Advertisement
ಮಂಗಳೂರು, ಉಡುಪಿಯಲ್ಲಿ ಕಳೆದೆರಡು ದಿನಗಳಿಂದ ಮಳೆ ಬಂದರೂ ಶುಕ್ರವಾರ ದಿನವಿಡೀ ನಿರಂತರ ಸುರಿದಿದೆ. ಬಿಡದೇ ಸುರಿದ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಯಿತು. ರೈನ್‌ಕೋಟ್, ಕೊಡೆ ತಾರದೇ ನಗರಕ್ಕಾಗಮಿಸಿದವರು ಮಳೆಯಲ್ಲಿ ನೆನೆದುಕೊಂಡೇ ತೆರಳಬೇಕಾಯಿತು. ನಗರದ ಅಲ್ಲಲ್ಲಿ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ತಿಳಿಯದೇ, ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆಯಾಯಿತು. ನಂತೂರು ಬಳಿ ರಸ್ತೆ ಬದಿ ನೀರು ತುಂಬಿಕೊಂಡ ಹೊಂಡದೊಳಗೆ ರಿಕ್ಷಾವೊಂದು ಹೂತು ಹೋಗಿ ಚಾಲಕ ಪರದಾಡುವಂತಾಯಿತು.
ಕಿನ್ನಿಗೋಳಿ, ಕಟೀಲಿನಲ್ಲಿ ಉತ್ತಮ ವರ್ಷಧಾರೆಯಾಗಿದೆ. ಬೆಳ್ತಂಗಡಿ, ಸುರತ್ಕಲ್ ಪರಿಸರದಲ್ಲಿ ಸಾಧಾರಣ ಮಳೆಯಾದರೆ, ಪುತ್ತೂರು, ಮೂಲ್ಕಿ, ಹಳೆಯಂಗಡಿ, ಮುಕ್ಕದಲ್ಲಿಯೂ ಮಳೆ ಬಂದಿದೆ. ಬೆಳ್ತಂಗಡಿ, ಸುಳ್ಯ, ಮೂಡಬಿದಿರೆಯಲ್ಲಿ ಸಣ್ಣ ಪ್ರಮಾಣದ ಮಳೆ ಬಂದಿದೆ. ಬಂಟ್ವಾಳದಲ್ಲಿ ಆಗಾಗ ಗಾಳಿ ಸಹಿತ ಸಾಧಾರಣ ಮಳೆ ಸುರಿದಿದೆ. ಮಣಿಪಾಲ, ಶಿರ್ವ, ಕಾರ್ಕಳ, ಬೆಳ್ಮಣ್ಣು, ಕಾಪು, ಪಡುಬಿದ್ರಿ, ಬ್ರಹ್ಮಾವರ, ಹೆಬ್ರಿ ಪರಿಸರದಲ್ಲಿ ಮಳೆಯಾಗಿದೆ. ಕಾಸರಗೋಡಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಭಾರೀ ಮಳೆ: ಸಂಚಾರ ಅಸ್ತವ್ಯಸ್ತ
ಮಂಗಳೂರಿನಲ್ಲಿ ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆ ಯಾಗಿದ್ದು, ರಸ್ತೆಯಲ್ಲಿ ನೀರು ಶೇಖರಣೆಗೊಂಡು ಸಂಚಾರ ವ್ಯವಸ್ಥೆ ಬಾಧಿತವಾಯಿತು. ರಾತ್ರಿ ವೇಳೆಗೆ ಮಳೆ ಬಿರುಸುಗೊಂಡಿದ್ದು, ಭಾರೀ ಗಾಳಿ ಮಳೆ ಸುರಿದಿದೆ. ಕಳೆದ ಕೆಲವು ದಿನಗಳಿಂದ ಲಘು ಮಳೆಯಾಗುತ್ತಿದ್ದರೂ ಮುಂಗಾರಿನ ಆರಂಭದ ದಿನವೇ ಅಬ್ಬರದ ಮಳೆಯಾಗಿದ್ದರಿಂದ ಇದಕ್ಕೆ ಸಿದ್ಧಗೊಂಡು ಬಂದಿರದ ಜನರು ಸಮಸ್ಯೆಗೆ ಸಿಲುಕಿದರು. ರಾತ್ರಿ ಸುರಿದ ಮಳೆಯಿಂದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
Related Articles
Advertisement