Advertisement

ಮಳೆಗಾಲ: ಮುನ್ನೆಚ್ಚರಿಕೆಯ ವರದಿ ನೀಡಲು ಎಸಿ ಸೂಚನೆ

09:07 PM May 08, 2019 | Team Udayavani |

ಪುತ್ತೂರು: ಮೇ ತಿಂಗಳು ಅಂತ್ಯ ಅಥವಾ ಜೂನ್‌ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸಲಿದ್ದು, ಕಳೆದ ವರ್ಷ ಮಳೆಯಿಂದ ಉಂಟಾದ ಸಮಸ್ಯೆಗಳು ಈ ಸಲ ಪುನರಾವರ್ತನೆ ಆಗದಂತೆ ಎಲ್ಲ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯ ಸಮಸ್ಯೆ ಗಳನ್ನು ಬಗೆಹರಿಸುವ ಕುರಿತು ವರದಿ ನೀಡುವಂತೆ ಪುತ್ತೂರು ಸಹಾಯಕ ಆಯುಕ್ತ ಎಚ್‌.ಕೆ. ಕೃಷ್ಣಮೂರ್ತಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬುಧವಾರ ಇಲ್ಲಿನ ತಾ.ಪಂ. ಸಭಾಂ ಗಣದಲ್ಲಿ ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳನ್ನೊಳಗೊಂಡ ಉಪವಿಭಾಗ ಮಟ್ಟದ ಅಧಿಕಾರಿಗಳ ವಿಪತ್ತು ನಿರ್ವಹಣ ಸಭೆ ನಡೆಸಿದ ಅವರು ಮಳೆಯನ್ನೆದುರಿಸುವ ಕುರಿತು ಮಾರ್ಗದರ್ಶನ ನೀಡಿದರು.

ಕಳೆದ ಬಾರಿ ಸುಳ್ಯದ ಜೋಡುಪಾಲ ಸಹಿತ ಮೂರು ತಾಲೂಕುಗಳ ವಿವಿಧ ಭಾಗಗಳಲ್ಲಿ ಮಳೆಯಿಂದ ಸಾಕಷ್ಟು ಹಾನಿ ಯುಂಟಾಗಿದ್ದು, ಎಲ್ಲರೂ ಸಂಘಟಿತರಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಬಾರಿಯೂ ಯಾವುದೇ ಘಟನೆಗಳು ನಡೆದರೂ ಅದನ್ನು ಎದುರಿಸಲು ಪ್ರತಿಯೊಬ್ಬರೂ ಸಿದ್ಧರಿರಬೇಕು ಎಂದರು.

ಕುಸಿಯುವ ಭೀತಿ!
ಈ ಬಾರಿಯೂ ವಿಪರೀತ ಮಳೆಯಾ ದರೆ ಸಂಪಾಜೆ, ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆಗಳಲ್ಲಿ ಗುಡ್ಡ ಕುಸಿಯುವ ಭೀತಿ ಇದೆ. ಚರಂಡಿಗಳಲ್ಲಿ ಹೂಳು ತುಂಬಿದ್ದರೆ ಮನೆಗಳಿಗೆ ನೀರು ನುಗ್ಗುವ ಆತಂಕವಿದೆ. ಅಂತಹ ಘಟನೆ ನಡೆಯದಂತೆ ಹೂಳು ತೆಗೆಯುವುದು, ಅಪಾಯಕಾರಿ ಮರಗಳ ತೆರವು ಕಾರ್ಯ ಆಗಬೇಕಿದೆ ಎಂದರು.

ಕರೆಗೆ ಸೂಕ್ತವಾಗಿ ಸ್ಪಂದಿಸಿ
ಯಾವುದೇ ಅಧಿಕಾರಿ ಅನಿವಾರ್ಯ ಸಂದರ್ಭ ಕೇಂದ್ರ ಸ್ಥಾನವನ್ನು ಬಿಡುವು ದಾದರೆ ಮೇಲಧಿಕಾರಿಗಳ ಅನುಮತಿ ಪಡೆದಿರಬೇಕು. ಯಾವುದೇ ಕಾರಣಕ್ಕೂ ಮೊಬೈಲ್‌ಗ‌ಳನ್ನು ಆಫ್‌ ಮಾಡದೆ ಯಾರದೇ ತುರ್ತು ಕರೆ ಬಂದರೂ ಸೂಕ್ತ ಸ್ಪಂದನೆ ನೀಡಬೇಕು. ತಾಲೂಕು ಕಚೇರಿ ಕಂಟ್ರೋಲ್‌ ರೂಮ್‌ನಿಂದ ಯಾವುದೇ ಸಿಬಂದಿ ಕರೆ ಮಾಡಿದರೂ ಅದನ್ನು ತಹಶೀಲ್ದಾರ್‌/ಎಸಿ ಅವರ ಕರೆ ಎಂದೇ ಭಾವಿಸಿ ತುರ್ತು ಸ್ಪಂದನೆ ನೀಡಬೇಕು ಎಂದು ಸೂಚಿಸಿದರು.

Advertisement

ಚಾರ್ಮಾಡಿ ಘಾಟಿ: ಜೆಸಿಬಿ ಸನ್ನದ್ಧವಾಗಿರಲಿ
ಕಳೆದ ಬಾರಿ ಚಾರ್ಮಾಡಿ ಘಾಟಿ ರಸ್ತೆ ಕುಸಿದು ತೊಂದರೆಯುಂಟಾಗಿತ್ತು. ತುರ್ತು ಅಗತ್ಯಕ್ಕಾಗಿ ಅಲ್ಲಿ ಒಂದು ಜೆಸಿಬಿಯನ್ನು ನಿಲ್ಲಿಸಲಾಗಿತ್ತು. ಈ ಬಾರಿಯೂ ಅದೇ ರೀತಿ ಜೆಸಿಬಿಯನ್ನು ಸನ್ನದ್ದ ಸ್ಥಿತಿಯಲ್ಲಿ ನಿಲ್ಲಿಸಬೇಕಿದೆ. ಅವರಿಗೆ ನಿರ್ದಿಷ್ಟ ಮೊತ್ತವನ್ನು ನಿಗದಿಪಡಿಸಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿ. ವೇಣೂರು, ನಾರಾವಿಯಲ್ಲಿ ನೆರೆ ಸಮಸ್ಯೆಗಳ ಕುರಿತು ಗಮನಹರಿಸಿ ಎಂದು ಬೆಳ್ತಂಗಡಿ ತಹಶೀಲ್ದಾರ್‌ಗೆ ತಿಳಿಸಿದರು.

ಡಿಸಿಗೆ ಮನವಿ ಸಲ್ಲಿಸಿ
ರಸ್ತೆಗೆ ಮರ ಬಿದ್ದಾಗ ಅವುಗಳನ್ನು ತೆರವುಗೊಳಿಸುವುಕ್ಕಾಗಿ ಯಂತ್ರಗಳ ಆವಶ್ಯಕತೆ ಇರುತ್ತದೆ. ಹೀಗಾಗಿ ಯಂತ್ರ ಗಳ ಖರೀದಿ ಮಾಡಿ ಘಟನೋತ್ತರ ಮಂಜೂರಾತಿಗಾಗಿ ಜಿಲ್ಲಾಧಿಕಾರಿಗೆ ಮನವಿ ಮಾಡೋಣ. ತುರ್ತು ಆಗ ಬೇಕಾದ ರಸ್ತೆ, ಸೇತುವೆಗಳ ಕೆಲಸಗಳಿಗೆ 5-10 ಲಕ್ಷ ರೂ.ಗಳ ಸಣ್ಣ ಮೊತ್ತವಾದರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಂಪಾಜೆ ಘಾಟಿ ರಸ್ತೆ ಕುರಿತು ಹೆಚ್ಚಿನ ಗಮನ ಹರಿಸಬೇಕು. ಜತೆಗೆ ಜೋಡುಪಾಲ, ಉಪ್ಪಿನಂಗಡಿಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯುವುದಕ್ಕೂ ಸಿದ್ಧತೆ ಮಾಡಿಕೊಳ್ಳಬೇಕು. ನೆರೆ ಪ್ರದೇಶಗಳಲ್ಲಿ ಈಜುಗಾರರ ಮಾಹಿತಿ ಇರಲಿ. ಗ್ರಾಮೀಣ ಭಾಗದ ಚರಂಡಿ ಸ್ವತ್ಛಗೊಳಿಸಬೇಕು. ಸಾಂಕ್ರಾಮಿಕ ರೋಗದ ಮುನ್ನೆಚ್ಚರಿಕೆಯಾಗಿ ಫಾಗಿಂಗ್‌ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಪುತ್ತೂರು ತಹಶೀಲ್ದಾರ್‌ ಡಾ| ಪ್ರದೀಪ್‌ಕುಮಾರ್‌, ಸುಳ್ಯ ತಹಶೀಲ್ದಾರ್‌ ಕುಂಞ ಅಹಮ್ಮದ್‌, ಬೆಳ್ತಂಗಡಿ ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಕಡಬ ತಹಶೀಲ್ದಾರ್‌ ಜೋನ್‌ ಪ್ರಕಾಶ್‌, ಸುಳ್ಯ ತಾಲೂಕು ಪಂಚಾಯತ್‌ ಇಒ ಶ್ರೀಕಂಠಮೂರ್ತಿ, ಬೆಳ್ತಂಗಡಿ ತಾಲೂಕು ಪಂಚಾಯತ್‌ ಇಒ ಕುಸುಮಾಧರ್‌ ಬಿ. ಉಪಸ್ಥಿತರಿದ್ದರು. ಪುತ್ತೂರು ತಾ.ಪಂ. ಇಒ ಜಗದೀಶ್‌ ಎಸ್‌. ಸ್ವಾಗತಿಸಿದರು.

ಎಲ್ಲರೂ ದಿನಪತ್ರಿಕೆ ಓದಿ
ಪ್ರತಿಯೊಬ್ಬ ಅಧಿಕಾರಿ ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಜನರು ತಮ್ಮ ಸಮಸ್ಯೆಗಳು ಪರಿಹಾರವಾಗದೇ ಇದ್ದಾಗ ಅದರ ಮಾಹಿತಿಯನ್ನು ಪತ್ರಕರ್ತರಿಗೆ ನೀಡುತ್ತಾರೆ. ವರದಿ ಬಂದಾಗ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಪತ್ರಿಕೆ ಓದಿದಾಗ ಸಮಸ್ಯೆಗಳ ಕುರಿತು ತಿಳಿಯಲು ಸಾಧ್ಯವಾಗುತ್ತದೆ ಎಂದು ಉಪವಿಭಾಗಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.

ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ
ವಿಪತ್ತು ನಿರ್ವಹಣೆಗೆ ಸಂಬಂಧಿಸಿ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಬೇಕು. ಮಳೆಗೆ ಸಂಬಂಧಿಸಿ ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯ ಆಗುಹೋಗುಗಳನ್ನು ಅದರ ಮೂಲಕ ಹಂಚಿಕೊಳ್ಳುವಂತೆ ಎಸಿಯವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next