ಸಾಗರ: ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತಿದ್ದು ಸಾಗರ ತಾಲೂಕಿನ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಸೋಮವಾರ ಜ್ವರದಿಂದ ಬಳಲುತ್ತಿರುವ ನಾಲ್ವರು ಅರಳಗೋಡು ಪ್ರಾಥಮಿಕ ಕೇಂದ್ರಕ್ಕೆ ದಾಖಲಾಗಿದ್ದಾರೆ. ಈವರೆಗೆ ಒಟ್ಟು 21 ಜನರಲ್ಲಿ ಜ್ವರ ಕಾಣಿಸಿಕೊಂಡಿದೆ. ಅರಳಗೋಡಿನ ಸವಿತಾ ಹಾಗೂ ಶನಿವಾರ ಕೊನೆಯುಸಿರೆಳೆದ ಜೀಗಳದ ಶ್ವೇತಾ ಅವರ ತಂದೆ ದೇವರಾಜ್ ಜೈನ್ ಅವರ ಆರೋಗ್ಯ ಸೂಕ್ಷವಾಗಿದ್ದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಶನಿವಾರದಿಂದಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತೆರಳುವವರ ಸಂಖ್ಯೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಅಲ್ಲಿ ಗುಣಮುಖರಾಗದವರನ್ನೂ ಮಣಿಪಾಲ್‌ನ ಕೆಎಂಸಿಗೆ ರವಾನಿಸಲಾಗಿದೆ. ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ವಿವಿಧ ಆಸ್ಪತ್ರೆಗಳಲ್ಲಿ 38 ಶಂಕಿತ ಕೆಎಫ್‌ಡಿ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಭಾನುವಾರ ದಿಂದ 11 ಜನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಎಫ್‌ಡಿ ನಿರೋಧಕ ಘಟಕದ ಉಪನಿರ್ದೇಶಕ ಡಾಣ ರವಿಕುಮಾರ್ “ಉದಯವಾಣಿ’ಯೊಂದಿಗೆ ಮಾತನಾಡಿ, “ಸೋಮವಾರದಿಂದ ಶಿವಮೊಗ್ಗದಲ್ಲಿ ರಕ್ತ ಪರೀಕ್ಷೆ ಕೇಂದ್ರ ಕಾರ್ಯಾರಂಭ ಮಾಡಿದೆ.
ಮೊದಲ ದಿನ ಹತ್ತು ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಡ್ಡಲಾಗಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಬರಲಿದೆ. ಇಂದು ಸಾಗರ ತಾಲೂಕಿನಲ್ಲಿ ಸಂಗ್ರಹವಾದ ರಕ್ತದ ಸ್ಯಾಂಪಲ್‌ಗಳು ಸಂಜೆ ಕೇಂದ್ರ ತಲುಪಲಿದ್ದು ಅವುಗಳ ಪರೀಕ್ಷಾ ವರದಿ ಬುಧವಾರವಷ್ಟೇ ಸಿಗಲಿದೆ’ ಎಂದರು.
34 ಜನರಲ್ಲಿ ಕೆಎಫ್‌ಡಿ ವೈರಸ್: ಮೂರು ತಿಂಗಳಿನಿಂದ ಒಟ್ಟು 36 ಮಂಗಗಳು ಮೃತಪಟ್ಟಿದ್ದು, ಅದರಲ್ಲಿ ಆರು ಮಂಗಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ನಾಲ್ಕು ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಇರುವುದು ದೃಢಪಟ್ಟಿದೆ.
ಈವರೆಗೆ 83 ಜನರಿಗೆ ಮಂಗನ ಕಾಯಿಲೆಯ ಶಂಕೆ ವ್ಯಕ್ತವಾಗಿದ್ದು, 34 ಜನರಲ್ಲಿ ವೈರಸ್ ಪತ್ತೆಯಾಗಿದೆ. ಸೋಮವಾರ ಐದು ಮಂಗಗಳ ಶವ ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ಪತ್ತೆಯಾಗಿದೆ. ಎಂ.ಎಲ್.ಹಳ್ಳಿ,ಕರೂರು, ಬ್ಯಾಡಗೋಡು, ಆನಂದಪುರ ಸಮೀಪದ ಇರುವಕ್ಕಿಯಲ್ಲಿ ಮಂಗನ ಮೃತ ದೇಹ ಪತ್ತೆಯಾಗಿದೆ.