Advertisement

ಮುಂಗಾರು ಆಗಮನ ವ್ಯತ್ಯಯ ಸಂಭವ

02:20 AM Apr 26, 2019 | sudhir |

ಮಂಗಳೂರು: ಬಂಗಾಲ ಕೊಲ್ಲಿಯ ದಕ್ಷಿಣ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಬಲವಾಗಿದೆ. ಚಂಡಮಾರುತ ಹೆಚ್ಚು ಪ್ರಭಾವಶಾಲಿಯಾದರೆ ಅದು ಮುಂಗಾರು ಮಾರುತಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

Advertisement

ತಮಿಳುನಾಡು ತೀರದಿಂದ ತುಸು ದೂರ ಬಂಗಾಲಕೊಲ್ಲಿಯಲ್ಲಿ ನಿಮ್ನ ಒತ್ತಡ ಸೃಷ್ಟಿಯಾಗಿದೆ. ಇದು ಚಂಡಮಾರುತ ಸ್ವರೂಪ ಪಡೆಯುತ್ತಿದೆ. ಎ.27ಕ್ಕೆ ಇದರ ಸ್ಪಷ್ಟ ಚಿತ್ರಣ ಲಭಿಸಲಿದೆ. ಚಂಡಮಾರುತ ಬಂದಲ್ಲಿ ಮೋಡಗಳೆಲ್ಲ ಚೆಲ್ಲಾಪಿಲ್ಲಿಯಾಗುತ್ತದೆ. ಅನಂತರ ಮತ್ತೆ ಮೋಡ ದಟ್ಟಣೆಗೊಳ್ಳಲು
ಕೆಲವು ಸಮಯ ಬೇಕಾಗುತ್ತದೆ.

ತತ್ಪರಿಣಾಮ ಮುಂಗಾರು 15ರಿಂದ 20 ದಿನಗಳವರೆಗೆ ವಿಳಂಬವಾಗುವ ಸಂಭವ ಇದೆ.

ರಾಜ್ಯದಲ್ಲೂ ಮಳೆ
ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ನಿಮ್ನ ಒತ್ತಡದಿಂದ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿಯೂ ಉತ್ತಮ ಗಾಳಿ-ಮಳೆಯಾಗುವ ಸಂಭವ ಇದೆ. ಆ ನಡುವೆ ಅರಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಟ್ರಫ್ (ಮೋಡ ದಟ್ಟಣೆ) ಸೃಷ್ಟಿಯಾಗಿದ್ದು, ಇದರಿಂದ ರಾಜ್ಯದ ಕರಾವಳಿ ಮತ್ತು ದ.ಒಳನಾಡಿನಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ಅಂಕಿಅಂಶ ಅವಲೋಕಿಸಿದರೆ, ಕರಾವಳಿಯಲ್ಲಿ 2014ರಿಂದ 2017ರ ನಡುವಣ ಮೂರು ಮಳೆಗಾಲಗಳಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

Advertisement

ಸಾಮಾನ್ಯವಾಗಿ ಮುಂಗಾರು ಋತುವಿನಲ್ಲಿ ಕರಾವಳಿ ಪ್ರದೇಶದಲ್ಲಿ 3083 ಮಿಲಿ ಮೀ. ವಾಡಿಕೆ ಮಳೆಯಾಗಬೇಕು.

ಮುಂಗಾರು ವಿಳಂಬ ಸಾಧ್ಯತೆ
ಚಂಡಮಾರುತದ ಪರಿಣಾಮ ರಾಜ್ಯ ಕರಾವಳಿಗೂ ತಟ್ಟಲಿದೆ. ಎ.29, 30 ಮತ್ತು ಮೇ 1ರಂದು ಕರಾವಳಿ ಕರ್ನಾಟಕ ಸಹಿತ ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಬಹುದು. ಸೈಕ್ಲೋನ್‌ ಮತ್ತಷ್ಟು ಪ್ರಬಲವಾದರೆ, ಮುಂಗಾರು ವಿಳಂಬಿಸಬಹುದು.
– ಶ್ರೀನಿವಾಸ ರೆಡ್ಡಿ , ಪ್ರಾಕೃತಿಕ ವಿಕೋಪ ನಿರ್ವಹಣ ಕೇಂದ್ರದ ಅಧ್ಯಕ್ಷ

ಮೀನುಗಾರರ ಆತಂಕ
ಟ್ರಾಲ್‌ ಬೋಟ್‌ ಸಂಘದ ಅಧ್ಯಕ್ಷ ನಿತಿನ್‌ ಕುಮಾರ್‌ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಮಂಗಳೂರು ಬಂದರಿನ ತಮಿಳು ನಾಡು, ಆಂಧ್ರಪ್ರದೇಶದ ಮೀನು ಗಾರಿಕೆ ಕಾರ್ಮಿಕರು ಮತದಾನ ಮುಗಿಸಿ, ಎರಡು ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಆಗಮಿಸಿದ್ದು, ಕೆಲವು ದೋಣಿಗಳು ಮಹಾರಾಷ್ಟ್ರದ ಕಡೆಗೆ ಮೀನುಗಾರಿಕೆಗೆ ತೆರಳಿವೆ. ತಮಿಳುನಾಡಿನಲ್ಲಿ ಸೈಕ್ಲೋನ್‌ ಸೃಷ್ಟಿಯಾದರೆ ಸುತ್ತಮುತ್ತಲಿನ ಮೀನು ಗಾರರಿಗೆ ಅಲರ್ಟ್‌ ಘೋಷಿಸ ಲಾಗುತ್ತದೆ. ಆಗ ಮೀನುಗಾರರ ಟ್ರಿಪ್‌ ಕಡಿತಗೊಳ್ಳಲಿದ್ದು, ಮತ್ತಷ್ಟು ನಷ್ಟ ಅನುಭವಿಸುತ್ತಾರೆ’ ಎಂದಿದ್ದಾರೆ.

62ರಲ್ಲೂ ಕಾಣಿಸಿಕೊಂಡಿತ್ತು!: ಸಾಮಾನ್ಯವಾಗಿ ಎಪ್ರಿಲ್‌ನಲ್ಲಿ ಚಂಡಮಾರುತ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಆದರೆ ಚೆನ್ನೈಯಲ್ಲಿ 1962 ಮತ್ತು 1966ರಲ್ಲಿ ಇದೇ ರೀತಿಯ ಚಂಡಮಾರುತ ಕಾಣಿಸಿಕೊಂಡಿತ್ತು ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next