ಹೊಸದಿಲ್ಲಿ: ಅರಬ್ಬೀ ಸಮುದ್ರದಲ್ಲಿ ಎದ್ದಿದ್ದ ವಾಯು ಚಂಡಮಾರುತ ದಿಂದಾಗಿ ವಿಳಂಬವಾಗಿರುವ ಮುಂಗಾರು ಈಗ ಚುರುಕುಗೊಳ್ಳುತ್ತಿದ್ದು, ಮುಂದಿನ 2-3 ದಿನಗಳಲ್ಲಿ ಪ್ರಗತಿ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಯು ಚಂಡಮಾರುತದ ತೀವ್ರತೆಯು ಕುಸಿದಿರುವ ಕಾರಣ, ಮಾರುತಗಳು ಅರಬ್ಬೀ ಸಮುದ್ರದ ಕಡೆಗೆ ಬೀಸಲಾರಂಭಿಸಿದೆ. ಹೀಗಾಗಿ ಮುಂಗಾರು ಚುರುಕಾಗಲಿದೆ ಎಂದು ಇಲಾಖೆ ಹೇಳಿದೆ.
ಜತೆಗೆ, ಮುಂಗಾರು ಮಾರುತಗಳು ಜೂ.18ರಂದು ಆಂಧ್ರ ಹಾಗೂ ಜೂ.20ರಂದು ತೆಲಂಗಾಣವನ್ನು ಪ್ರವೇಶಿಸಲಿವೆ. ಜೂ.13 ರಂದೇ ಮುಂಗಾರು ತೆಲಂಗಾಣಕ್ಕೆ ಪ್ರವೇ ಶಿಸಬೇಕಾಗಿತ್ತು. ಅಲ್ಲದೆ, ಈ ಹೊತ್ತಿಗಾಗಲೇ ಮುಂಗಾರು ಮಾರುತಗಳು ಮಧ್ಯಪ್ರದೇಶ, ರಾಜ ಸ್ಥಾನ, ಉತ್ತರ ಪ್ರದೇಶದ ಪೂರ್ವ ಭಾಗ, ಗುಜರಾತ್ ಸೇರಿದಂತೆ ದೇಶದ ಕೇಂದ್ರ ಭಾಗದಲ್ಲಿ ಆವರಿಸಬೇಕಾಗಿತ್ತು. ಆದರೆ, ಚಂಡ ಮಾರುತ ಪ್ರಭಾವದಿಂದಾಗಿ ಇನ್ನೂ ಮಹಾರಾಷ್ಟ್ರವನ್ನೇ ಮುಂಗಾರು ತಲುಪಿಲ್ಲ. ಸದ್ಯಕ್ಕೆ ಮುಂಗಾರು ದಕ್ಷಿಣ ಪರ್ಯಾಯ ದ್ವೀಪ ಪ್ರದೇಶ ಗಳಾದ ಮಂಗಳೂರು, ಮೈಸೂರು, ಕಡಲೂರು ಹಾಗೂ ಈಶಾನ್ಯದಲ್ಲಿ ಪಸ್ಸಿಘಾಟ್ ಮತ್ತು ಅಗರ್ತಲಾಕ್ಕೆ ಸೀಮಿತವಾಗಿದೆ. ಮಹಾರಾಷ್ಟ್ರದಿಂದ ಗುಜರಾತ್‌ವರೆಗಿನ ಪಶ್ಚಿಮ ಕರಾವಳಿಯಲ್ಲಿ, ಚಂಡಮಾರುತದಿಂದಾಗಿ ಸ್ವಲ್ಪ ಮಳೆಯಾಗಿದೆ. ಮುಂಗಾರಿ ನಿಂದಾಗಿ ಮಳೆಯಾಗಿರುವುದು ಕೇವಲ ಕರ್ನಾಟಕ ಮತ್ತು ಕೇರಳ ಕರಾವಳಿಗಳಲ್ಲಿ ಮಾತ್ರ ಎಂದು ಇಲಾಖೆ ತಿಳಿಸಿದೆ.