ತಣ್ಣನೆ ಮಳೆಗೂ ಸೋಮಾರಿತನಕ್ಕೂ ಅವಿನಾಭಾವ ಸಂಬಂಧ. ಕುಳಿತಲ್ಲೇ ಕುಳಿತು, ಮೈ ಜಡ್ಡುಗಟ್ಟಿದ ದೇಹವನ್ನು ಆಲಸ್ಯದ ಗೂಡು ಮಾಡಿಕೊಳ್ಳುವುದು, ಒಂದಿಷ್ಟು ಕುರುಕಲು ತಿಂದು ಆರೋಗ್ಯವನ್ನೂ ಕೆಡಿಸಿಕೊಳ್ಳುವುದು ಪ್ರತಿ ಮಳೆಗಾಲದಲ್ಲಿನ ಸಾಮಾನ್ಯ ಕತೆ. ಅದರಲ್ಲೂ ಮಹಿಳೆಯರ ಆರೋಗ್ಯವನ್ನು ಮಾನ್ಸೂನ್ ಇನ್ನಿಲ್ಲದಂತೆ ಹದಗೆಡಿಸುತ್ತದೆ. ದೈಹಿಕವಾಗಿ ಚಟುವಟಿಕೆಯಿಂದ ಇದ್ದರಷ್ಟೇ ಆಕೆ ಮಾನ್ಸೂನ್‌ನ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಹಾಗಾದರೆ, ಮಳೆಗಾಲದಲ್ಲಿ ಮಹಿಳೆ ದೈಹಿಕವಾಗಿ ಸದೃಢವಾಗಿರುವುದು ಹೇಗೆ?
1 ಹೊರಗೆ ಜೋರು ಮಳೆ ಸುರೀತಿದೆ ಅಂದಾಕ್ಷಣ ಹೆದರಿ ಕೂರಬೇಕಂತೇನಿಲ್ಲ. ಮೈ ನೆನೆಯದಂತೆ, ಯೋಗ್ಯ ರೈನ್‌ಕೋಟ್ ಧರಿಸಿ, ಒಂದಷ್ಟು ಕಿಲೋಮೀಟರ್‌ವರೆಗೆ ಓಡಿರಿ. ಇದರಿಂದ ದೇಹದಲ್ಲಿ ಜೀವರಾಸಾಯನಿಕ ಕ್ರಿಯೆ ಹೆಚ್ಚುತ್ತದೆ. ಬೊಜ್ಜು ಕರಗುವುದಲ್ಲದೇ, ಪಾದಗಳೂ ಮೃದುವಾಗುತ್ತವೆ.
2 ಹೊರಗೆ ಕಾಲಿಟ್ಟರೆ ಶೀತವಾಗುತ್ತದೆ, ಜ್ವರ ಬರುತ್ತದೆ ಎಂಬಷ್ಟು ಸೂಕ್ಷ್ಮ ಆರೋಗ್ಯದವರು ಮನೆಯಲ್ಲಿನ ಮೆಟ್ಟಿಲುಗಳನ್ನೇ ವ್ಯಾಯಾಮ ಕೇಂದ್ರ ಮಾಡಿಕೊಳ್ಳಬಹುದು. 8-10 ಬಾರಿ ಮೆಟ್ಟಿಲನ್ನು ಏರುವುದು, ಇಳಿಯುವುದನ್ನು ಮಾಡಿದರೆ, ಕಾಲುಗಳ ಸ್ನಾಯುಗಳು ಗಟ್ಟಿಯಾಗುತ್ತವೆ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು.
3 ಒಂದು ಕಂಬಕ್ಕೆ ಉದ್ದದ, ತೂಕದ ಹಗ್ಗ ಕಟ್ಟಿ ಅದನ್ನು ನಿರಂತರವಾಗಿ ಗಾಳಿಯಲ್ಲಿ ಜಗ್ಗುವುದರಿಂದ ದೇಹಕ್ಕೆ ಅತ್ಯುತ್ತಮ ವ್ಯಾಯಾಮ ಸಿಗುತ್ತದೆ. ಇದನ್ನು “ಬ್ಯಾಟಲ್ ರೋಪ್’ ವಕೌìಟ್ ಅಂತಾರೆ. ಕೇವಲ 20 ನಿಮಿಷ ಈ ಹಗ್ಗ ವ್ಯಾಯಾಮ ಮಾಡಿದರೆ, ದೇಹದ ಅಷ್ಟೂ ಸ್ನಾಯುಗಳಿಗೆ ವ್ಯಾಯಾಮ ಸಿಕ್ಕಂತಾಗುತ್ತದೆ.
4 ಮಳೆಗಾಲದಲ್ಲಿ ದೇಹವನ್ನು ಫಿಟ್ ಆಗಿಡಲೆಂದೇ ಒಂದಿಷ್ಟು ಯೋಗಾಸನಗಳೂ ಇವೆ. ಅಧೋಮುಖ ಶ್ವಾಸಾಸನ, ಸೇತು ಬಂಧಾಸನ, ಭುಜಂಗಾಸನ, ನೌಕಾಸನಗಳು ಮಾನ್ಸೂನ್ ಸಂಬಂಧಿತ ಜಡತ್ವ ನಿವಾರಿಸಲು ಸಹಕಾರಿ. ಇವೆಲ್ಲದರ ಜತೆ ಪ್ರಾಣಾಯಾಮ ಅನುಸರಿಸುವುದು ಆವಶ್ಯ.
5 ಬೆಳಗ್ಗೆದ್ದ ಕೂಡಲೇ ಕಾಫಿಗೋ, ಚಹಾಕ್ಕೋ ತುಟಿಯೊಡ್ಡುವ ಬದಲು, ಬಿಸಿನೀರಿಗೆ ಲಿಂಬೆರಸ, ತುಸು ಜೇನುತುಪ್ಪ ಬೆರೆಸಿ ನಿತ್ಯವೂ ಸೇವಿಸಬೇಕು. ದೇಹವನ್ನು ಇಡೀ ದಿನ ಆ್ಯಕ್ಟಿವ್ ಆಗಿಡಲು ಇದೊಂದು ಕಪ್ ಸಾಕು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣವೂ ಈ ಪೇಯದಲ್ಲಿದೆ.
6 ಕುರುಕುಲು ತಿಂಡಿ ತಿಂದರೆ, ನಾಲಿಗೆಗೇನೋ ಮಜಾ ಸಿಗುತ್ತೆ. ಮಳೆ ನೋಡ್ತಾ ನೋಡ್ತಾ ಟೈಂಪಾಸೂ ಆಗುತ್ತೆ ಎನ್ನುವುದು ತಪ್ಪು ಕಲ್ಪನೆ. ಕುರುಕಲು ಮೋಹ, ದೇಹದ ಆರೋಗ್ಯವನ್ನು ಹದಗೆಡಿಸುತ್ತದೆ ಎಂಬುದು ಗೊತ್ತಿರಲಿ.
7ಮಾನ್ಸೂನ್‌ನ ಈ 3-4 ತಿಂಗಳ ಕಾಲದಲ್ಲಿ ಭರತನಾಟ್ಯ ಇಲ್ಲವೇ ಯಾವುದಾದರೂ ಒಂದು ನೃತ್ಯ ಪ್ರಕಾರವನ್ನು ಅಭ್ಯಾಸ ಮಾಡಿ. ಮಳೆಯ ನೆಪದಲ್ಲಿ ಕಲೆಯನ್ನು ಅರಗಿಸಿಕೊಂಡರೆ, ಮುಂದೆ ಇದಕ್ಕೆ ಸತ#ಲ ಸಿಕ್ಕೇ ಸಿಗುತ್ತದೆ ಎಂಬುದು ನಿಮಗೆ ತಿಳಿದಿರಲಿ.