ಮಳವಳ್ಳಿ: ಮಳೆ ಇಲ್ಲದೆ ಬರಗಾಲದ ಹೊಡೆತಕ್ಕೆ ಸಿಲುಕಿರುವ ಜಿಲ್ಲೆಯೊಳಗೆ ಆಹಾರ ಮತ್ತು ನೀರಿಗೆ ಎಲ್ಲಿಲ್ಲದ ಹಾಹಾಕಾರ ಸೃಷ್ಟಿಯಾಗಿದೆ. ಆಹಾರ, ನೀರು ಅರಸಿಕೊಂಡು ಕಾಡು ಪ್ರಾಣಿಗಳೂ ನಾಡಿಗೆ ಲಗ್ಗೆ ಇಡುವ ಕರುಣಾಜನಕ ಸ್ಥಿತಿ ಸೃಷ್ಟಿಯಾಗಿದೆ.
ಕೆಂಡದಂಥ ಬಿಸಿಲಿಗೆ ಕೆರೆ-ಕಟ್ಟೆಗಳು ಒಣಗಿ ಹೋಗಿವೆ, ಬಾವಿಗಳು ಬತ್ತಿಹೋಗಿವೆ, ಕೊಳವೆ ಬಾವಿಗಳು ನೀರಿಲ್ಲದೆ ಬರಿದಾಗಿವೆ. ಮಳೆಯಿಲ್ಲದೆ ಇಳೆ ಬಾಯ್ತೆರೆದುಕೊಂಡಿದೆ. ಜಾನುವಾರುಗಳು ಮೇವಿಲ್ಲದೆ ಸೊರಗಿವೆ. ಪೂರ್ವ ಮುಂಗಾರು ಸಮರ್ಪಕವಾಗಿ ಬೀಳದಿರುವುದರಿಂದ ಕಾಡುಗಳಲ್ಲಿ ಆಹಾರ-ನೀರು ಸಿಗುತ್ತಿಲ್ಲ. ಇದರಿಂದ ಕೋತಿಗಳೂ ಆಹಾರ ಮತ್ತು ನೀರಿಗಾಗಿ ಪರಿತಪಿಸುತ್ತಾ ನಾಡಿನತ್ತ ಧಾವಿಸಿವೆ.
ನೀರು ಆಹಾರಕ್ಕಾಗಿ: ಎಲ್ಲೋ ಅಪರೂಪಕ್ಕೆ ಪಟ್ಟಣ ಮತ್ತು ಗ್ರಾಮಗಳಿಗೆ ಬರುತ್ತಿದ್ದ ಕೋತಿಗಳು ತೀವ್ರ ಬರದಿಂದ ದೇವಾಲಯ, ಆಸ್ಪತ್ರೆ ಆವರಣ, ಹೋಟೆಲ್ಗಳಿರುವ ಪ್ರದೇಶಗಳಲ್ಲಿ ಮಂಗಗಳು ಬೀಡುಬಿಟ್ಟಿವೆ. ಇದಲ್ಲದೆ ಕೆಲ ಕೋತಿಗಳು ಮನೆಯ ಮೇಲೆ ಬಂದು ಆಹಾರಕ್ಕಾಗಿ ಎದುರು ನೋಡುತ್ತಿರುವ ಪ್ರಸಂಗಗಳೂ ಹೆಚ್ಚಾಗಿವೆ. ದೇವಾಲಯದಲ್ಲಿ ಭಕ್ತರು ನೀಡುವ ಪ್ರಸಾದಕ್ಕೆ, ಆಸ್ಪತ್ರೆ ಅವರಣದಲ್ಲಿ ರೋಗಿಗಳು ತಿಂದು ಮಿಕ್ಕಿದ ಆಹಾರ ಪದಾರ್ಥಗಳಿಗೆ, ಹೋಟೆಲ್ ಪ್ರದೇಶದಲ್ಲಿ ಮಾಲೀಕರು ಹಾಕುವ ಅಳಿದುಳಿದ ಅಹಾರಕ್ಕಾಗಿ ಕಾದು ಕುಳಿತು ಸಿಕ್ಕ ಆಹಾರ ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ದೃಶ್ಯ ಎಲ್ಲರ ಮನಕಲಕುತ್ತಿದೆ.
ರೈತರ ತೆಂಗಿನ ಮರ, ಮಾವಿನ ಮರ ಸೇರಿದಂತೆ ಹಣ್ಣಿನ ಅಂಗಡಿಗಳ ಬಳಿ ಕೋತಿಗಳ ಸಂತತಿ ಹೆಚ್ಚಾಗಿದೆ. ಸಾರ್ವಜನಿಕರು ಕೋತಿಗಳ ಪರಿಸ್ಥಿತಿ ಮನಗಂಡು ಆಹಾರ-ನೀರು ಕೊಟ್ಟರೆ, ಕೆಲವರು ವಾನರರು ಹೊಡೆದೋಡಿಸುತ್ತಿದ್ದಾರೆ. ಇದರಿಂದ ಕೆಲ ಕೋತಿಗಳು ಹೆದರಿ ಓಟ ಕಿತ್ತರೆ, ಮತ್ತೆ ಕೆಲ ಕೋತಿಗಳು ಹಸಿವನ್ನು ತಾಳಲಾರದೆ ಆಕ್ರೋಶದಿಂದ ತಿರುಗಿ ಬೀಳುತ್ತಿವೆ.
ತೆಂಗಿನ ಮರಗಳಿಂದ ಎಳನೀರು ಕಿತ್ತು ಕುಡಿದು ನೀರಿನ ದಾಹ ಇಂಗಿಸಿಕೊಳ್ಳುತ್ತಿದ್ದರೆ, ಮಾವಿನ ಮರದಲ್ಲೂ ಕಾಯಿಗಳನ್ನೇ ಕಿತ್ತು ತಿನ್ನುತ್ತಾ ಹಸಿವನ್ನು ಇಂಗಿಸಿಕೊಳ್ಳುತ್ತಿವೆ. ಪಟ್ಟಣದ ಅಲ್ಲಲ್ಲಿ ಸಿಗುವ ಆಹಾರ ತಿಂದು ಅರೆಹೊಟ್ಟೆಯಲ್ಲೇ ಕೋತಿಗಳು ತಮ್ಮ ಜೀವನಯಾತ್ರೆ ಮುಂದುವರಿಸಿವೆ.