Advertisement

ಕಬ್ಬಿನ ಬಾಕಿ ಪಾವತಿಗೆ ಮಾಸಾಂತ್ಯದ ಗಡುವು

05:58 AM Jun 07, 2020 | Suhan S |

ಬಾಗಲಕೋಟೆ: ಕಳೆದ 2019-20ನೇ ಹಂಗಾಮಿನ ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಒಟ್ಟು 309.65 ಕೋಟಿ ರೂ. ಜೂನ್‌ ತಿಂಗಳ ಅಂತ್ಯಕ್ಕೆ ಸಂಪೂರ್ಣವಾಗಿ ಪಾವತಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಜರುಗಿದ ರೈತರ ಕಬ್ಬಿನ ಬಾಕಿ ಪಾವತಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. 2019-20ನೇ ಹಂಗಾಮಿನ ಬಾಕಿ ಪಾವತಿ ಜೊತೆಗೆ 2018-19ನೇ ಹಂಗಾಮಿನಲ್ಲಿ ಕಾರ್ಖಾನೆ ಮಾಲೀಕರು ಮತ್ತು ರೈತರ ನಡುವಿನ ಒಪ್ಪಂದದಂತೆ ಪ್ರತಿ ಕ್ವಿಂಟಲ್‌ ಕಬ್ಬಿಗೆ ನೀಡಬೇಕಾದ ಹೆಚ್ಚುವರಿ ಬಾಕಿ ಸಹ ತುರ್ತಾಗಿ ಪಾವತಿಸಬೇಕು. ಈ ಕುರಿತು 15 ದಿನಗಳ ನಂತರ ಮತ್ತೂಮ್ಮೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

2017-18ನೇ ಹಂಗಾಮಿಗೆ ಕಾರ್ಖಾನೆಯವರು ಘೋಷಿಸಿರುವ ಹೆಚ್ಚುವರಿ ದರ ಪಾವತಿಸಲು ಮುಧೋಳರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ 3.44 ಕೋಟಿ ರೂ. ಮತ್ತು ತೇರದಾಳದ ಸಾವರಿನ್‌ ಶುಗರ್ನವರು 56.88 ಲಕ್ಷ ರೂ. ಬಾಕಿ ಉಳಿಸಿಕೊಂಡಿವೆ. ಸಾವರಿನ್‌ ಶುಗರ್ನವರು 2018-19ನೇ ಹಂಗಾಮಿನ 20 ಕೋಟಿ ರೂ. ರೈತರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರಿಂದ ಸದರಿ ಕಾರ್ಖಾನೆಯನ್ನು ಕರ್ನಾಟಕ ಭೂ ಕಂದಾಯ ವಸೂಲಿ ಪ್ರಕ್ರಿಯೆ ಚಾಲ್ತಿಯಲ್ಲಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ವೇಳೆ ಕಾರ್ಖಾನೆಗಳ ಸಮಸ್ಯೆ ಆಲಿಸಿ, ಹೆಸ್ಕಾಂಗೆ ನೀಡಬೇಕಾದ ಸರ್ಕಾರದಿಂದ ಬರುವ ಬಾಕಿ ಸಬ್ಸಿಡಿ ಹಣದ ಬಗ್ಗೆ ಪ್ರಸ್ತಾವನೆ ನೀಡಿದಲ್ಲಿ ಸರ್ಕಾರದಿಂದ ಕೊಡಿಸುವ ಕೆಲಸ ಮಾಡಲಾಗುವುದು. ಸರ್ಕಾರದಿಂದ ಟ್ರಾನ್ಸ್‌ಪೋರ್ಟ್ ‌ ಸಬ್ಸಿಡಿ ಹಣ ಬರುವುದು ಬಾಕಿ ಇದ್ದರೆ ಅದರ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು ಎಂದರು.

ಕೋವಿಡ್‌-19 ಭೀತಿ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆಯವರು ಸಿಎಸ್‌ ಆರ್‌ ಅನುದಾನದಲ್ಲಿ ಸ್ಯಾನಿಟೈಸರ್‌ ಉಚಿತವಾಗಿ ನೀಡಿದ ಎಲ್ಲ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಆಹಾರ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next