Advertisement

ಒಂದೇ ದಿನದಲ್ಲಿ ಮೂಡುಬಿದಿರೆ ಕಂಬಳ: ಡಿಸಿಯೊಂದಿಗೆ ಚರ್ಚಿಸಿ ತೀರ್ಮಾನ

09:33 PM Jan 09, 2021 | Team Udayavani |

ಮೂಡುಬಿದಿರೆ: ಕಂಬಳವನ್ನು ಎರಡು ದಿನಗಳ ಬದಲು ಒಂದೇ ದಿನದಲ್ಲಿ ಮುಗಿಸಲು ಸಂಸದರು, ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು, ಕಂಬಳಗಳ ಪ್ರಮುಖರು ಇದ್ದು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಮೂಡುಬಿದಿರೆ ಕಂಬಳ ಸಮಿತಿ ಸಭೆಯಲ್ಲಿ ನಿಶ್ಚಯಿಸಲಾಯಿತು.

Advertisement

ಶಾಸಕ, ಮೂಡುಬಿದಿರೆ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ಕಂಬಳ ಕ್ರೀಡಾಂಗಣದ ಬಳಿಯ ಸೃಷ್ಟಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಕೋವಿಡ್‌ ನಿಯಮ ಪಾಲಿಸಿಕೊಂಡು ಮೂಡುಬಿದಿರೆ ಕಂಬಳವನ್ನು ಈ ಹಿಂದೆ ನಿಗದಿಯಾದಂತೆ ಫೆ. 20ರಂದು ಹೇಗೆ ನಡೆಸಬಹುದು ಎಂಬುದರ ಬಗ್ಗೆ ಮೂಡುಬಿದಿರೆ ಕಂಬಳ ಸಮಿತಿ ಪದಾಧಿಕಾರಿಗಳು, ಓಟದ ಕೋಣಗಳ ಮಾಲಕರು, ವ್ಯವಸ್ಥಾಪಕರು ಹಾಗೂ ಕಾರ್ಯಕರ್ತರ ಸಹಿತ ಕಂಬಳಾ ಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಫಿಟ್‌ನೆಸ್‌ ಟೆಸ್ಟ್‌ :

ಕಂಬಳ ವಿದ್ವಾಂಸ, ಪ್ರಧಾನ ತೀರ್ಪುಗಾರ ಕೆ. ಗುಣಪಾಲ ಕಡಂಬ ಅವರು “ಕೋಣಗಳ ಫಿಟ್‌ನೆಸ್‌ ಟೆಸ್ಟ್‌ ನಡೆಸಲೇಬೇಕು’ ಎಂಬುದನ್ನು ಒತ್ತಿ ಹೇಳಿ, ಮೂಡುಬಿದಿರೆಯಲ್ಲಿ ಈ ಹಿಂದೆ 1986ರಿಂದ 89ರ ವರೆಗೆ ನಡೆಸಲಾದಂತೆ, ಜ. 30, ಫೆ. 6 ಮತ್ತು 13ರಂದು ನಡೆಯುವ ಕಂಬಳಗಳಲ್ಲಿ ಉತ್ತಮ ಸಾಧನೆಯನ್ನು ಪರಿಗಣಿಸಿ, ಆಹ್ವಾನಿತ ಕೋಣಗಳ ಕಂಬಳ ನಡೆಸಿದರೆ ಹೇಗೆ ಎಂಬ ಅಭಿಪ್ರಾಯವನ್ನು ಮಂಡಿಸಿದರು.

ಕೋಶಾಧಿಕಾರಿ ಭಾಸ್ಕರ ಎಸ್‌. ಕೋಟ್ಯಾನ್‌ ಮಾತನಾಡಿ, ಎರಡು ದಿನಗಳ ಕಂಬಳ ನಡೆಸುವುದರಿಂದ ಓಟಗಾರರಿಗೆ ಬಹಳ ತ್ರಾಸವಾಗುವುದು ಸಹಜ; ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು. ಜ. 30ರಂದು ನಡೆಯಲಿರುವ ಹೊಕ್ಕಾಡಿಗೋಳಿ ಕಂಬಳದ ಪ್ರಮುಖ ರಾದ ರಶ್ಮಿತ್‌ ಶೆಟ್ಟಿ ಮಾತನಾಡಿ, ಜಿಲ್ಲಾಧಿ ಕಾರಿಯವರನ್ನು ಕಂಬಳಕ್ಕೆ ಸಂಬಂಧಿಸಿದ ಎಲ್ಲರೂ ಒಟ್ಟಾಗಿ ನಿಯೋಗ ಹೋಗಿ ಚರ್ಚಿಸಿದರೆ ಮಾತ್ರ ಎಲ್ಲ ಕಂಬಳ ವ್ಯವಸ್ಥಾಪಕರಿ ಗೂ ಅನುಕೂಲವಾಗುತ್ತದೆ ಎಂದರು.

Advertisement

ಪಶು ವೈದ್ಯಾಧಿಕಾರಿ ಡಾ| ರವಿಕುಮಾರ್‌, ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್‌ ಕುಮಾರ್‌, ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ಮುಡಾ ಅಧ್ಯಕ್ಷ ಮೇಘನಾದ್‌ ಶೆಟ್ಟಿ, ಎಪಿಎಂಸಿ ಸದಸ್ಯ ಕೃಷ್ಣರಾಜ ಹೆಗ್ಡೆ, ಎಂ.ಎಸ್‌. ಕೋಟ್ಯಾನ್‌, ಕೆ.ಪಿ. ಜಗದೀಶ ಅಧಿಕಾರಿ, ಈಶ್ವರ ಕಟೀಲು, ಕೆ.ಆರ್‌. ಪಂಡಿತ್‌, ಸುನಿಲ್‌ ಆಳ್ವ ,ನಾಗರಾಜ ಪೂಜಾರಿ, ಶಾಂತಿಪ್ರಸಾದ್‌ ಹೆಗ್ಡೆ, ವಿಜಯಕುಮಾರ ಕಂಗಿನಮನೆ, ಸುರೇಶ್‌ ಶೆಟ್ಟಿ ಉಪಸ್ಥಿತರಿದ್ದರು. ಸುರೇಶ್‌ ಕೆ. ಪೂಜಾರಿ ನಿರೂಪಿಸಿದರು.

ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, “ಎಲ್ಲ ನಿಯಮಗಳನ್ನು ಪಾಲಿಸಿಕೊಂಡು, ಎಂದಿನಂತೆ ಸಾಧ್ಯವಾದಷ್ಟು ಕೋಣಗಳಿಗೆ ಅವಕಾಶ ಕಲ್ಪಿಸೋಣ. ಜಿಲ್ಲಾಧಿಕಾರಿಯವರಲ್ಲಿ ಚರ್ಚಿಸಿ ಅಂತಿಮ ಸ್ವರೂಪವನ್ನು ಪ್ರಕಟಿಸಲಾಗುವುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next