Advertisement

ಇಂದು ಕರಾವಳಿ ಕ್ರೈಸ್ತರ ವಿಶೇಷ ಹಬ್ಬ ಮೊಂತಿ ಫೆಸ್ತ್ 

08:39 PM Sep 07, 2021 | Team Udayavani |

ಉಡುಪಿ: ಕರಾವಳಿ ಕ್ರೈಸ್ತರ ವಿಶೇಷ ಹಬ್ಬ, ಮೇರಿ ಮಾತೆಯ ಜನ್ಮ ದಿನವಾದ ಮೊಂತಿ ಫೆಸ್ತ್ ಹಬ್ಬವನ್ನು ಉಡುಪಿ ಜಿಲ್ಲೆಯಲ್ಲಿ ಇಂದು ಕೋವಿಡ್‌ ಪ್ರಯುಕ್ತ ಸರಳವಾಗಿ ಆಚರಿಸಲಾಗುತ್ತದೆ.

Advertisement

ಈ ಹಬ್ಬವನ್ನು ಕ್ರೈಸ್ತರು ಹೊಸ ಬೆಳೆಯ ಹಬ್ಬ ಅಥವಾ ತೆನೆಹಬ್ಬವಾಗಿ ಆಚರಿಸುತ್ತಾರೆ. ಕೊರೊನಾ ಕಾರಣದಿಂದ ಉಡುಪಿ ಧರ್ಮಪ್ರಾಂತ್ಯದಲ್ಲಿ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಎಲ್ಲ ಚರ್ಚ್‌ಗಳು ಸರಕಾರ ಸೂಚಿಸಿದ ನಿಯಮಾವಳಿಗಳನ್ನು ಪಾಲಿಸಿಕೊಂಡು ಹಬ್ಬದ ಆಚರಣೆ ನಡೆಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ| ಡಾ| ಜೆರಾಲ್ಡ್  ಐಸಾಕ್‌ ಲೋಬೊ ಎಲ್ಲ ಚರ್ಚ್‌ಗಳ ಧರ್ಮಗುರುಗಳಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕವಾಗಿ ಹೂ ಅರ್ಪಣೆ ಸಹಿತ ಎಲ್ಲ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು ಚರ್ಚ್‌ನ ಒಳಗಡೆ ಮಾತ್ರ ಹೂ ಅರ್ಪಣೆ ಮಾಡುವುದರೊಂದಿಗೆ ಹೊಸ ತೆನೆಯ ಆಶೀರ್ವಚನವನ್ನು ನಡೆಸಲಾಗುತ್ತದೆ. ಚರ್ಚ್‌ನಲ್ಲಿ ಆಶೀರ್ವಚಿಸಿದ ಹೊಸ ತೆನೆಯನ್ನು ಪ್ರತೀ ಮನೆಗೆ ಧರ್ಮಗುರುಗಳು ಹಂಚಲಿದ್ದಾರೆ. ಅದನ್ನು ಮನೆಗೆ ತಂದು ಪ್ರಾರ್ಥನೆ ಮಾಡುವುದರ ಮೂಲಕ ಹಾಲು ಅಥವಾ ಪಾಯಸದೊಂದಿಗೆ ಹೊಸ ಅಕ್ಕಿಯ ಊಟವನ್ನು ಮಾಡಲಾಗುತ್ತದೆ.

ಈ ಹಬ್ಬ ಸಸ್ಯಾಹಾರಿ ಭೋಜನಕ್ಕೆ ಹೆಸರಾಗಿದ್ದು ವಿವಿಧ ಬಗೆಯ ತರಕಾರಿ ಖಾದ್ಯಗಳು ಹಬ್ಬದ ಊಟದಲ್ಲಿ ಇರಲಿವೆ. ಬೆಸ ಸಂಖ್ಯೆಯನ್ನು ಹೊಂದಿಕೊಂಡು ತರಕಾರಿ ಖಾದ್ಯಗಳನ್ನು ತಯಾರಿಸಲಾಗುತ್ತದೆ.

ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಹಬ್ಬದ ಪ್ರಯುಕ್ತ ಬಲಿಪೂಜೆ ನಡೆಯಲಿದ್ದು, ಉಡುಪಿಯ ಶೋಕಮಾತಾ ಇಗರ್ಜಿಯಲ್ಲಿ ರೆ| ಚಾರ್ಲ್ಸ್  ಮಿನೇಜಸ್‌, ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ನಲ್ಲಿ ರೆ| ವಲೇರಿಯನ್‌ ಮೆಂಡೊನ್ಸಾ, ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ರೆ| ಡೆನಿಸ್‌ ಡೇಸಾ, ಕುಂದಾಪುರ ಹೋಲಿ ರೋಸರಿ ಚರ್ಚ್‌ನಲ್ಲಿ ರೆ| ಸ್ಟಾನಿ ತಾವ್ರೋ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ರೆ| ಆಲ್ಬನ್‌ ಡಿ’ಸೋಜಾ ಅವರು ಬಲಿ ಪೂಜೆ ನೆರವೇರಿಸಲಿದ್ದಾರೆ. ಮೇರಿ ಮಾತೆಯ ಜನ್ಮದಿನದೊಂದಿಗೆ ಕುಟುಂಬ ಸಹಮಿಲನದ ಹಬ್ಬ, ಹೊಸಬೆಳೆಯ ಹಬ್ಬ ಹಾಗೂ ಹೆಣ್ಣು ಮಕ್ಕಳ ದಿನವನ್ನಾಗಿ ಕೂಡ ಆಚರಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next