ಬೆಳ್ಮಣ್: ಕಳೆದೆರಡು ದಿನಗಳ ಹಿಂದೆ ಸಮುದ್ರದ ಉಪ್ಪು ನೀರು ತುಂಬಿ ಸುದ್ದಿಯಾಗಿದ್ದ ಸಂಕಲಕರಿಯ ಶಾಂಭವಿ ನದಿಯಲ್ಲಿ ಮಳೆ ಬಂದು ನೀರು ಹರಿದಿದೆ. ಕಳೆದ ವಾರ ಸುರಿದ ಮಳೆಯಿಂದ ಸಾಣೂರು ಕಡೆಯಿಂದ ಪ್ರವಹಿಸುವ ಶಾಂಭವಿ ನದಿಗೆ ಅಲ್ಲಲ್ಲಿ ತೋಡು, ಹಳ್ಳಗಳಿಂದ ನೀರು ಪ್ರವೇಶಿಸಿದೆ.
ಮೂಲ್ಕಿ ಭಾಗದಿಂದ ಸಂಕಲಕರಿಯದವರೆಗೂ ಕಡಲ ನೀರು ಉಕ್ಕೇರಿ ಶನಿವಾರವೂ ಇಳಿದಿರಲಿಲ್ಲ. ಇದರಿಂದ ಇಲ್ಲೀಗ ಉಪ್ಪು-ಸಿಹಿನೀರು ಸೇರಿಕೊಂಡಿದೆ. ಇನ್ನೆರಡು ದಿನಗಳಲ್ಲಿ ಉಪ್ಪು ನೀರಿನ ಪ್ರವಾಹ ಕಡಿಮೆಯಾಗಬಹುದೆಂದು ನಂಬಲಾಗಿದೆ.
ನದಿ ಮೀನುಗಳಿಗೆ ಕಂಟಕ
ಶಾಂಭವಿ ನದಿಗೆ ಉಪ್ಪು ನೀರು ಪ್ರವೇಶಿಸಿದ್ದ ಪರಿಣಾಮವಾಗಿ ನದಿಯ ಮೀನುಗಳು ಜೀವ ಬಿಟ್ಟಿವೆ. ಆದರೂ ಭಾರೀ ಪ್ರಮಾಣದ ಮುಗುಡು ಮೀನುಗಳನ್ನು ಪಲಿಮಾರು ಕಡೆಯ ಜನ ಹಿಡಿದು ಮಾರಾಟ ಮಾಡಿದ್ದಾರೆ.
500ಕ್ಕೂ ಹೆಚ್ಚು ಬೃಹತ್ ಗಾತ್ರದ ಮುಗುಡುಗಳನ್ನು ಮಾರಾಟ ಮಾಡಲಾಗಿದೆ. ಇವುಗಳ ಪೈಕಿ 50 ಮೀನುಗಳನ್ನು ಮುಂಡ್ಕೂರಿನಲ್ಲಿಯೇ ಮಾರಾಟ ಮಾಡಲಾಗಿದೆ. ಹಲವು ಮೀನುಗಳು ನೀರಿನಲ್ಲಿಯೇ ಜೀವ ಕಳೆದುಕೊಂಡಿವೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು ಇನ್ನೂ ಮಳೆ ಬಂದರೆ ನದಿ ತುಂಬಿ ಹರಿಯುವ ಸಾಧ್ಯತೆ ಇದೆ. ಆದ್ದರಿಂದ ಕೃಷಿ ಚಟುವಟಿಕೆಗಳಿಗೆ ಇನ್ನೂ ವೇಗ ಸಿಕ್ಕಿಲ್ಲ ಎಂದು ಸಂಕಲಕರಿಯದ ಕೃಷಿಕ ದೊಡ್ಡಮನೆ ಭಾಸ್ಕರ ಶೆಟ್ಟಿ ತಿಳಿಸಿದ್ದಾರೆ.