Advertisement

ಜಲಕಂಟಕಕ್ಕೆ ಇನ್ನಷ್ಟು ಬಲಿ, ಮತ್ತಷ್ಟು ಅವಾಂತರ

10:24 AM Aug 13, 2019 | Team Udayavani |

ಕೇರಳ,ಮಹಾರಾಷ್ಟ್ರದಲ್ಲಿ ಮಳೆಯಿಂದಾದ ಅವಘಡ, ಅವಾಂತರಗಳು ಹೆಚ್ಚಾಗಿದ್ದು,ಸಾವಿನ ಸಂಖ್ಯೆಯೂ ಹೆಚ್ಚಾಗಿ ದೆ. ಕೇರಳದಲ್ಲಿ ಸಾವಿನ ಸಂಖ್ಯೆ 67ಕ್ಕೆ ಮುಟ್ಟಿದ್ದರೆ, ಮಹಾರಾಷ್ಟ್ರದಲ್ಲಿ 31ಕ್ಕೇರಿದೆ. ರವಿವಾರ ಮಧ್ಯಾಹ್ನದಿಂದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪುನಃ ತನ್ನ ಸೇವೆ ಆರಂಭಿಸಿದೆ. ಆದರೆ, ಜನಜೀವನ ಮಾತ್ರ ಯಥಾಸ್ಥಿತಿಗೆ ಮರಳಿಲ್ಲ. ಗುಜರಾತ್‌ನಲ್ಲೂ ಮಳೆ ತನ್ನ ರಂಪಾಟ ಮುಂದುವರಿಸಿದೆ. ಹಿಮಾಚಲ ಪ್ರದೇಶ, ಛತ್ತೀಸ್‌ಗಢದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.

Advertisement

ಆಪೋಶನಗೊಂಡ ಹಳ್ಳಿಗಳ ಸುಳಿವೇ ಇಲ್ಲ!
ನಾಲ್ಕು ದಿನಗಳ ಹಿಂದೆ ವಯನಾಡ್‌ ಜಿಲ್ಲೆಯಲ್ಲಿ ಸಂಭವಿಸಿದ್ದ ಗುಡ್ಡ ಕುಸಿತ, ಕವಲಪ್ಪಾರ ಹಾಗೂ ಪುತ್ತುಮಾಲಾ ಎಂಬ ಎರಡು ಹಳ್ಳಿಗಳನ್ನು ಆಪೋಶನ ತೆಗೆದುಕೊಂಡಿದೆ. ಆ ಹಳ್ಳಿಗಳ ಮೇಲೆ ಧುತ್ತನೆ ಬಂದೆರಗಿರುವ ದೈತ್ಯಾತಿದೈತ್ಯ ಮಣ್ಣಿನ ಹೆಂಟೆಗಳು ಹಾಗೂ ದೊಡ್ಡ ಕಲ್ಲು ಬಂಡೆಗಳು, ಆ ಹಳ್ಳಿಗಳನ್ನು ಹೇಳ ಹೆಸರಿಲ್ಲದೆ ನಿರ್ನಾಮ ಮಾಡಿದೆ. ಸುಂದರ ಪರಿಸರದಲ್ಲಿ ಬೆಳೆದಿದ್ದ ಅಡಕೆ ಹಾಗೂ ರಬ್ಬರ್‌ ಮರಗಳು ಬುಡಮೇಲಾಗಿರುವುದು ಅಲ್ಲಲ್ಲಿ ಕಾಣಸಿಗುತ್ತಿದ್ದು, ಆ ಹಳ್ಳಿಗಳಿಗೆ ಸಾಕ್ಷ್ಯಾಧಾರ ಒದಗಿಸುತ್ತಿವೆ. ಎರಡೂ ಹಳ್ಳಿಗಳ ಮೇಲೆ 12 ಅಡಿ ಮಣ್ಣು ಬಿದ್ದಿದೆ ಎಂದು ಅಂದಾಜಿಸಲಾಗಿದೆ.

ಮಲಪ್ಪುರಂ ಜಿಲ್ಲೆಯ ಕವಲಪ್ಪಾರ ಹಳ್ಳಿಯಲ್ಲಿ ಸುಮಾರು 35 ಮನೆಗಳಿದ್ದು, 65 ಜನರು ವಾಸವಾಗಿದ್ದರು. ಸದಾ ಮಕ್ಕಳ ಕಲರವದಿಂದ ತುಂಬಿ ತುಳುಕುತ್ತಿದ್ದ ಈ ಹಳ್ಳಿ ಮೇಲೆ ಬಂದು ಬಿದ್ದ ಬೆಟ್ಟ, ಆ ಕಲರವವನ್ನು ನುಂಗಿ ಹಾಕಿದೆ ಎಂದು ಆ ಪ್ರಾಂತ್ಯದ ಇತರ ಹಳ್ಳಿಗಳ ಜನರು ತಿಳಿಸಿದ್ದಾರೆ. ಬೆಟ್ಟ ಕುಸಿದುಬಿದ್ದ ಮರುದಿನ ಅಗಾಧ ಮಣ್ಣಿನ ರಾಶಿಯ ನಡುವಿನಿಂದ ಮಗುವೊಂದು ಅಳುವ ಸದ್ದು ಕೇಳಿಸುತ್ತಿತ್ತು. ಆದರೆ, ಒಂದು ದಿನದ ನಂತರ ಅದು ನಿಂತು ಹೋಯಿತು ಎಂದು ಹೇಳಲಾಗುತ್ತಿದೆ. ಘಟನೆ ನಡೆದಾಗ ಅಲ್ಲಿದ್ದ 60 ಜನರಲ್ಲಿ ಐವರು ಮಾತ್ರ ಬಚಾವಾಗಿದ್ದಾರೆ. ಮನೆಯಿಂದ ಹೊರಗೆ ಓಡಿಬಂದ ಮಹಿಳೆಯೊಬ್ಬಳು ನಂತರ, ತನ್ನ ಮಕ್ಕಳನ್ನು ಕರೆತರಲು ಮನೆಯೊಳಗೆ ಹೋದವಳು ಪುನಃ ಹಿಂತಿರುಗಿ ಬರಲಿಲ್ಲ ಎಂದು ಬಚಾವಾದವರು ತಿಳಿಸಿದ್ದಾರೆ. ಮಣ್ಣಿನ ರಾಶಿಯಿಂದ 9 ಮೃತದೇಹ ಹೊರತಗೆಯಲಾಗಿದೆ. ಕಲ್ಪೆಟ್ಟಾ ಜಿಲ್ಲೆಯ ಪುತ್ತುಮಾಲಾ ಹಳ್ಳಿಯದ್ದೂ ಇದೇ ಕಥೆಯಾಗಿದ್ದು, ಮನೆಗಳು, ಕಟ್ಟಡಗಳು, ಒಂದು ದೇಗುಲ, ಮಸೀದಿ ಸಹ ಮಣ್ಣಿನಲ್ಲಿ ಅವಿತು ಹೋಗಿದೆ. ಇಲ್ಲಿ 250 ಜನರು ಇದ್ದರೆಂದು ಹೇಳಲಾಗಿದೆ.

ಸಾವಿನ ಸಂಖ್ಯೆ ಏರಿಕೆ: ಕೇರಳವನ್ನು ತೊಪ್ಪೆಯಾಗಿಸಿರುವ ಮಳೆ, ರವಿವಾರ, ತನ್ನ ಆರ್ಭಟ ನಿಲ್ಲಿಸಿತ್ತು. ಆದರೂ, ಮಳೆ ಸಂಬಂ ಧಿತ ಘಟನೆಗಳಲ್ಲಿ ಸಾವಿಗೀಡಾದವರ ಸಂಖ್ಯೆ 67ಕ್ಕೇರಿದೆ. 2.27 ಲಕ್ಷ ಜನ ನಿರ್ಗತಿಕರಾಗಿದ್ದಾರೆ. ಕಣ್ಣೂರು, ಕಾಸರಗೋಡು, ವಯನಾಡ್‌ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ರಾಹುಲ್‌ ಭೇಟಿ: ಕವಲಪ್ಪಾರ ಹಳ್ಳಿಯಿದ್ದ ಪ್ರದೇಶಕ್ಕೆ ರವಿವಾರ ವಯನಾಡ್‌ಸಂಸದ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಭೇಟಿ ಕುರಿತು ಟ್ವೀಟ್‌ ಮಾಡಿರುವ ಅವರು, “ವಯನಾಡ್‌ನ‌ ಅಲ್ಲೋಲ ಕಲ್ಲೋಲ ಆಘಾತಕಾರಿಯಾಗಿದೆ’ ಎಂದಿದ್ದು, ಜನರ ಪುನರ್ವಸ ತಿಗೆ ಏನು ಬೇಕೋ ಅದನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.

Advertisement

ಎಚ್ಚರಿಕೆಯ ಕರೆಗಂಟೆ!: 2018ರಲ್ಲಿ ಕೇರಳದಲ್ಲಿ ಉಂಟಾಗಿದ್ದ ನೆರೆ ಪರಿಸ್ಥಿತಿಯು ಪಶ್ಚಿಮ ಘಟ್ಟಗಳ ವಿನಾಶದ ಮುನ್ಸೂಚನೆಯಾಗಿತ್ತು ಎಂದು ಇತ್ತೀಚೆಗೆ ಬಿಡುಗಡೆ ಗೊಂಡಿರುವ, ಬಿ. ವಿಜು ಎಂಬ ಪರಿಸರ ತಜ್ಞರೊಬ್ಬರು ಬರೆದಿರುವ “ಇನ್‌ ಫ್ಲಡ್‌ ಆ್ಯಂಡ್‌ ಫ್ಯೂರಿ: ಎಕೋಲಾಜಿಕಲ್‌ ಡಿವಾಸ್ಟೇಷನ್‌ ಇನ್‌ ದ ವೆಸ್ಟರ್ನ್ ಘಾಟ್ಸ್‌’ ಎಂಬ ಪುಸ್ತಕದಲ್ಲಿ ಉಲ್ಲೇಖೀಸಲಾಗಿದೆ.

ಸಾಂಗ್ಲಿ: ಮತ್ತೆ ಐದು ಶವ ಪತ್ತೆ
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಶನಿವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 17ಕ್ಕೇರಿದೆ. ಭಾನು ವಾರ ಐವರ ಶವಗಳು ಪತ್ತೆಯಾಗಿವೆ. ಪಶ್ಚಿಮ ಮಹಾರಾಷ್ಟ್ರದ 5 ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಾವಿಗೀಡಾದವರ ಸಂಖ್ಯೆ 30ಕ್ಕೇರಿದೆ. ಆಮಲಟ್ಟಿ ಅಣೆಕಟ್ಟಿನಿಂದ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದೇ ವೇಳೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ರವಿವಾರ ಪ್ರವಾಹಪೀಡಿತ ಸಾಂಗ್ಲಿ, ಕೊಲ್ಹಾಪುರದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ಕೊಳೆಯುತ್ತಿರುವ ಆಲೂಗೆಡ್ಡೆ
ಮಹಾರಾಷ್ಟ್ರದಲ್ಲಿ ಮಳೆಯ ಅವಾಂತರಕ್ಕೆ ತುತ್ತಾದ ಜಿಲ್ಲೆಗಳಲ್ಲಿ ಕೊಲ್ಹಾಪುರ ಪ್ರಮುಖವಾದದ್ದು. ಈಗ ಜಲಾವೃತವಾಗಿರುವ ಈ ಜಿಲ್ಲೆಯ ಮೂಲಕ ಸಾಗುತ್ತಿದ್ದ ತರಕಾರಿ ಲಾರಿಗಳು ದಾರಿಗಾಣದೇ ಹಲವು ದಿನಗಳಿಂದ ನಿಂತಲ್ಲೇ ನಿಲ್ಲುವಂಥ ಸ್ಥಿತಿ ನಿರ್ಮಾಣವಾಗಿದೆ. ವಾರಕ್ಕೂ ಮೊದಲೇ, ಆಲೂಗೆಡ್ಡೆಯ ಮೂಟೆಗಳನ್ನು ಹೊತ್ತು ಗುಜರಾತ್‌ನಿಂದ ಹೊರಟಿದ್ದ ಈ ಲಾರಿಗಳು ಕೊಲ್ಹಾಪುರದಲ್ಲಿ ಸಿಲುಕಿಕೊಂಡಿವೆ.

ವಾರದಿಂದಲೂ ಲಾರಿಗಳು ನಿಂತಲ್ಲೇ ನಿಂತಿರುವುದರಿಂದ ಹಾಗೂ ಎಡೆಬಿಡದೆ ಮಳೆ ಸುರಿಯುತ್ತಿರುವುದ ರಿಂದ ಅವುಗಳಲ್ಲಿದ್ದ 30 ಟನ್‌ನಷ್ಟು ಆಲೂಗೆಡ್ಡೆಗಳು ಕೊಳೆಯಲಾ ರಂಭಿಸಿದ್ದು, ಸುಮಾರು 5 ಲಕ್ಷ ರೂ.ಗಳ ಮಾಲು ನಷ್ಟವಾಗುತ್ತಿದೆ ಎಂದು ಟ್ರಕ್‌ ಚಾಲಕರೊಬ್ಬರು ನೋವು ತೋಡಿಕೊಂಡಿದ್ದಾನೆ.

ಶುಲ್ಕವಿಲ್ಲ
ಕರ್ನಾಟಕ, ಮಹಾರಾಷ್ಟ್ರ, ಕೇರಳದ ಜಲಾವೃತ ಪ್ರದೇಶ ಗಳಿಗೆ ಸಾಗಿಸಲಾಗುವ ಪರಿಹಾರ ಸಾಮಗ್ರಿಗಳು, ನಿರಾಶ್ರಿತರಿಗೆ ನೀಡಲಾಗುವ ಬಟ್ಟೆ, ಆಹಾರ, ಔಷಧಿ ಸಾಮಗ್ರಿಗಳ ಸಾಗಾಟದ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

ಮಳೆ ಎಚ್ಚರಿಕೆ
ಸೋಮವಾರ ಹಾಗೂ ಮಂಗಳವಾರದ ಹವಾಮಾನಕ್ಕೆ ಸಂಬಂಧಿಸಿದಂತೆ, ಹಿಮಾಚಲ ಪ್ರದೇಶಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ, ಕೇಂದ್ರ ಹವಾಮಾನ ಇಲಾಖೆಯು “ಯೆಲ್ಲೋ ಅಲರ್ಟ್‌’ ಸಂದೇಶ ರವಾನಿಸಿದೆ. ಆ. 17ರವರೆಗೂ ಆ ರಾಜ್ಯದಲ್ಲಿ ಭಾರೀ ಮಳೆ ಸುರಿಯಲಿದೆ ಎಂದಿದೆ. ಛತ್ತೀಸ್‌ಗಢದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 4ರಿಂದ 6 ದಿನಗಳವರೆಗೆ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದಿದೆ.

ಗುಜರಾತ್‌: ಸಾವಿನ ಸಂಖ್ಯೆ 31ಕ್ಕೆ
ಗುಜರಾತ್‌ನ ಸೌರಾಷ್ಟ್ರ, ಕಛ…ಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಶನಿವಾರ, ರವಿವಾರ ಮಳೆ ಸಂಬಂಧಿ ದುರ್ಘ‌ಟನೆಗಳಲ್ಲಿ 12 ಜನ ಮೃತಪಟ್ಟಿದ್ದಾರೆ. ಹೀಗಾಗಿ, ಈವರೆಗೆ ಸಾವಿಗೀಡಾದವರ ಸಂಖ್ಯೆ 31ಕ್ಕೆ ಏರಿದೆ. ರವಿವಾರ ಅರಬ್ಬೀ ಸಮುದ್ರದಲ್ಲಿ ಐವರು ಮೀನುಗಾರರಿದ್ದ ದೋಣಿ ಮುಳುಗಿದ್ದು ಎಲ್ಲರೂ ಜಲಸಮಾಧಿಯಾಗಿದ್ದಾರೆ. ಸುರೇಂದ್ರ ನಗರ ಜಿಲ್ಲೆಯ ಬಳಿ ಸಾಗುವ ಫಾಲ್ಕು ನದಿ ದಾಟುವಾಗ 7 ಮಂದಿ ನೀರು ಪಾಲಾಗಿದ್ದಾರೆ.

ಪಾಕ್‌, ಮ್ಯಾನ್ಮಾರ್‌ನಲ್ಲೂ ಜೀವಹಾನಿ
ಪಾಕಿಸ್ಥಾನದ ಆಗ್ನೇಯ ಪ್ರಾಂತ್ಯದಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಏಕಾಏಕಿ ಉಂಟಾದ ಪ್ರವಾಹ ಹಾಗೂ ಭೂಕುಸಿತಗಳಿಂದ ಮಹಿಳೆಯರು, ಮಕ್ಕಳು ಸೇರಿ 28 ಜನರು ಮೃತಪಟ್ಟಿದ್ದಾರೆ. ಮ್ಯಾನ್ಮಾರ್‌ ಕೂಡ ಮಳೆಯ ರುದ್ರನರ್ತನದ ಬಾಧೆಗೆ ಒಳಗಾಗಿದ್ದು, ಶುಕ್ರವಾರ ವಾಯವ್ಯ ಭಾಗದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 51ಕ್ಕೆ ಏರಿದೆ. ಬೆಟ್ಟದ ಕುಸಿದ ಬೆನ್ನಲ್ಲೇ ದೊಡ್ಡಮಟ್ಟದ ಪ್ರವಾಹ ಸೃಷ್ಟಿಯಾಗಿದ್ದು, ಹತ್ತಿರದ ಜನವಸತಿ ಪ್ರದೇಶಗಳು ಜಲಾವೃತಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next