ಮೂಡುಬಿದಿರೆ : ಕಲಾವಿದರು ಸಮಾಜದ ಪ್ರಗತಿಯ ಹಾದಿಯಲ್ಲಿ ಉತ್ತಮ ಅಂಶಗಳ ಸಾರವನ್ನು ಸ್ವೀಕರಿಸಿ ಸತ್ಪಲಗಳನ್ನು ಸಮಾಜಕ್ಕೆ ನೀಡುವವರಾ ಗಬೇಕು ಎಂದು ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ವಿದ್ಯಾಗಿರಿಯ ಡಾ| ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ರವಿವಾರ ನಡೆದ ಆಳ್ವಾಸ್ ವಿರಾಸತ್ ಅಂಗವಾಗಿ ಸಂಯೋಜಿಸಲಾದ ಆಳ್ವಾಸ್ ಶಿಲ್ಪ ವಿರಾಸತ್ ಮತ್ತು ಆಳ್ವಾಸ್ ವರ್ಣ ವಿರಾಸತ್ ರಾಷ್ಟ್ರೀಯ ಚಿತ್ರಕಲಾವಿದರು ಮತ್ತು ಶಿಲ್ಪ ಕಲಾವಿದರ ಶಿಬಿರದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ನಮ್ಮಲ್ಲಿ ಸಂಕಲ್ಪದ ಜತೆಗೆ ಶ್ರದ್ಧೆ, ಭಕ್ತಿ ಮತ್ತು ಶಕ್ತಿಯಿದ್ದಾಗ ಸಾಧನೆ ಮೂಡಿಬರಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಕ್ರಾಫ್ಟ್ ಕೌನ್ಸಿಲ್ ಕಾರ್ಯದರ್ಶಿ ಎಂ.ಎಸ್. ಫಾರೂಕ್ ಮಾತನಾಡಿ ‘ಇತಿಹಾಸವಾಗುತ್ತಿದ್ದ ಸಾಂಪ್ರದಾಯಿಕ ಕಲೆಗಳ ಮೌಲಿಕತೆಯನ್ನು ನಾವು ಅರಿತುಕೊಂಡು ಅವುಗಳನ್ನು ಅಭಿಮಾನದಿಂದ ಉಳಿಸಿ ಬೆಳೆಸುವುದು ಅಗತ್ಯ ಎಂದರು.
ವರ್ಣ ವಿರಾಸತ್ ಪ್ರಶಸ್ತಿಗೆ ಆಯ್ಕೆಯಾಗಿರುವ ಹೈದರಾಬಾದಿನ ಹಿರಿಯ ಕಲಾವಿದ ಸೂರ್ಯಪ್ರಕಾಶ್ ಅವರು ‘ಚಿತ್ರಕಲಾವಿದರ ಈ ಮಟ್ಟದ ಶಿಬಿರಗಳು ಅಪರೂಪದ ಕೊಡುಗೆ. ಎಳೆಯರು ಸಂಸ್ಕೃತಿ ಪ್ರೀತಿಯಿಂದ ಕಲೆಯನ್ನು ಬೆಳೆಸುವ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದರು.
ಕಲಾವಿದ ಬೆಂಗಳೂರಿನ ಶಶಿಧರ್ ಮಾತನಾಡಿದರು. ಕಲಾವಿದ ಡಾ| ಅಖ್ತರ್ ಹುಸೇನ್, ಶಿಬಿರದ ಸಲಹಾ ಸಮಿತಿಯ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮ ಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ವರ್ಣ ವಿರಾಸತ್‌ನ 10 ಮಂದಿ, ಶಿಲ್ಪವಿರಾ ಸತ್‌ನಲ್ಲಿ ಪಾಲ್ಗೊಂಡ 31 ಕಲಾವಿ ದರನ್ನು ಪ್ರಮಾಣಪತ್ರ ಸಹಿತ ಗೌರವಿಸಲಾಯಿತು. ವಿದ್ಯಾರ್ಥಿನಿ ದೀಕ್ಷಾ ಗೌಡ ನಿರೂಪಿಸಿ, ವಂದಿಸಿದರು.
ಎಳೆಯರಿಗೆ ಸ್ಫೂರ್ತಿಯಾಗಲಿ
ಸಂಘಟಕ ಡಾ| ಎಂ. ಮೋಹನ ಆಳ್ವ ಮಾತನಾಡಿ, ಉತ್ತಮ ಮನಸ್ಸು ಹಾಗೂ ಕನಸಿಗೆ ಶಕ್ತಿ ತುಂಬುವ ಕೆಲಸ ಶಿಕ್ಷಣದ ಮೂಲಕ ನಡೆದಾಗ ಶಿಕ್ಷಣ ಅರ್ಥಪೂರ್ಣವಾಗುತ್ತದೆ. ಶಿಕ್ಷಣದ ಚೌಕಟ್ಟಿನಿಂದ ಹೊರಗುಳಿದರೂ ಕಲಾವಿದರಾಗಿ ಅರ್ಪಣಾ ಮನೋಭಾವದಿಂದ ಸಾಧನೆ ಮಾಡಿದವರು ಎಳೆಯರಿಗೆ ಸ್ಫೂರ್ತಿಯಾಗಬೇಕು ಎನ್ನುವ ಕಾರಣಕ್ಕೆ ವರ್ಣ, ಶಿಲ್ಪ ವಿರಾಸತ್ ನಮ್ಮ ಯುವ ಸಮುದಾಯದ ಮುಂದಿಡಲಾಗಿದೆ ಎಂದರು.