Advertisement

Monsoon Rain: ಆರಿದ್ರ ಅಬ್ಬರಕ್ಕೆ ಜನಜೀವನ ತತ್ತರ,  ಇಬ್ಬರು ಸಾವು

12:26 AM Jul 05, 2024 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ, ಉತ್ತರ ಕನ್ನಡ‌, ಮಲೆನಾಡು ಭಾಗದಲ್ಲಿ ಆರಿದ್ರ ಮಳೆಯಬ್ಬರಕ್ಕೆ ಜನಜೀವನ ತತ್ತರಗೊಂಡಿದ್ದು, ಮಳೆ ಸಂಬಂಧಿ ಅವಘಡದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ನೂರಾರು ಎಕರೆ ಪ್ರದೇಶಗಳಲ್ಲಿನ ಅಡಕೆ, ರಬ್ಬರ್‌ ಮರಗಳು ನೆಲಕ್ಕುರುಳಿವೆ. ಹಲವೆಡೆ ಗುಡ್ಡ ಕುಸಿತದಿಂದ ಸಂಚಾರ ಸ್ಥಗಿತಗೊಂಡಿದೆ.

Advertisement

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬೈಸೆ ಗ್ರಾಮದ ಚೀಕಳಿ ನಿವಾಸಿ ಶಶಿಕಲಾ (43) ಜಮೀನಿನ ಸಂಕ ದಾಟಲು ಹೋದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಜಮೀನಿನ ಹತ್ತಿರದ ಸಂಕದಿಂದ 1 ಕಿ.ಮೀ. ದೂರದ ಹಳ್ಳದಲ್ಲಿ ಮೃತದೇಹ ಪತ್ತೆಯಾಗಿದೆ. ಭಾರೀ ಮಳೆಯಿಂದಾಗಿ ಉಡುಪಿ ಜಿಲ್ಲೆ ಕೊಲ್ಲೂರಿನ ಸೊಸೈಟಿಗುಡ್ಡೆಯಲ್ಲಿ ಗುಡ್ಡ ಕುಸಿದು ಹಳ್ಳಿಬೇರು ನಿವಾಸಿ ಅಂಬಾ (55) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಆಮ್ನಿ ವಾಹನ ಮೇಲೆ ಬೃಹತ್‌ ಮರ ಬಿದ್ದಿದೆ. ಶೃಂಗೇರಿ ಶಾರದಾಂಬೆ ದೇಗುಲದ ದಡದವರೆಗೆ ತುಂಗಾ ನದಿ ನೀರು ಹರಿದು ಬಂದಿದ್ದು, ನದಿ ಇಕ್ಕೆಲಗಳಲ್ಲಿನ ತೋಟಗಳು ಜಲಾವೃತವಾಗಿವೆ. ಉತ್ತರ ಕನ್ನಡ ಜಿಲ್ಲೆಯ  ಶಿರಸಿ, ದಾಂಡೇಲಿಯಲ್ಲಿ ಭಾರೀ ಮಳೆಯಿಂದಾಗಿ. ಅಘನಾಶಿನಿ ನದಿಯಲ್ಲಿ ನೆರೆಯುಂಟಾಗಿದೆ. ಅಲ್ಲಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಗುಡ್ಡ ಕುಸಿತದಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-206 ಬಂದ್‌ ಆಗಿದೆ. ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜಲಪಾತಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಅಣೆಕಟ್ಟುಗಳಲ್ಲಿ ಒಳಹರಿವು ಹೆಚ್ಚಳ
ಅಣೆಕಟ್ಟುಗಳಿಗೂ ಒಳಹರಿವು ಹೆಚ್ಚಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್‌.ಎಸ್‌. ಅಣೆಕಟ್ಟಿನಲ್ಲಿ ನೀರಿನ ಮಟ್ಟ 100 ಅಡಿ ಅಂಚಿಗೆ ತಲುಪಿದೆ. ಮಹಾರಾಷ್ಟ್ರದ ಸಾವಂತವಾಡಿ ಹಾಗೂ ಅಂಬೋಲಿ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ಬೆಳಗಾವಿ ಜಿಲ್ಲೆಯ ಹಿಡಕಲ್‌ ಜಲಾಶಯದಲ್ಲಿ ಒಂದೇ ದಿನ 3 ಅಡಿ ನೀರು ಹೆಚ್ಚಳವಾಗಿದೆ. ಘಟಪ್ರಭಾ ನದಿಯ ಮೂಲಕ ಹಿಡಕಲ್‌ ಜಲಾಶಯಕ್ಕೆ ಈಗ 13 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಕೊಯ್ನಾ ಹಾಗೂ ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು ಕೃಷ್ಣಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲಿ ಏರಿಕೆಯಾಗಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 24,000, ದೂಧಗಂಗಾದಲ್ಲಿ 7 ಸಾವಿರ ಕ್ಯುಸೆಕ್‌ ಸೇರಿದಂತೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್‌ ಬಳಿ ಕೃಷ್ಣಾ ನದಿಗೆ ಒಟ್ಟು 31 ಸಾವಿರ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಖಾನಾಪುರ ತಾಲೂಕಿನ ಕಣಕುಂಬಿ ಮತ್ತು ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಸಹ ಭಾರೀ ಮಳೆಯಾಗುತ್ತಿದೆ. ಇದರಿಂದ ಮಲಪ್ರಭಾ ನದಿಯ ಮೂಲಕ ಜಲಾಶಯಕ್ಕೆ 9 ಸಾವಿರ ಕ್ಯುಸೆಕ್‌ ನೀರು ಹರಿದು ಬರಲಾರಂಭಿಸಿದೆ. ಮಲಪ್ರಭಾ ನದಿ ಮೈದುಂಬಿ ಹರಿಯುತ್ತಿದೆ.

Advertisement

ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಮಲೆನಾಡಿನ ಕೊಪ್ಪ, ಶೃಂಗೇರಿ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯಕ್ಕೆ 39 ಸಾವಿರ ಕ್ಯುಸೆಕ್‌ಗೂ ಅ ಧಿಕ ನೀರು ಬರುತ್ತಿದ್ದು ಅಷ್ಟೂ ನೀರನ್ನು ನದಿಗೆ ಬಿಡಲಾಗುತ್ತಿದೆ. ತುಂಗಾ ನದಿ ಮೈದುಂಬಿದೆ. ಭದ್ರಾ ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದ್ದು, ಭದ್ರಾ ಜಲಾಶಯಕ್ಕೆ ಭಾರೀ ನೀರು ಹರಿದು ಬರುತ್ತಿದೆ. ಹೊಸನಗರ, ನಗರ, ಹುಲಿಕಲ್‌ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ 60,238 ಸಾವಿರ ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, ಕಳೆದ 24 ತಾಸುಗಳಲ್ಲಿ ಐದು ಅಡಿ ನೀರು ಹೆಚ್ಚಳವಾಗಿದೆ.

100 ಅಡಿಗೇರಿದ ಕೆಆರ್‌ಎಸ್‌
ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಗುರುವಾರ ಸಂಜೆ ವೇಳೆಗೆ 99.70 ಅಡಿಗೆ ತಲುಪಿದ್ದು, ಶುಕ್ರವಾರ ಬೆಳಗ್ಗೆ ವೇಳೆಗೆ ನೂರರ ಗಡಿ ದಾಟುವ ನಿರೀಕ್ಷೆಯಿದೆ. ಇನ್ನು ಕೇರಳದ ವೈನಾಡು ಪ್ರದೇಶದಲ್ಲಿ ಮಳೆ ಮತ್ತೆ ಚುರುಕುಗೊಂಡಿದ್ದು, ಜೀವನಾಡಿ ಕಬಿನಿ ಜಲಾಶಯಕ್ಕೆ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡಿದ್ದು, 2,284 (19.52 ಟಿಎಂಸಿ) ಅಡಿಗಳ ಗರಿಷ್ಠ ಸಾಮರ್ಥ್ಯದ ಜಲಾಶಯ 2,281 ಅಡಿಗೆ ತಲುಪಿದೆ. ನಾಲ್ಕು ಕ್ರಸ್ಟ್‌ ಗೇಟ್‌ಗಳ ಮೂಲಕ ನೀರನ್ನು ಹೊರ ಹರಿಸಲು ಜಲಾಶಯದ ಅಧಿಕಾರಿಗಳು ಸಿದ್ಧತೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next