Advertisement
ಮೊದಲ ಮಳೆ ದಿಢೀರನೇ ಬಂದಿತ್ತು. ಇಂದಿನಿಂದ ಮಳೆ ಎಂಬುದು ಗೊತ್ತಿತ್ತಾದರೂ ಅಪ್ಪ ಪೇಟೆಗೆ ಕೊಡೆಯೊಂದಿಗೆ ಹೋಗಿರಲಿಲ್ಲ. ಹಗಲು ಇದ್ದಂತೆಯೇ ಒಮ್ಮೆಲೆ ಕಪ್ಪಾಯಿತು. ಪೇಟೆಯಲ್ಲಿ ದಾರಿದೀಪಗಳಿಲ್ಲದೇ ನಡೆಯುವುದೇ ಕಷ್ಟ ಎನ್ನುವ ಹಾಗೆ. ಮಯ್ಯರ ಅಂಗಡಿಯಲ್ಲಿ ಕುಳಿತಿದ್ದ ಅಪ್ಪ ಒಮ್ಮೆ ಹೊರಗೆ ಬಂದು ಆಕಾಶದತ್ತ ಕಂಡು, ಮಳೆ ಸುರಿಯುವುದರೊಳಗೆ ಮನೆ ಸೇರಲು ಬೀಸು ಬೀಸಾಗಿ ನಡೆಯತೊಡಗಿದ. ಹತ್ತು ಹೆಜ್ಜೆ ಹಾಕುವಷ್ಟರಲ್ಲೇ ಮಳೆಗಾಲದ ಮೊದಲ ಮಳೆ ಸುರಿಯತೊಡಗಿತು. ಮಳೆಯಲ್ಲೇ ನೆನೆದುಕೊಂಡು ಮನೆ ಸೇರಿದ್ದ ಅಪ್ಪನಿಗೆ ಅಮ್ಮ ಗದರಿಸಿದ್ದೂ ನೆನಪಿದೆ. “ಮೊದಲ ಮಳೆಯಲ್ಲಿ ನೆನೆಯೋದೇ? ನಾಳೆಯಿಂದಲೆ ಎಲ್ಲ ಕಾಯಿಲೆ ಶುರುವಾಗುತ್ತೆ. ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು, ಎಲ್ಲರಿಗೂ ಬರದೇ ಇರುತ್ತದೆಯಾ? ಮಳೆಗಾಲ ಮುಗಿಯುವುದರೊಳಗೆ ಒಬ್ಬರದಲ್ಲ ಒಬ್ಬರದ್ದು ಯೋಗ ಕ್ಷೇಮ ನೋಡ್ತಾ ಇದ್ದರೆ ಮುಗೀತು” ಎಂದಿದ್ದಳು. ಅಪ್ಪ ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೇ “ನಿನ್ನೆ ತೆಗೆದಿಟ್ಟು ಕೊಡೆಗಳನ್ನೆಲ್ಲ ಹೊರಗಿಡು. ನಾಳೆಯಿಂದ ಬೇಕಾಗುತ್ತಲ್ಲ’ ಎಂದು ಮಾತನ್ನು ಬೇರೆಡೆಗೆ ಹೊರಳಿಸಿದ್ದ.
Related Articles
Advertisement
ಮಹಾನ್ ಸಂಗೀತಗಾರ ತಾನ್‌ಸೇನ್ ರಾಗಗಳಿಂದಲೇ ದೀಪವನ್ನೂ ಉರಿಸುತ್ತಿದ್ದ, ಮಳೆಯನ್ನೂ ಸುರಿಸುತ್ತಿದ್ದನಂತೆ. ಅವನೊಬ್ಬ ಅಪ್ರತಿಮ ಸಂಗೀತಗಾರನಾಗಿದ್ದ. ಅವನ ಸಾಧನೆ ಬಗೆಗಿನ ಪ್ರಶಂಸೆ ಕೇಳಿ ರಾಜ ಅಕ್ಬರ್ ತನ್ನ ಆಸ್ಥಾನಕ್ಕೆ ಕರೆಸಿದನಂತೆ. ತಾನ್‌ಸೇನ್‌ನ ಸಂಗೀತವನ್ನು ಕೇಳಿ ಸಂಭ್ರಮಿಸಿದ ಅಕ್ಬರ್ ಹತ್ತಾರು ಉಡುಗೊರೆಗಳನ್ನು ಕೊಟ್ಟನಂತೆ. ಇವೆಲ್ಲವನ್ನೂ ಕಂಡ ಆಸ್ಥಾನದ ಇತರ ವಿದ್ವಾಂಸರು ತಾನ್‌ಸೇನ್ ಇನ್ನಷ್ಟು ದಿನ ಇಲ್ಲೇ ಇದ್ದರೆ ನಮಗೆ ಉಳಿಗಾಲವಿಲ್ಲ ಎಂದು ಯೋಚಿಸಿ ಒಂದು ಉಪಾಯ ಮಾಡಿದರಂತೆ. ಅವರಾಗಿಯೇ ತಾನ್ ಸೇನ್ ತನ್ನ ರಾಗಗಳಿಂದಲೇ ದೀಪವನ್ನೂ ಬೆಳಗಿಸುತ್ತಾನೆ, ಮಳೆಯನ್ನೂ ಸುರಿಸುತ್ತಾನೆ ಎಂದು ವದಂತಿ ಹಬ್ಬಿಸಿದರಂತೆ.
ಇದನ್ನು ಕೇಳಿ ಉಲ್ಲಸಿತನಾದ ಅಕ್ಬರ್ , ಆ ಮಹಾಗಳಿಗೆಯನ್ನು ಅನುಭವಿಸಲು ಸಿದ್ಧನಾಗಿ ತಾನ್‌ಸೇನ್‌ನ ಸಂಗೀತ ಕಛೇರಿಗೆ ದಿನ ನಿಗದಿ ಮಾಡಿದನಂತೆ. ಇದನ್ನು ಕೇಳಿ ತಾನ್‌ಸೇನ್ ದಿಗಿಲುಗೊಂಡನಾದರೂ ರಾಜನ ಆಸೆಯನ್ನು ಧಿಕ್ಕರಿಸುವಂತಿಲ್ಲ ಎಂದುಕೊಂದು ಒಂದಿಷ್ಟು ಕಾಲಾವಕಾಶ ಕೇಳಿದನಂತೆ. ಈ ಮಧ್ಯೆ ತನ್ನ ಮಗಳಲ್ಲಿ ವಿಷಯವನ್ನು ತಿಳಿಸಿ, ಅವಳಿಗೆ ಮೇಘ ಮಲ್ಹಾರ ರಾಗವನ್ನು ಕಲಿಸಿದನಂತೆ. ಯಾಕೆಂದರೆ ದೀಪಕ್ ರಾಗವನ್ನು ಸರಿಯಾಗಿ ಹಾಡಿದರೆ ಬರೀ ದೀಪವಷ್ಟೇ ಹೊತ್ತಿಕೊಳ್ಳುವುದಿಲ್ಲ, ಸುತ್ತಲಿನ ತಾಪಮಾನ ಹೆಚ್ಚಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಹಾಗಾದರೆ ದೊಡ್ಡ ಅಪಾಯ. ಆಗ ಮಗಳು ಮೇಘ ಮಲ್ಹಾರ ಹಾಡಿದರೆ ಮಳೆ ಸುರಿದು ವಾತಾವರಣ ತಂಪಾಗುತ್ತದೆ ಎಂಬುದು ಲೆಕ್ಕಾಚಾರವಾಗಿತ್ತು.
ಅದರಂತೆ ಆ ದಿನವೂ ಬಂದಿತು. ಪ್ರತ್ಯೇಕವಾದ ವೇದಿಕೆಯಲ್ಲಿ ಕಛೇರಿಯೂ ಆರಂಭವಾಯಿತು. ತಾನ್‌ಸೇನ್ ದೀಪಕ್ ರಾಗವನ್ನು ಹಾಡತೊಡಗಿದ. ದೀಪಗಳು ಹೊತ್ತಿದವು. ಜತೆಗೆ ಸುತ್ತಲಿನ ತಾಪಮಾನವೂ ಹೆಚ್ಚತೊಡಗಿತು. ಒಂದು ಹಂತ ತಲುಪಿದಾಗ ಮಗಳು ಮೇಘ ಮಲ್ಹಾರ ಹಾಡತೊಡಗಿದಳು. ಮಳೆಯೂ ಸುರಿಯತೊಡಗಿತಂತೆ. ಹಾಗಾಗಿ ತಾನ್‌ಸೇನ್ ಸಂಗೀತ ಸಾಮ್ರಾಟನೆಂದೇ ಪ್ರಖ್ಯಾತಿ. ಅಕ್ಬರ್ ತನ್ನ ಸ್ಥಾನದ ನವರತ್ನಗಳಲ್ಲಿ ತಾನ್‌ಸೇನ್‌ನನ್ನೂ ಒಬ್ಬನೆಂದು ಗೌರವಿಸಿದ್ದನಂತೆ.
ಕೇರಳಕ್ಕೆ ಮುಂಗಾರು ಬಂದಿದೆ. ನಮ್ಮೂರಿನ ಮೆಟ್ಟಿಲಿನ ಬಳಿಯೂ ಬಂದ ಸುದ್ದಿಯಿದೆ. ಮೂರು ದಿನಗಳಷ್ಟು ತಾಪಮಾನ ಈಗಿಲ್ಲ. ಮೋಡ ಮುಸುಕು ಸರಿಸಿ ಸುರಿದರೆ ಮುಂಗಾರು ಶುರು. ಆ ಕ್ಷಣಗಳೂ ಇನ್ನೇನೂ ಬಂದು ಬಿಡುತ್ತವೆ. ಸಂಗೀತಕ್ಕೆ ಸಮಾಧಾನಿಸುವ ಗುಣವಿರುವುದು ದಿಟ. ಅದರಲ್ಲಿ ಅನುಮಾನವೂ ಇಲ್ಲ, ಶಕ್ಯವೂ ಸಲ್ಲ. ಅದಕ್ಕೆ ಸಾವಿರಾರು ಉದಾಹರಣೆಗಳಿವೆ. ಈ ಬಾರಿ ಮತ್ತೆ ಪ್ರಯತ್ನಿಸೋಣ. ಮಳೆ ರಾಗಗಳನ್ನು ಹಚ್ಚಿಕೊಂಡು ಕುಳಿತುಕೊಳ್ಳೋಣ ಒಂದಷ್ಟು ಹೊತ್ತು. ರಾಗಗಳನ್ನು ಆಸ್ವಾದಿಸೋಣ. ಅಷ್ಟರಲ್ಲಿ ಮಳೆಯೂ ಬರತೊಡಗುತ್ತದೆ. ಒಳಗೆ ಮಳೆ ರಾಗದ ಆಲಾಪನೆ. ಹೊರಗೆ ಮಳೆಯದ್ದೇ ಆಲಾಪನೆ. ಎರಡೂ ಸಂಗೀತವೇ. ತಲೆದೂಗೋಣ, ಮನಸಾರೆ ನೆನೆಯೋಣ “ಮಳೆಗಳಲ್ಲಿ”.
-ಅರವಿಂದ ನಾವಡ