Advertisement
ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಯಲ್ಲಿ ವಾಯುಭಾರ ಕುಸಿತ, ಮಹಾರಾಷ್ಟ್ರದ ವಿದರ್ಭ ಮತ್ತು ಕರ್ನಾಟಕದ ಉತ್ತರ ಒಳನಾಡು ಮಧ್ಯೆ ಕಡಿಮೆ ಒತ್ತಡದ ತಗ್ಗು (ಟ್ರಫ್)ಗಳು ಉಂಟಾಗಿರುವುದು ಹಾಗೂ ಈಶಾನ್ಯ ಮಾರುತಗಳ ಪ್ರವೇಶದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳು ಮಳೆ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.
Related Articles
Advertisement
ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದಲ್ಲಿ ಮಳೆ ನೀರಿನ ರಭಸಕ್ಕೆ 3 ಕಾರು ಹಾಗೂ 8 ಬೈಕ್‌ಗಳು ಕೊಚ್ಚಿ ಹೋಗಿವೆ. 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೊಚ್ಚಿ ಹೋದ ಬೈಕ್‌ಗಳನ್ನು ಹುಡುಕಲು ಜನರು ಪರದಾಡಿದರು. ಕಾರುಗಳು ಚರಂಡಿಯಲ್ಲಿ ಪಲ್ಟಿ ಹೊಡೆದಿವೆ. ಗ್ರಾಮದ ಹನು ಮಾನ ದೇವಸ್ಥಾನಕ್ಕೂ ಮಳೆ ನೀರು ನುಗ್ಗಿ, ಅವಾಂತರ ಸೃಷ್ಟಿಸಿದೆ.
ಮಲಪ್ರಭಾ ನದಿಯ ನವಿಲುತೀರ್ಥ ಜಲಾ ಶಯದಿಂದ ಸಂಜೆಯ ವೇಳೆಗೆ 12 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಮುನವಳ್ಳಿಯ ಹಳೆಯ ಸೇತುವೆ ಜಲಾ ವೃತವಾಗಿದೆ. ಸವದತ್ತಿ ತಾಲೂಕಿನ ಇನಾಮ ಹೊಂಗಲದ ರಸ್ತೆಗೆ ನಿರ್ಮಿ ಸಿದ ಪರ್ಯಾಯ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ನಡುವಿನ ಸಂಪರ್ಕ ಕಡಿತ ಗೊಂಡಿದೆ. ಪರ್ಯಾಯ ರಸ್ತೆ ಕುಸಿದು ಉಸುಕಿನ ಸಮೇತ ಲಾರಿ ನೀರು ಪಾಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ತಾಳಿಕೋಟೆ ತಾಲೂಕಿನ ಕಲ್ಲ ದೇವನಹಳ್ಳಿ ಬಳಿ ಸೇತುವೆ ಮೇಲೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕೊಚ್ಚಿ ಹೋಗುತ್ತಿದ್ದ ಇಬ್ಬರು ಯುವಕರು ಈಜಿ ದಡ ಸೇರಿದ್ದಾರೆ. ಎರಡು ದಿನಗಳಿಂದ ಮಡಿ ಕೇರಿ, ಭಾಗಮಂಡಲ ಮತ್ತು ವಿರಾಜಪೇಟೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅ.23 ರವರೆಗೆ ಕೊಡಗಿನಲ್ಲಿ ಆರೆಂಜ್ ಅಲರ್ಟ್ ಮತ್ತು ಅ.23ರಿಂದ 24 ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ತಾಯಿ, ಮಗನ ರಕ್ಷಿಸಿದ ಗ್ರಾಮಸ್ಥರು: ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಆನಂದಪುರ ಸಮೀಪದ ಹೊಸೂರು ಗ್ರಾ.ಪಂ.ವ್ಯಾಪ್ತಿಯ ಹಂದಿಗನೂರಿನಲ್ಲಿ ನಾಗರತ್ನ ಹಾಗೂ ಮಗ ಮನೋಜ್ ಹೊಳೆಯನ್ನು ದಾಟುವಾಗ ನೀರಿಗೆ ಸಿಲುಕಿದ್ದು, ಗ್ರಾಮಸ್ಥರು ಇವರನ್ನು ರಕ್ಷಣೆ ಮಾಡಿದ್ದಾರೆ. ತಮ್ಮ ಮನೆಯ ಎತ್ತುಗಳನ್ನು ಮೇಯಿಸಲು ಹೋಗಿದ್ದು, ಮಧ್ಯಾಹ್ನ ಎತ್ತುಗಳೊಂದಿಗೆ ಹೊಳೆ ದಾಟಿಸುತ್ತಿದ್ದಂತೆ ಅಪಾರ ನೀರು ಬಂದಿದ್ದು, ದಾಟಲಾಗದೆ ಹೊಳೆಯ ಪಕ್ಕದಲ್ಲಿರುವ ಮರದಲ್ಲಿ ಆಶ್ರಯ ಪಡೆದು, ರಕ್ಷಣೆಗಾಗಿ ಕೂಗಿಕೊಂಡರು. ಸ್ಥಳೀಯ ಗ್ರಾಮಸ್ಥರು ಆಗಮಿಸಿ, ಅವರನ್ನು ರಕ್ಷಿಸಿದರು.