Advertisement

ಮಡಂತ್ಯಾರು: ಹೆಚ್ಚುತ್ತಿರುವ ಮಂಗಗಳ ಹಾವಳಿ; ಕಂಗಾಲಾದ ರೈತರು

03:30 AM Aug 04, 2017 | Team Udayavani |

ಮಡಂತ್ಯಾರು: ಮಡಂತ್ಯಾರು, ಮಚ್ಚಿನ ಭಾಗದಲ್ಲಿ ಮಂಗಗಳ ಹಾವಳಿ ಮತ್ತಷ್ಟು ಹೆಚ್ಚಾಗಿದೆ. ಮಂಗಗಳನ್ನು ನಿಯಂತ್ರಿಸಲು ತಮ್ಮ ಬಳಿ ಯಾವುದೇ ಉಪಾಯ ಇಲ್ಲ. ಅತ್ತ ಸರಕಾರ ಕೂಡ ಸೂಕ್ತ ಯೋಜನೆ ರೂಪಿಸುತ್ತಿಲ್ಲ. ಪರಿಹಾರವೂ ಸಿಗುತ್ತಿಲ್ಲ ಎಂದು ರೈತರು ಅಲವತ್ತುಕೊಳ್ಳುವಂತಾಗಿದೆ. ಬೆಳೆ ಹಾನಿಗೆ ಮಂಗಗಳು ಕೂಡ ಹೆಚ್ಚಿನ ಕೊಡುಗೆ ನೀಡುತ್ತಿವೆ.

Advertisement

ಗಂಭೀರತೆಯ ಅರಿವಿಲ್ಲ
ಮಂಗಗಳ ಉಪಟಳ, ಅದರಿಂದಾಗುವ ನಷ್ಟದ ಅರಿವು ಸರಕಾರ ಅಥವಾ ಇಲಾಖೆಯ ಅಧಿಕಾರಿಗಳಿಗೆ ಇಲ್ಲ ಎನ್ನುತ್ತಾರೆ ಮಂಗಗಳಿಂದ ತೊಂದರೆಗೀಡಾಗುತ್ತಿರುವ ರೈತರು. ಮಂಗಗಳ ಹಾವಳಿ ಎಂಬುದನ್ನು ಕೆಲವು ಅಧಿಕಾರಿಗಳು ತೀರಾ ಲಘುವಾಗಿ ಪರಿಗಣಿಸುತ್ತಾರೆ. ಹಾಗಾಗಿ ಇವುಗಳ ನಿಯಂತ್ರಣಕ್ಕೆ ಸೂಕ್ತ ಯೋಜನೆಗಳು ಇಂದಿಗೂ ರೂಪುಗೊಂಡಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮಂಗಗಳ ಹಾವಳಿ ನಿಯಂತ್ರಣದ ಕುರಿತು  ಈ ಹಿಂದೆ ಕೆಲವೊಂದು ಭರವಸೆಗಳು ದೊರೆತಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಕೃಷಿಕರು ತಮಗೆ ತೋಚಿದ ರೀತಿಯ ಉಪಾಯಗಳನ್ನು ಮಾಡಿ ಮಂಗಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಗುಂಪಾಗಿ ದಾಳಿ ನಡೆಸುವ ಕಪಿ ಸೈನ್ಯ ರೈತರ ಬೆದರಿಕೆ ಗಳಿಗೆ ಜಗ್ಗುತ್ತಿಲ್ಲ.

ತೆಂಗು, ಅಡಿಕೆ, ಬಾಳೆ ಇತರ ಹಣ್ಣು ಹಂಪಲುಗಳು ಮಂಗಗಳ ನೇರ ದಾಳಿಗೆ ತುತ್ತಾಗುತ್ತಿವೆ. ಗ್ರಾಮಸಭೆಗಳಲ್ಲಿ ಈ ಬಗ್ಗೆ ಪದೇ ಪದೇ ಚರ್ಚೆಗಳಾಗುತ್ತಿವೆ. ನಿರ್ಣಯಗಳನ್ನೂ ಕೈಗೊಳ್ಳಲಾಗುತ್ತಿದೆ. ಆದರೆ ಪ್ರಯೋಜನ ಮಾತ್ರ ಶೂನ್ಯ. ಈ ಬಗ್ಗೆ ಅರಣ್ಯ ಇಲಾಖೆ ತುರ್ತಾಗಿ ಕಾರ್ಯಪ್ರವೃತ್ತವಾಗಬೇಕು. ಇದು ಈ ಭಾಗದ ರೈತರ ಸಮಸ್ಯೆ ಮಾತ್ರವಲ್ಲ, ಹಲವೆಡೆ ಮಂಗಗಳ ಹಾವಳಿ ವಿಸ್ತರಿಸುತ್ತಲೇ ಇದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

ಯಾವುದೇ ಕ್ರಮ ಕೈಗೊಂಡಿಲ್ಲ
ಕಾಡು ಪ್ರಾಣಿಗಳ ಹಾವಳಿಗೆ ಸರಕಾರ ಪರಿಹಾರ ನೀಡುತ್ತಿದೆ. ಮಂಗಗಳ ಹಾವಳಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಬಾರಿ ಪ್ರಸ್ತಾವನೆ ಬಂದಿದೆ. ಬಿಎಫ್‌ಐನಿಂದ ರಿಪೋರ್ಟ್‌ ಹೋಗಿದೆ. ಉತ್ತರ ಕನ್ನಡದಲ್ಲಿ ಮಂಗಗಳ ಸಂತಾನ ನಿಯಂತ್ರಣಕ್ಕೆ ಚುಚ್ಚು ಮದ್ದು ನೀಡುವ ಯೋಜನೆ ಇದೆ. ಮಂಗಗಳ ನಿಯಂತ್ರಣಕ್ಕೆ, ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ತಿಳಿಸುವ ಬಗ್ಗೆ ಪ್ರಯತ್ನಿಸುತ್ತೇವೆ.
– ಸುಬ್ಬಯ್ಯ ನಾಯ್ಕ, ಅರಣ್ಯ ಅಧಿಕಾರಿ, ಬೆಳ್ತಂಗಡಿ

ಹಿಮಾಚಲ ಪ್ರದೇಶ ಮಾದರಿ ಕ್ರಮ 
ಮಂಗಗಳ ನಿಯಂತ್ರಣಕ್ಕೆ ಸದ್ಯ ಯಾವುದೇ ಯೋಜನೆ ರೂಪಿಸಿಲ್ಲ. ಹಿಮಾಚಲ ಪ್ರದೇಶದಲ್ಲಿ ಮಂಗಗಳು ಹಾವಳಿ ನಿಯಂತ್ರಣಕ್ಕೆ ಅಲ್ಲಿನ ಸರಕಾರ ಕೈಗೊಂಡಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸರಕಾರ ಕ್ರಮ ಕೈಗೊಳ್ಳಲಿದೆ.
– ರಮಾನಾಥ ರೈ, ಅರಣ್ಯ ಸಚಿವ 

Advertisement

– ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next