ನವದೆಹಲಿ: ಈ ಬಾರಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ನೈರುತ್ಯ ಮುಂಗಾರು ಮಳೆ ಸಾಮಾನ್ಯವಾಗಿರಲಿದ್ದು, ಮಧ್ಯ ಭಾರತದಲ್ಲಿ ಅಧಿಕ ಮಳೆಯಾಗಲಿದೆ. ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ(ಜೂನ್ 01) ತಿಳಿಸಿದೆ.
ಇದನ್ನೂ ಓದಿ:ಲಸಿಕೆ ಮಿಶ್ರ ಪ್ರಯೋಗವಿಲ್ಲ, ಎಲ್ಲರೂ ಎರಡು ಡೋಸ್ ಲಸಿಕೆ ಪಡೆಯಲೇಬೇಕು: ಕೇಂದ್ರದ ಸ್ಪಷ್ಟನೆ
2021ರ ನೈರುತ್ಯ ಮುಂಗಾರುವಿಗೆ ಸಂಬಂಧಿಸಿದಂತೆ ಮುನ್ಸೂಚನೆಯ ಎರಡನೇ ಮಾಹಿತಿಯನ್ನು ಬಿಡುಗಡೆ ಮಾಡಿದ ಭಾರತದ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ, ಈ ವರ್ಷ ದೇಶದಲ್ಲಿ ವಾಡಿಕೆಯಂತೆ ಮುಂಗಾರು ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ಇಡೀ ದೇಶಾದ್ಯಂತ ಈ ವರ್ಷ ಸಾಮಾನ್ಯ ರೀತಿಯಲ್ಲಿಯೇ ಮುಂಗಾರು ಮಳೆ ಸುರಿಯಲಿದೆ. ನಾವು ಕೂಡಾ ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ಮೂಲಕ ಕೃಷಿ ಕ್ಷೇತ್ರಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆಯಲ್ಲಿರುವುದಾಗಿ ಮೊಹಪಾತ್ರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಬಾರಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮುಂಗಾರು ಮಳೆಯು ದೀರ್ಘಾವಧಿಯ ಸರಾಸರಿ ಶೇ. 101ರಷ್ಟು ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಇದರಲ್ಲಿ ಶೇ.4ರಷ್ಟು ಹೆಚ್ಚು ಅಥವಾ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಮೊಹಪಾತ್ರ ತಿಳಿಸಿದ್ದಾರೆ.