Advertisement

ಲಹರಿ: ಮದುವೆ

09:56 AM Mar 28, 2020 | mahesh |

ನಾನೀಗ ಮಧ್ಯವಯಸ್ಸಿನವಳು. ನನ್ನೆಲ್ಲ ಗೆಳತಿಯರು ಇದೇ ವಯಸ್ಸಿನವರು. ನಮ್ಮ ಮಕ್ಕಳು ಈಗ ಕಾಲೇಜು ಸೇರಿದ್ದಾರೆ. ಈಗ ನಮಗೆ ನಮ್ಮ ಬಗ್ಗೆ ಯೋಚಿಸಲು ಸಮಯ ಸಿಕ್ಕಂತಾಗಿದೆ. ಮದುವೆಯಾಗಿ ನಮಗೆಲ್ಲ 17-20 ವರ್ಷಗಳಾಗಿದೆ. ಆದರೆ, ಈಗಲೂ ಅದೇ ಪ್ರಶ್ನೆ ತಲೆಯಲ್ಲಿ ಕೊರೆಯುತ್ತದೆ. ಈ ಪ್ರಶ್ನೆಗೆ ನಾವು ಉತ್ತರ ಹುಡುಕಬೇಕು, ಇಲ್ಲದಿದ್ದರೆ ನಾವು ಕೇಳಿದ ಪ್ರಶ್ನೆಯನ್ನು ನಮ್ಮ ಮಕ್ಕಳು ನಮ್ಮನ್ನು ಕೇಳುವಾಗ ನಮಗೆ ತಬ್ಬಿಬಾಗಬಾರದು.

Advertisement

“ನಾವು ಮದುವೆ ಯಾಕಾಗಬೇಕು?’ ಈ ಪ್ರಶ್ನೆಯನ್ನು ನಾವು ಗೆಳತಿಯರು ನಮ್ಮ ತಂದೆ-ತಾಯಿಯನ್ನು ಮದುವೆ ವಯಸ್ಸಿಗೆ ಬಂದಾಗ ಕೇಳಿದ್ದೆವು. ‘ನಿನಗೊಬ್ಬ ಜೊತೆಗಾರ ಸಿಗುತ್ತಾನೆ, ವಯಸ್ಸಿಗೆ ತಕ್ಕ ಚಟಗಳನ್ನು ತೀರಿಸಿ ಕೊಳ್ಳಲು ಜೊತೆಗಾರ, ನಮಗೆ ವಯಸ್ಸಾಗುತ್ತಿದೆ, ನಾವು ಸತ್ತ ಮೇಲೆ ನಿನ್ನ ಗತಿಯೇನು?’

ಈ ತರ್ಕವನ್ನು ನಾವು ಒಬ್ಬರೂ ಒಪ್ಪಲು ಸಿದ್ಧವಿರಲಿಲ್ಲ. ಏಕೆಂದರೆ, ನಾವೆಲ್ಲ ಪಿಜಿ ಡಿಪ್ಲೊಮಾ ‘ಮಹಿಳಾ ಅಧ್ಯಯನ (ಡಿಡಬ್ಲೂಎಸ್‌)ಮಾಡಿದವರು. ಒಂದು ದಿನ ಬೆಳಗ್ಗೆಯೇ ಗೆಳತಿ ರಾಧಾ ಫೋನ್‌ ಮಾಡಿದ್ದಳು.
ಕಾಲ್‌ ಕಟ್ಟಾಯಿತು. ಸ್ವಲ್ಪ ಸಮಯದ ನಂತರ ಮತ್ತೆ ಫೋನ್‌ ಮಾಡಿ ಒಂದೇ ಸಮನೆ ಮಾತನಾಡತೊಡಗಿದಳು. “”ನಾನು ಒಬ್ಬಳೇ ಸ್ವಗತದಲ್ಲಿ ನಮ್ಮ ಡಿಡಬ್ಲೂಎಸ್‌ ಪೊ›ಫೆಸರ್‌ ಜೊತೆ ಚರ್ಚೆ ಮಾಡುತ್ತಿದ್ದೆ. ನಾವು ಮಹಿಳಾ ಅಧ್ಯಯನ ಓದಿದ್ದೇ ಉಪಯೋಗವಿಲ್ಲ. ನನಗೆ ಅನಿಸುತ್ತದೆ ನಾವು 15 ಜನ ಗೆಳತಿಯರು ಡಿಡಬ್ಯುಎಸ್‌ ಓದಿದವರು ಸಂಸಾರ ಸರಿ ಮಾಡುತ್ತಿಲ್ಲ ಎಂದು ನನಗೆ ಅನಿಸುತ್ತಿದೆ” ಅಂತ. “”ಪ್ರೊಫೆಸರ್‌ ನನ್ನ ವಾದ ಒಪ್ಪಲಿಲ್ಲ ಎಲ್ಲಾ ನಿಮ್ಮ ಕೈಯಲ್ಲಿದೆ ಅಂದರಂತೆ” ಎಂದೂ ಹೇಳಿದಳು.ನಾನು ಸುಮ್ಮನೆ ಅವಳ ಮಾತನ್ನು ಕೇಳುತ್ತಿದ್ದೆ.

ಗೆಳತಿ ಮುಂದುವರಿಸಿ, “”ನಾವು ಡಿಗ್ರಿ ಮುಗಿಸಿ ಪಿಜಿ ಸೇರುವುದು ಕನಸು ಕಾಣುವ ವಯಸ್ಸು. ಮದುವೆ ಬಗ್ಗೆ, ಸಂಸಾರದ ಬಗ್ಗೆ, ಸುಂದರವಾದ ಕನಸು ನಮ್ಮದೇ ಆದ ಅಭಿಪ್ರಾಯ ರೂಢಿಸಿಕೊಳ್ಳಬೇಕಾದ ವಯಸ್ಸು. ಆದರೆ, ನಮಗೆ ಏನಾಯ್ತು? ನಾವು ಬರೀ ಕೌಟುಂಬಿಕ ದೌರ್ಜನ್ಯ , ಸಮಾಜದಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನ, ದುಡಿಯುವ ಸ್ಥಳದಲ್ಲಿ ಇರುವ ಎರಡನೆಯ ದರ್ಜೆಯ ಸ್ಥಾನ, ಕಾನೂನಿನಲ್ಲಿರುವ ತಾರತಮ್ಯಗಳ ಬಗ್ಗೆ ತಿಳಿದುಕೊಂಡು ಸಮಾಜವನ್ನು ಅದೇ ದೃಷ್ಟಿಯಿಂದ ನೋಡಲಾರಂಭಿಸಿದೆವು. ಕನಸುಗಳು ಕಮರಿದವು. ಮದುವೆ ಸಂಸಾರ ಅಂದ್ರೆ ಇಷ್ಟೇನಾ ಅಂತ ಭಯ ಪಟ್ಟೆವು. ನಮ್ಮ ವ್ಯವಸ್ಥೆಯನ್ನು ವಿರೋಧಿಸುವ ಪುರುಷರು ಹೀರೋಗಳಾಗಿ ಕಂಡರು. ಅಮ್ಮ-ಅಪ್ಪ ಬಂಧು-ಬಳಗ ವಿರೋಧ ಕಟ್ಟಿಕೊಂಡು ಸಾಧನೆ ಅನ್ನುವ ಹುಂಬತನದಲ್ಲಿ ನಾವು ಮೆಚ್ಚಿದವರನ್ನು ಮದುವೆಯಾದೆವು ಅಲ್ವೇನೆ?” ಅಂದಳು ಗೆಳತಿ ರಾಧಾ.

ಅವಳ ಮಾತಿಗೆ ತತಕ್ಷಣ ಏನೆನ್ನಬೇಕೋ ತಿಳಿಯ ಲಿಲ್ಲ. ಹೇಳಿದ್ದು ಸರಿಯೆನಿಸಿತು. ಆದರೆ, ಪೂರ್ತಿ ಒಪ್ಪಲಾಗಲಿಲ್ಲ. ಮದುವೆಯಾದವರಿಗೆ ತಮ್ಮ ಮದುವೆಯ ಬಗ್ಗೆ ಬೇಸರ. ಮದುವೆಯಾಗದವರಿಗೆ ಮದುವೆಯ ಬಗ್ಗೆ ಕುತೂಹಲ. ಇದೊಂಥರ ವಿಚಿತ್ರ. ಹೀಗಿದ್ದರೇ ಬದುಕು !

Advertisement

ನಾನು ಕೂಡ ವೈವಾಹಿಕ ಜೀವನದಲ್ಲಿ ಎದುರಿಸುತ್ತಿರುವ ಅಂತರ್ಜಾತಿ, ಅಂತರ್ಜಿಲ್ಲೆಯ ಅಂತರವನ್ನು ಅವಳ ಜೊತೆಗೆ ಹೇಳಿ ಕೊಳ್ಳಬೇಕೇ ಬೇಡವೆ ಎಂದು ಯೋಚಿಸಿದೆ ಕ್ಷಣಕಾಲ.

ಎಸ್‌. ಬಿ. ಅನುರಾಧಾ

Advertisement

Udayavani is now on Telegram. Click here to join our channel and stay updated with the latest news.

Next