Advertisement
ಜೂನ್ 10ರ ವೇಳೆಗೆ ಕರ್ನಾಟಕಕ್ಕೂ ಮುಂಗಾರು ಕರಾವಳಿ ಮೂಲಕ ಪ್ರವೇಶಿಸುವ ಸಾಧ್ಯತೆ ಇದೆ. ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದರು ಮಾನ್ಸೂನ್ ಮಾರುತ ಪ್ರಬಲವಾಗಿಲ್ಲ. ಹೀಗಾಗಿ ಎರಡು ದಿನ ತಡವಾಗುವ ಸಂಭವ ಇದೆ. ಈವರೆಗಿನ ಕೊರತೆಯನ್ನು ಇದು ನೀಗಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೇಶಾದ್ಯಂತ ಜನರು ಕುಡಿಯುವ ನೀರಿಗೂ ತತ್ವಾರ ಅನುಭವಿಸುತ್ತಿರುವ ಹಾಗೂ ಕೃಷಿ ವಲಯ ಸಂಕಷ್ಟದಲ್ಲಿರುವ ಮಧ್ಯೆಯೇ ಮಾನ್ಸೂನ್ ಮಾರುತಗಳು ಆಗಮಿಸಿರುವುದು ಜನರಲ್ಲಿ ಸಂತಸವನ್ನು ಮೂಡಿಸಿದೆ. ದೇಶದ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ನದಿ ಹಾಗೂ ಆಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಭಾರಿ ಕುಸಿತ ಕಂಡಿತ್ತು.
ಕೇರಳದ ಬಹುತೇಕ ಭಾಗಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದೆ. ಇಲ್ಲಿನ 4 ಜಿಲ್ಲೆಗಳಲ್ಲಿ ಜೂನ್ 10ರ ವರೆಗೂ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳ, ಲಕ್ಷದ್ವೀಪ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕೇರಳದ ಕೊಲ್ಲಂ ಮತ್ತು ಅಳಪ್ಪುಳ ಜಿಲ್ಲೆಗಳಲ್ಲಿ ಜೂ.9ಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಂದರೆ ಈ ಭಾಗದಲ್ಲಿ ವಿಪರೀತ ಮಳೆಯಾಗಲಿದ್ದು, ಮುನ್ನೆಚ್ಚರಿಕೆ ವಹಿಸುವ ಅಗತ್ಯವಿರುತ್ತದೆ. ಅದೇ ರೀತಿ, ತಿರುವನಂತಪುರಂ, ಕೊಲ್ಲಂ, ಅಳಪ್ಪುಳ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಜೂ.10ಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.