Advertisement

ಕನ್ನಡ ಅನುಷ್ಠಾನಕ್ಕೆ ತಿಂಗಳ ಗಡುವು:ಸ್ಪಂದಿಸದಿದ್ದರೆ ಶಿಸ್ತು ಕ್ರಮ

11:47 AM Aug 11, 2017 | |

ಬೆಂಗಳೂರು: ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಅನುಷ್ಠಾನಕ್ಕಾಗಿ ಸಾರ್ವಜನಿಕ ಉದ್ದಿಮೆ ಇಲಾಖೆಗೆ ತಿಂಗಳ ಗಡುವು ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಇದಕ್ಕೆ ಸ್ಪಂದಿಸದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದೆ.

Advertisement

ನಾಲ್ಕು ತಿಂಗಳಲ್ಲಿ ಗುರುವಾರ ಇಲಾಖೆಗೆ ಎರಡನೇ ಬಾರಿ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, “ಈ ನಾಲ್ಕು ತಿಂಗಳ ಅವಧಿಯಲ್ಲಿ ಕನ್ನಡ ಅನುಷ್ಠಾನದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿಯನ್ನೂ ಸಲ್ಲಿಸಿಲ್ಲ. ಆಡಳಿತದಲ್ಲಿ ಕನ್ನಡದ ಬಗ್ಗೆ ನೂರಾರು ಆದೇಶಗಳಿದ್ದರೂ ಈ ನಿರ್ಲಕ್ಷ್ಯವು ಶಾಸನಬದ್ಧ ಸರ್ಕಾರವನ್ನು ತಿರಸ್ಕರಿಸಿದಂತಾಗಲಿದೆ’ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡರು.

ಇಲಾಖೆ ಅಡಿ 60 ನಿಗಮ-ಮಂಡಳಿಗಳು ಬರುತ್ತವೆ. ಆ ಪೈಕಿ ಯಾವ್ಯಾವ ನಿಗಮ-ಮಂಡಳಿಗಳು ಇಂಗ್ಲಿಷ್‌ನಲ್ಲಿ ವ್ಯವಹರಿಸುತ್ತಿವೆ? ಯಾವ ನಿರ್ದೇಶಕರು ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ ಎನ್ನುವುದೂ ಸೇರಿ ಎಲ್ಲದರ ಮಾಹಿತಿ ಸಂಗ್ರಹಿಸಬೇಕು. ಇಲಾಖೆಗೆ ಇಂಗ್ಲಿಷ್‌ನಲ್ಲಿ ಕಳುಹಿಸುವ ಪತ್ರಗಳನ್ನು ತಿರಸ್ಕರಿಸಬೇಕು. ತಿರಸ್ಕರಿಸಿದ ಬಗ್ಗೆ ಪ್ರಾಧಿಕಾರಕ್ಕೂ ಮಾಹಿತಿ ನೀಡಬೇಕೆಂದು ಸೂಚಿಸಿದರು.

ಒಟ್ಟಾರೆ ವೆಬ್‌ಸೈಟ್‌ನಿಂದ ಹಿಡಿದು ಪ್ರತಿ ಹಂತದಲ್ಲೂ ಸಂಪೂರ್ಣ ಕನ್ನಡ ಅನುಷ್ಠಾನಗೊಳ್ಳಬೇಕು. ಜತೆಗೆ ಅನುಪಾಲನಾ ವರದಿ ಸಲ್ಲಿಸಬೇಕು. ಯಾರು ಕನ್ನಡದಲ್ಲಿ ವ್ಯವಹರಿಸುತ್ತಿಲ್ಲ ಎಂಬುದರ ಸ್ಪಷ್ಟ ವರದಿಯನ್ನು ಇಲಾಖೆಯು ಪ್ರಾಧಿಕಾರಕ್ಕೆ ಕೊಡಬೇಕು. ನಾಮನಿರ್ದೇಶಿತ ನಿರ್ದೇಶಕರಿದ್ದರೆ, ಅಂತಹವರ ಸ್ಥಾನವನ್ನು ರದ್ದುಗೊಳಿಸುವಂತೆಯೂ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

11 ನಿಗಮಗಳ ವಿರುದ್ಧ ಹೆಚ್ಚು ದೂರು ಈಗಾಗಲೇ ಸಾರ್ವಜನಿಕ ಉದ್ದಿಮೆ ಇಲಾಖೆಗೆ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಲಾಗಿದೆ.ಮತ್ತೆ ಬರುವಂತೆ ಮಾಡಬೇಡಿ ಎಂದು ಸೂಚ್ಯವಾಗಿ ಹೇಳಿದ ಪ್ರೊ.ಸಿದ್ದರಾಮಯ್ಯ, ನಿಗಮ-ಮಂಡಳಿಗಳ ನಿರ್ದೇಶಕರು ಕನ್ನಡ ಮಾತನಾಡುವುದಿಲ್ಲ ಎಂಬುದು ನಾಚಿಕೆಗೇಡು. ಅದರಲ್ಲೂ ತಾಂಡಾ ಅಭಿವೃದ್ಧಿ ನಿಗಮ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಸೇರಿ ಸುಮಾರು 11 ನಿಗಮಗಳ ವಿರುದ್ಧ ಅತಿ ಹೆಚ್ಚು ದೂರುಗಳು ಕೇಳಿಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಿಂಗಳಲ್ಲಿ ಅನುಪಾಲನಾ ವರದಿ ಸಲ್ಲಿಸದಿದ್ದರೆ, ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಕನ್ನಡ ಬಳಸದ ಅಧಿಕಾರಿಗಳ ವಿರುದ್ಧ ಕ್ರಮ

ವಿವಿಯ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಬಳಕೆಯಲ್ಲಿ ಕುಂಠಿತವಾಗಿದೆ ಮತ್ತು ಪ್ರಾಧಿಕಾರಕ್ಕೆ ಈ ಕುರಿತು ಹಲವು ದೂರುಗಳು ಬಂದಿವೆ. ಪರಿಶೀಲನೆ ನಡೆಸಿದಾಗ ಪತ್ರ ವ್ಯವಹಾರಗಳು, ನೇಮಕಾತಿ ಆದೇಶಗಳು ಆಂಗ್ಲ ಭಾಷೆಯಲ್ಲಿವೆ. ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ¤ಕ್ರಮಕೈಗೊಳ್ಳಬೇಕೆಂದು ಎಚ್ಚರಿಸಿದ ಅವರು,ಮೂರು ತಿಂಗಳು ಗಡುವು ನೀಡಿದರು. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕನ್ನಡ ಕುಂಠಿತವಾಗುತ್ತಿದೆ. ಅದನ್ನು ದಾಟಿಕೊಂಡು ಕನ್ನಡದ ಅಸ್ಮಿತೆಯನ್ನು ಉಳಿಸುವ ಹೊಣೆಗಾರಿಕೆ ಹೊರಬೇಕು. ಇಲ್ಲದಿದ್ದರೆ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರಾಧಿಕಾರ ಶಿಫಾರಸು ಮಾಡುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next