ಸಾಗರ: ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರನ್ನು ನವೆಂಬರ್‌ನಿಂದಲೇ ಕಾಡುತ್ತಿರುವ ಮಂಗನ ಕಾಯಿಲೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಈ ಭಾಗದ ಜನ ಸಣ್ಣ ಜ್ವರಕ್ಕೂ ತತ್ತರಿಸಿ ಆಸ್ಪತ್ರೆಗೆ ಧಾವಿಸುವ ಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ಅರಳಗೋಡು ಪಿಎಚ್‌ಸಿಯಿಂದ ಐವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರೆ ಸೋಮವಾರ ಕೂಡ ಮತ್ತೆ ಆರು ಜನರನ್ನು ಹೆಚ್ಚಿನ ಚಿಕಿತ್ಸೆಗೆ ಕೆಎಂಸಿಗೆ ತೆರಳಲು ಶಿಫಾರಸು ಮಾಡಲಾಗಿದೆ. ಇಂತಹ ರೋಗಿಗಳನ್ನು ಭೇಟಿ ಮಾಡಿದ ಶಾಸಕ ಎಚ್. ಹಾಲಪ್ಪ ಭರವಸೆ ತುಂಬುವ ಪ್ರಯತ್ನ ನಡೆಸಿದರು. ಒಂದೊಮ್ಮೆ ಜ್ವರ ನಿಯಂತ್ರಣಕ್ಕೆ ಬರುತ್ತಿಲ್ಲ, ಅಸಹಜ ಬೆಳವಣಿಗೆ ಎನ್ನಿಸಿದ ತಕ್ಷಣ ಇಲ್ಲಿ ದಾಖಲಾದವರನ್ನು ಮಣಿಪಾಲ್‌ಗೆ ರವಾನಿಸಬೇಕು ಎಂದು ಅವರು ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಶಂಕಿತ ಮಂಗನ ಕಾಯಿಲೆಯಿಂದ ಬರುವ ಜ್ವರಕ್ಕಾಗಿ ಅರಳಗೋಡು ಭಾಗದ ಓರ್ವರು ಹಾಗೂ ಮರಸ ಗ್ರಾಮದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಯಲ್ಲಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತ ತಪಾಸಣೆ ಮಾಡುವಂತೆ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಸುತ್ತೋಲೆ ಕಳುಹಿಸಬೇಕು.
24 ಗಂಟೆಯೊಳಗೆ ರಕ್ತ ಪರೀಕ್ಷೆ ವರದಿ ವೈದ್ಯರ ಕೈಸೇರುವಂತೆ ನೋಡಿಕೊಳ್ಳಬೇಕು. ಕೆಎಫ್‌ಡಿ ರಕ್ತ ತಪಾಸಣಾ ಕೇಂದ್ರವನ್ನು ಯಾವುದೇ ಕಾರಣಕ್ಕೂ ಶಿವಮೊಗ್ಗದಲ್ಲಿ ಆರಂಭಿಸುವುದು ಬೇಡ. ಸಾಗರದಲ್ಲಿಯೇ ರಕ್ತಪರೀಕ್ಷೆ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಲಾಗಿದೆ ಎಂದರು.
ಮಣಿಪಾಲ ಆಸ್ಪತ್ರೆಯಲ್ಲಿ ಕೆಲವರು ಶಂಕಿತ ಮಂಗನ ಕಾಯಿಲೆಯಿಂದ ಚಿಕಿತ್ಸೆ ಪಡೆದು ಸರ್ಕಾರ ಚಿಕಿತ್ಸೆಯ ಖರ್ಚು ವೆಚ್ಚ ಭರಿಸುತ್ತದೆ ಎನ್ನುವುದು ಗೊತ್ತಾಗದೆ ಆಸ್ಪತ್ರೆಯ ಬಿಲ್ ಪಾವತಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಪತ್ತೆಹಚ್ಚಿ ಹಣ ಕಟ್ಟಿದವರಿಗೆ ವಾಪಸ್ ಹಣ ಕೊಡಿಸುವ ಬಗ್ಗೆ ಗಮನ ಹರಿಸಬೇಕು. ರಾಜ್ಯ ಸರ್ಕಾರ ಈಗಾಗಲೇ 5 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗದಲ್ಲಿ ರಕ್ತ ತಪಾಸಣಾ ಕೇಂದ್ರ ಆರಂಭಿಸಲು ಮತ್ತು 5 ಕೋಟಿ ರೂ. ವ್ಯಾಕ್ಸಿನೇಷನ್ ಮತ್ತು ಡಿಎಂಪಿ ಆಯಿಲ್ ಖರೀದಿಸಲ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇದಕ್ಕೆ ಆಕ್ಷೇಪಿಸಿ ಸಾಗರದಲ್ಲಿಯೇ ರಕ್ತ ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಆರೋಗ್ಯ ಸಚಿವರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಅರಳಗೋಡು ಗ್ರಾಮದಿಂದ ತೀವ್ರ ಜ್ವರದಿಂದ ಬಳಲುತ್ತಿರುವ ಸಂಪ ಲಕ್ಷ್ಮೀನಾರಾಯಣಭಟ್, ಕೃಷ್ಣಮೂರ್ತಿ ಭಟ್, ನೆಲ್ಲಿಮಕ್ಕಿ ಗಣಪತಿ, ಮಂಡುವಳ್ಳಿಯ ಗೌರಮ್ಮ ಹಾಗೂ ವಾಟೆಮಕ್ಕಿಯ ಪ್ರೇಮಾ ಕೆಎಂಸಿಯಲ್ಲಿ ದಾಖಲಾಗಿದ್ದಾರೆ. ಪ್ರತಿಬಂಧಕ ಶಕ್ತಿಯ ಅಧ್ಯಯನ: ಅರಳಗೋಡು ಗ್ರಾಪಂ ವ್ಯಾಪ್ತಿಯ ಬಹುತೇಕ ಭಾಗಗಳಲ್ಲಿ ಎರಡು ಸುತ್ತಿನ ಲಸಿಕೆ ಹಾಕಲಾಗಿದ್ದರೂ ಶಂಕಿತ ಕೆಎಫ್‌ಡಿಗೆ ಲಸಿಕೆ ಪಡೆದ ಪೂರ್ಣಿಮಾ ಹಾಗೂ ಸೀತಮ್ಮ ಬಲಿಯಾಗಿರುವ ಹಿನ್ನೆಲೆಯಲ್ಲಿ ಎರಡು ಡೋಸ್ ಔಷಧ ಪಡೆದವರ ರಕ್ತ ಪಡೆದು ಅವರಲ್ಲಿ ಕೆಎಫ್‌ಡಿ ವೈರಸ್‌ನ ಪ್ರತಿರೋಧಕ ಶಕ್ತಿಯ ಪ್ರಮಾಣವನ್ನು ವೈಜ್ಞಾನಿಕವಾಗಿ ಅಂದಾಜಿಸುವ ಕ್ರಮ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಆಗ್ರಹಿಸಿವೆ.