Advertisement

ಮುಂಗಾರು: ಶೇ.70 ಇಳುವರಿ ನಿರೀಕ್ಷೆ

12:13 PM Sep 02, 2017 | |

ಬೀದರ: ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ನಲುಗಿದ್ದ ಗಡಿ ಜಿಲ್ಲೆ ಬೀದರನಲ್ಲಿ ಈ ವರ್ಷ ಮುಂಗಾರು ಉತ್ತಮವಾಗಿದ್ದು, ರೈತರ ಮೊಗದಲ್ಲಿ ಮಂದ ಹಾಸ ಮೂಡಿಸಿದೆ. ಜಿಲ್ಲೆಯಲ್ಲೆಡೆ ಉದ್ದು, ಹೆಸರಿನ ರಾಶಿ ಭರದಿಂದ ಸಾಗಿದ್ದು, ಹಿಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Advertisement

ರಾಜ್ಯದೆಲ್ಲೆಡೆ ಮಳೆ ಕೊರತೆಯಿಂದ ಈ ವರ್ಷ ಬರ ಆವರಿಸಿ ರೈತರು ಬೆಳೆ ಬೆಳೆಯಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೆ, ಬೀದರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಬಿತ್ತನೆಯಾದ ಬಳಿಕ ಕೆಲ ದಿನಗಳು ಮಳೆ ಕೈ ಕೊಟ್ಟಿದ್ದರಿಂದ ರೈತರು ಆತಂಕದಲ್ಲಿದ್ದರು. ಆದರೆ, ನಂತರ ಉತ್ತಮ ಮಳೆಯಾಗಿದೆ. ಹಾಗಾಗಿ ಶೇ.70ರಷ್ಟು ಇಳುವರಿ ಬರುವ ನಿರೀಕ್ಷೆ ಇದೆ. ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ 685 ಮಿ.ಮೀ.ನಷ್ಟು ಮಳೆ
ಆಗಬೇಕಿದ್ದು, ಈಗಾಗಲೇ 485ನಷ್ಟು ಮಳೆ ಸುರಿದೆ. ಸಧ್ಯ ಮಳೆ ಬಿಡುವು ಕೊಟ್ಟಿದ್ದರಿಂದ ರೈತರಿಗೆ ರಾಶಿ ಮಾಡಿಕೊಳ್ಳಲು ಅನುಕೂಲವಾಗಿದೆ.

ಬೀದರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈ ವರ್ಷ 3.39 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 3,28,952
ಹೆಕ್ಟೇರ್‌ (ಶೇ.96.86)ನಷ್ಟು ಬಿತ್ತನೆಯಾಗಿದೆ. ಸೋಯಾಬಿನ್‌, ಉದ್ದು ಮತ್ತು ಹೆಸರು ಬೆಳೆ ಗುರಿಗಿಂತ ಹೆಚ್ಚು ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಪ್ರಮುಖವಾಗಿ ಸೋಯಾಬಿನ್‌ 1.35 ಲಕ್ಷ ಹೆಕ್ಟೇರ್‌ ಪ್ರದೇಶ ಗುರಿ ಇದ್ದರೆ 1.40 ಲಕ್ಷ ಹೆಕ್ಟೇರ್‌ ನಷ್ಟು ಬಿತ್ತನೆಯಾಗಿದೆ. ಉದ್ದು 23,000 ಹೆಕ್ಟೇರ್‌ ಗುರಿ ಪೈಕಿ 27,939 ಹೆಕ್ಟೇರ್‌ ಮತ್ತು ಹೆಸರು
30,000 ಹೆಕ್ಟೇರ್‌ ಪೈಕಿ 33.655 ಹೆಕ್ಟೇರ್‌ನಷ್ಟು ಬಿತ್ತನೆ ಆಗಿದೆ.

ಇನ್ನು ಹಿಂಗಾರು ಹಂಗಾಮಿನಲ್ಲಿಯೂ ಉತ್ತಮ ಮಳೆ ನಿರೀಕ್ಷೆಯೊಂದಿಗೆ ರೈತರು ಬೀಜ ಮತ್ತು ಗೊಬ್ಬರದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಉದ್ದು, ಹೆಸರು ರಾಶಿ ಬಳಿಕ ಅಕ್ಟೋಬರ್‌ ಮೊದಲ ವಾರದಲ್ಲಿ ಹಿಂಗಾರು
ಬಿತ್ತನೆ ಚಟವಟಿಕೆಗಳು ಚುರುಕುಗೊಳ್ಳಲಿವೆ. ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಮುಖ್ಯವಾಗಿ ಜೋಳ ಮತ್ತು ಕಡಲೆಯನ್ನು ಹೆಚ್ಚು ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಈ ವರ್ಷ ಕಡಲೆ 53,000 ಹೆಕ್ಟೇರ್‌, ಜೋಳ 30,000 ಹೆಕ್ಟೇರ್‌, ಕುಸಬೆ 10000, ಗೋಧಿ 8000 ಹೆಕ್ಟೇರ್‌ ಮತ್ತು ಸೂರ್ಯಕಾಂತಿ 6500 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ
ಗುರಿ ಹೊಂದಲಾಗಿದೆ. ಆಗಸ್ಟ್‌ ತಿಂಗಳಲ್ಲಿ 197 ಮಿ.ಮೀ. ವಾಡಿಕೆ ಮಳೆಗಿಂತ 204 ಮಿ.ಮೀ.ನಷ್ಟು ಮಳೆ ಸುರಿದಿರುವುದು ತೊಗರಿ ಮತ್ತು ಸೋಯಾಬಿನ್‌ ಬೆಳೆಗೆ ಸಹಕಾರಿಯಾಗಲಿದೆ ಎಂದು ರೈತರು ಅಂದಾಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next