯಕ್ರಮಗಳಿಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯ ತಾವರಗೇರಿ ಮಠದ ಮಹೇಶ್ವರ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಭಟ್ಟಾರಕ ಸ್ವಾಮೀಜಿ, ಶ್ರೀಮಠದಲ್ಲಿರುವ ಅಮೂಲ್ಯ 50 ತಾಮ್ರ ಶಾಸನಗಳು, ರಜತಪತ್ರ, ಸ್ವರ್ಣಪತ್ರಗಳ ಸಂರಕ್ಷಣೆ, ಸಂಸ್ಕೃತ, ಪ್ರಾಕೃತ, ಕನ್ನಡ, ತುಳು ಭಾಷೆಗಳ ಕುರಿತು ವಿಶೇಷ ಕಾರ್ಯಕ್ರಮಗಳು, ವಿದ್ಯಾರ್ಥಿಗಳಿಗೆ ಪ್ರಾಕೃತ ಭಾಷಾ ಕಾರ್ಯಾಗಾರ, ತಾಳೆಗರಿಗಳನ್ನು ಓದುವ ಕಾರ್ಯಾಗಾರ, ತಾಳೆಗಿಡ ನೆಡುವ ಅಭಿಯಾನ ನಡೆಯುತ್ತಿವೆ. ಅತಿಥಿಗೃಹ ಜೀರ್ಣೋದ್ಧಾರ ಕಾರ್ಯ, ವೈದ್ಯಕೀಯ ಶಿಬಿರ, ಕೆರೆಗಳಿಗೆ ಕಾಯಕಲ್ಪ , ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಿಗೆ ಸಂಶೋಧನಾ ಗ್ರಂಥ, ಮಾಹಿತಿ ಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಿಗೆ ಸಂಚಾರಿ ಗ್ರಂಥಾಲಯ, ಗ್ರಂಥ ಭಂಡಾರ ಸ್ಥಾಪಿಸುವ ಸಂಕಲ್ಪವಿದೆ ಎಂದರು.
ಪ್ರಕೃತಿಯನ್ನು ಉಳಿಸಿ, ಬೆಳೆಸುವಂತಹ ಕೈಂಕರ್ಯಕ್ಕೂ ಮಠ ತನ್ನದೇ ಕೊಡುಗೆ ನೀಡುತ್ತಿದೆ ಎಂದು ಅವರು ನುಡಿದರು.
ಮೊದಲ ಕಾರ್ಯಕ್ರಮವಾಗಿ, ಹಿರಿಯ ವಿದ್ವಾಂಸ ಡಾ| ತಾಳ್ತಜೆ ವಸಂತ ಕುಮಾರ್ ಅವರು ಪಂಪನ “ಆದಿ ಪುರಾಣ’ ಮತ್ತು “ವಿಕ್ರಮಾರ್ಜುನ ವಿಜಯ’ ಕಾವ್ಯಗಳ ಕುರಿತು ಮಾತನಾಡಿದರು. ದ.ಕ. ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ತಜ್ಞ ಪುಂಡಿಕಾç ಗಣಪಯ್ಯ ಭಟ್, ನಿವೃತ್ತ ಪ್ರಾಧ್ಯಾಪಕ ಎಸ್.ಪಿ. ಅಜಿತ್ ಪ್ರಸಾದ್, ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುದೇಶ್ ಕುಮಾರ್, ಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಉಪಸ್ಥಿತರಿದ್ದರು.
ನೇಮಿರಾಜ್ ಶೆಟ್ಟಿ ಸ್ವಾಗತಿಸಿದರು. ಕ.ಸಾ.ಪ. ಕಾರ್ಯದರ್ಶಿ ಸದಾನಂದ ನಾರಾವಿ ನಿರೂಪಿಸಿ ವಂದಿಸಿದರು.