ನವದೆಹಲಿ:ಬಹು ನಿರೀಕ್ಷೆಯ ನಂತರ ಕೊನೆಗೂ ಮುಂಗಾರು ಮಳೆ ಆರಂಭವಾಗಿದ್ದು, ಉತ್ತರ ಭಾರತದ ಮಧ್ಯಪ್ರದೇಶ, ಉತ್ತರಪ್ರದೇಶ, ಹಿಮಾಚಲ್ ಪ್ರದೇಶ, ಉತ್ತರಾಖಂಡ್ ಮತ್ತು ರಾಜಸ್ಥಾನಗಳಲ್ಲಿ ಮಂಗಳವಾರ ರಾತ್ರಿಯಿಂದ ಅಬ್ಬರಿಸತೊಡಗಿದೆ.
ಉತ್ತರಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರದಿಂದಾಗಿ ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದವು. ಇದರ ಪರಿಣಾಮ 20 ಮಂದಿ ಸಾವನ್ನಪ್ಪಿದ್ದು, ಮಳೆ ಸಂಬಂಧಿ ಘಟನೆಯಲ್ಲಿ 19 ಜನರು ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಮಳೆಯಿಂದಾಗಿ ಹಲವಾರು ರಸ್ತೆಗಳು ಕೊಚ್ಚಿಹೋಗಿದೆ. ನದಿ ಸಮೀಪದ ಹಾಗೂ ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ವರದಿ ವಿವರಿಸಿದೆ. ಉತ್ತರಪ್ರದೇಶದ ಬಲಾರಾಮ್ ಪುರ್ ಜಿಲ್ಲೆಯಲ್ಲಿ ಸತತ 18ಗಂಟೆಗಳಿಂದ ಮಳೆ ಸುರಿಯುತ್ತಿದ್ದು, ಎಲ್ಲೆಡೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದೆ.
ಮಳೆಯಿಂದಾಗಿ ಆ್ಯಂಬುಲೆನ್ಸ್ ನೀರಿನಲ್ಲಿ ಮುಳುಗಿಹೋಗಿದ್ದು, ತಕ್ಷಣವೇ ಆ್ಯಂಬುಲೆನ್ಸ್ ನಲ್ಲಿ ಮೊಬೈಲ್ ಮೆಡಿಕಲ್ ಯೂನಿಟ್ ಹಾಗೂ ಇನ್ನಿತರ ವಸ್ತು ಮತ್ತು ಚಾಲಕ, ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಮಳೆಯಿಂದಾಗಿ ರೈಲ್ವೆ ಸೇವೆಯನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶ, ಹಿಮಾಚಲ್ ಪ್ರದೇಶದಲ್ಲಿಯೂ ಮುಂಗಾರು ಮಳೆ ಧಾರಾಕಾರವಾಗಿ ಸುರಿಯುವ ಮೂಲಕ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ವರದಿ ಹೇಳಿದೆ.