Advertisement
ಮುಖ್ಯವಾಗಿ ಬೈಂದೂರು ಹಾಗೂ ಕುಂದಾಪುರ ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿ ಭತ್ತದ ಬೇಸಾಯ ಗ್ರಾಮಸ್ಥರ ಪ್ರಮುಖ ಉದ್ಯೋಗವಾಗಿದೆ. ಮುಂಗಾರು ಬೆಳೆ ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಕಟಾವಿಗೆ ಸಿದ್ಧಗೊಳ್ಳುತ್ತದೆ. ಆದರೆ ನಿರಂತರ ಮಳೆಯ ಪರಿಣಾಮ ಸದ್ಯದ ಮಟ್ಟಿಗೆ ಕಟಾವು ಆರಂಭಿಸಲು ಸಾಧ್ಯವಾಗಿಲ್ಲ. ಹವಾಮಾನ ವೈಪರೀತ್ಯ ಒಂದೆಡೆಯಾದರೆ ಕಾಡು ಪ್ರಾಣಿಗಳ ಹಾವಳಿ ಮತ್ತೂಂದೆಡೆಯಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೈತರು ಅಟ್ಟಣಿಗೆ (ಮನೆ ಹಳ್ಳಿ) ನಿರ್ಮಿಸಿಕೊಂಡು ರಾತ್ರಿಯಿಡಿ ಗದ್ದೆ ಕಾಯುತ್ತಾರೆ. ಕಾಡುಹಂದಿಯ ಕಾಟ ಈ ವರ್ಷ ಅತ್ಯಧಿಕವಾಗಿದೆ. ನವಿಲು, ಕಡವೆ, ಕಾಡುಕೋಣ, ಹಂದಿ ಕಾಟವೂ ಇದ್ದು ಭತ್ತದ ಬೆಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಪೈರುಗಳು ಬೆಳೆದಿರುವ ಕಾರಣ ಗದ್ದೆಯಲ್ಲಿ ಮೊಳಕೆ ಬರುವ ಪರಿಸ್ಥಿತಿ ಇದೆ ಎನ್ನುವುದು ಕೃಷಿಕ ನಾರಾಯಣ ಮರಾಠಿಯವರ ಅಭಿಪ್ರಾಯ.
ಕಾಡು ನಾಶದ ಪರಿಣಾಮವಾಗಿ ಕೆಲವು ವರ್ಷಗಳಿಂದ ಪ್ರತಿ ಸಾರಿಯೂ ಭತ್ತದ ಬೆಳೆಗೆ ಕಾಡು ಪ್ರಾಣಿಗಳ ಕಾಟ ಅಧಿಕವಾಗಿದೆ. ಮಂಗಗಳು ಕಾಡು ಬಿಟ್ಟು ಊರು ಸೇರಿಕೊಂಡಿವೆ.ಮನೆಯ ಪಾತ್ರೆಯಲ್ಲಿರುವ ಆಹಾರವನ್ನು ಮಂಗಗಳು ಎತ್ತಿಕೊಂಡು ಹೋಗುತ್ತಿದ್ದು, ಭತ್ತದ ಗದ್ದೆಗೂ ಇವುಗಳ ಕಾಟ ಅಧಿಕವಾಗಿದೆ ಎನ್ನುತ್ತಾರೆ ಸ್ಥಳೀಯರು.