Advertisement

Moodabidri: ಭ| ಶ್ರೀ ಮಹಾವೀರರ 2,623ನೇ ಜನ್ಮ ಕಲ್ಯಾಣ ಮಹೋತ್ಸವ

12:28 AM Apr 22, 2024 | Team Udayavani |

ಮೂಡುಬಿದಿರೆ: “ಸತ್ಯ, ಅಹಿಂಸೆ, ಅಪರಿಗ್ರಹ, ಆಚೌರ್ಯ ಮತ್ತು ಬ್ರಹ್ಮಚರ್ಯ ಈ ಪಂಚ ಅಣು ವ್ರತಗಳನ್ನು ಪಾಲಿಸುವ ಮೂಲಕ ಆತ್ಮ ಕಲ್ಯಾಣವಾಗಿ ಪ್ರತಿಯೊಂದು ಜೀವಾತ್ಮ ಕೂಡ ಪರಮಾತ್ಮ ಪದವಿ ಪಡೆಯಬಹುದು. ಮನುಷ್ಯ ಜನ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ತಾನು ಜೀವಿಸುವುದರೊಂದಿಗೆ ಇನ್ನೊಂದು ಜೀವಿಯನ್ನು ಕೂಡ ಜೀವಿಸಲು ಬಿಡು ವುದೇ ಧರ್ಮ ಎಂದು ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯ ವರ್ಯ ಸ್ವಾಮೀಜಿ ನುಡಿದರು.

Advertisement

ಇಲ್ಲಿನ ಮಹಾವೀರ ಭವನದಲ್ಲಿ ರವಿವಾರ ನಡೆದ ಮಹಾವೀರ ಸ್ವಾಮಿಯವರ 2,623ನೇ ಜನ್ಮಕಲ್ಯಾಣ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿ, ಮಹಾವೀರರ ಬೋಧನೆಗಳು ಸಾರ್ವಕಾಲಿಕವಾಗಿವೆ ಎಂದರು.

ಮುಖ್ಯ ಉಪನ್ಯಾಸಕರಾಗಿದ್ದ ಮೂಡುಬಿದಿರೆ ಎಕ್ಸಲೆಂಟ್‌ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ| ಬಿ.ಪಿ. ಸಂಪತ್‌ ಕುಮಾರ್‌ ಮಾತನಾಡಿ, ಜೈನರ ಅಂತಿಮ 24ನೇ ತೀರ್ಥಂಕರ ಮಹಾವೀರ ಸ್ವಾಮಿ ಅವರ ಬೋಧನೆಗಳನ್ನು “ವೀರ ಶಾಸನ’ ಸ್ವೀಕರಿಸಿ, ಜಗತ್ತಿನ ಎಲ್ಲ ಜೈನರು ಇಂದಿಗೂ ಪಾಲಿಸುತ್ತಿರುವುದು ಹೆಮ್ಮೆಯ ವಿಚಾರ. ಮಧು, ಮದ್ಯ, ಮಾಂಸಾಹಾರಗಳ ತ್ಯಾಗದಿಂದ ಆತ್ಮ ಕಲ್ಯಾಣ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.

ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುಧೇಶ್‌ ಕುಮಾರ್‌, ಆನಡ್ಕ ದಿನೇಶ್‌ ಕುಮಾರ್‌, ಸಮಿತಿ ಕಾರ್ಯಾಧ್ಯಕ್ಷ ಶೈಲೇಂದ್ರ ಕುಮಾರ್‌ ಉಪಸ್ಥಿತರಿದ್ದರು.

ಆಹಾರ ದಾನ, ರಕ್ತದಾನ
ಅಲಂಗಾರು ಮೌಂಟ್‌ ರೋಸರಿ ಚಾರಿಟೆಬಲ್‌ ಟ್ರಸ್ಟ್‌ ನಡೆಸುವ ವೃದ್ಧಾ ಶ್ರಮಕ್ಕೆ ಮಧ್ಯಾಹ್ನ ಆಹಾರ ದಾನ ಮಾಡಲಾಯಿತು. ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮೂಡು ಬಿದಿರೆಯ ಜೈನ್‌ ಮೆಡಿಕಲ್‌ ಸೆಂಟರ್‌ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ 75 ಮಂದಿ ರಕ್ತದಾನ ಮಾಡಿದರು.

Advertisement

ಮಹಾವೀರ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸಾಮೂಹಿಕ ಅಷ್ಟ ವಿಧಾರ್ಚನೆ ನಡೆಯಿತು. ಬೆಳಗ್ಗೆ ಜೈನ ಮಠದಿಂದ ಬೆಳ್ಳಿಯ ಪಲ್ಲಕ್ಕಿಯಲ್ಲಿ ದೇವ, ಶಾಸ್ತ್ರ ಗುರುಗಳನ್ನು ಹೊತ್ತು ಮಹಾವೀರ ಸ್ವಾಮಿ ಬಸದಿಗೆ ತೆರಳಿ ಅಲ್ಲಿ ಸ್ವಾಮಿಗೆ ಕ್ಷೀರಾಭಿಷೇಕ ನಡೆಸಲಾಯಿತು.

ಜನ್ಮಕಲ್ಯಾಣ ಸಮಿತಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಸ್ವಾಗತಿಸಿ. ಕಾರ್ಯದರ್ಶಿ ಅನಂತವೀರ್‌ ಜೈನ್‌ ವಂದಿಸಿದರು. ಉಪನ್ಯಾಸಕ ನಿರಂಜನ್‌ ಕುಮಾರ್‌ ನಿರ್ವಹಿಸಿದರು. ಅಳಿಯೂರು ಆದಿರಾಜರು ಶಾಂತಿಮಂತ್ರ ಪಠನಗೈ ಯುವುದರೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next