ಗೋಣಿಕೊಪ್ಪಲು: ಉದಯೋನ್ಮುಖ ಬರೆಹಗಾರರಿಂದ ಸಾಮಾಜ ಕಟ್ಟುವಂತಹ ಸಾಹಿತ್ಯ ಸೃಷ್ಟಿಯಾಗಲಿ ಎಂದು ಕಾವೇರಿ ಎಜುಕೇಷನ್ ಅಧ್ಯಕ್ಷ ಡಾ| ಅಜ್ಜಿನಿಕಂಡ ಗಣಪತಿ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಾವೇರಿ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ಕಾವೇರಿ ಕಾಲೇಜು ಸಭಾಂಗಣದಲ್ಲಿ ನಡೆದ ಮುಂಗಾರು ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಬೆಳವಣಿಗೆಗೆ ಸಾಹಿತ್ಯ ಅಮೂಲ್ಯವಾ ದದ್ದು. ಉತ್ತಮ ವಿಚಾರಗಳನ್ನೊಳಗೊಂಡ ಸಾಹಿತ್ಯಗಳ ಸೃಷ್ಟಿಯಾಗಬೇಕಾಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯದ ಒಲವು ಮೂಡಿಸಿ ಕೊಳ್ಳಬೇಕು ಎಂದು ಹೇಳಿದರು. ಸಾಹಿತಿ ಪ್ರೊ| ದಂಬೆಕುಡಿ ಸುಶೀಲಾ ಸುಬ್ರ ಮಣಿ ಮಾತನಾಡಿ, ಧರ್ಮಗಳ ಅವಹೇಳನ, ಮಾಂಸ ಭಕ್ಷಣೆ ವಿಚಾರಗಳ ಸಾಹಿತ್ಯಗಳು ಸೃಷ್ಟಿಯಾಗು ವುದರಿಂದ ಸಮಾಜಕ್ಕೆ ಒಳಿತಾಗುವುದಿಲ್ಲ. ಉತ್ತಮ ಸಾಹಿತ್ಯ ಜೀವನವನ್ನು ಗಟ್ಟಿಗೊಳಿಸುತ್ತದೆ. ಸಮಾಜ ವನ್ನು ಕಟ್ಟಲು ಸಾಹಿತ್ಯದಿಂದ ಸಾಧ್ಯ. ಸಾಹಿತ್ಯದಿಂದ ಧರ್ಮ ವನ್ನು ಜಾತಿಯನ್ನು ಅಳೆದು ಸಮಾಜವನ್ನು ಒಡೆದು ಆಳುವ ನೀತಿ ಬದಲಾಗಬೇಕಾಗಿದೆ.
ಸಮಾಜವನ್ನು ಪರಿವರ್ತನೆ ಮಾಡುವ ಬರೆಹಗಳು ಸೃಷ್ಟಿಯಾಗಬೇಕು. ಸಾಹಿತ್ಯದಿಂದ ಮನುಷ್ಯನ ನಡುವಿನಲ್ಲಿ ಭಾಂಧವ್ಯ ಬೆಳೆಯಲು ಸಾಧ್ಯವಿದೆ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಆಧ್ಯಾತ್ಮ ಮತ್ತು ಸಾಹಿತ್ಯದಿಂದ ಬದುಕಿನಲ್ಲಿ ಉತ್ತಮ ದಾರಿ ಕಂಡುಕೊಳ್ಳಲು ಸಾದ್ಯವಿದೆ. ಸಮಾಜವನ್ನು ಸರಿದಾರಿಗೆ ತರಲು ಸಾಹಿತ್ಯದಿಂದ ಸಾದ್ಯ ಎಂದು ಹೇಳಿದರು.ತಾ| ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಹೊಂದಿರಬೇಕು. ಪುಸ್ತಕಗಳ ಓದಿನಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಉತ್ತಮ ವಿಚಾರಗಳು ಮಸ್ತಕಕ್ಕೆ ತುಂಬುತ್ತದೆ ಎಂದು ಹೇಳಿದರು.
ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದರೆ ಸಂಸ್ಕಾರವಂತರಾಗಬೇಕು. ಸಾಹಿತ್ಯಆಸಕ್ತಿಯಿಂದ ಸಂಸ್ಕಾರ ಬೆಳೆಸಿಕೊಳ್ಳಬಹುದು ಎಂದರು.
ಚುಟುಕು ರತ್ನ ಸಾಹಿತಿ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳೆಯಲು ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲು ಪುಸ್ತಕಗಳ ಸ್ನೇಹ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಾಹಿತಿಗಳಾದ ಕುಲ್ಲಂಚಂಡ ಚಿಪ್ಪಿ, ಅಜ್ಜಿನಿಕಂಡ ಟಿ. ಬೀಮಯ್ಯ ಮಾತನಾಡಿದರು.