Advertisement

Monkey disease:ಕಳೆದ ಬಾರಿ ನಾಲ್ಕು ಪೋಸ್ಟ್‌ಮಾರ್ಟ್ಂ ಮಾತ್ರ; ಡಿಸಿ ಆತಂಕ

04:51 PM Dec 09, 2023 | Shreeram Nayak |

ಸಾಗರ: ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಮೈಮರೆಯಬೇಡಿ. ಜಾಗೃತವಾಗಿ ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಸೂಚಿಸಿದರು.

Advertisement

ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾಗರ ಮತ್ತು ಹೊಸನಗರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಮಂಗನ ಕಾಯಿಲೆ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಗನ ಕಾಯಿಲೆಯ ಉಲ್ಭಣತೆಯನ್ನು ಗಮನಿಸಿದಾಗ ಅದು ಯಾವಾಗಲೂ ಡಿಸೆಂಬರ್ ಕೊನೆಯಿಂದ ನಾಲ್ಕು ತಿಂಗಳುಗಳ ಕಾಲ ಕಾಣಿಕೊಳ್ಳುತ್ತದೆ. ಮಳೆ ಬೀಳುತ್ತಿದ್ದಂತೆಯೇ ಮಾಯವಾಗಿ ಬಿಡುತ್ತದೆ. ಹೀಗಾಗಿ ಇದು ಕಟ್ಟೆಚ್ಚರದ ಸಮಯ. ಯಾವುದೇ ಪ್ರದೇಶದಲ್ಲಿ ಯಾವುದೇ ಕಾರಣಕ್ಕೆ ಮಂಗಗಳು ಸಾವನ್ನಪ್ಪಿದರೆ ತಕ್ಷಣ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಬೇಕು ಎಂದರು.

ಕಳೆದ ಸಾಲಿನಲ್ಲಿ 45 ಮಂಗಗಳು ಸಾವನ್ನಪ್ಪಿದರೂ ನಿಗದಿತ ಸಮಯಕ್ಕೆ ವಿಷಯ ಗಮನಕ್ಕೆ ಬಾರದೆ ಕೇವಲ ನಾಲ್ಕು ಮಂಗಗಳ ದೇಹದ ಪೋಸ್ಟ್‌ಮಾರ್ಟಂ ಮಾಡಲಾಗಿದೆ. ಮಂಗಗಳು ಕೊಳೆತ ಸ್ಥಿತಿಯಲ್ಲಿ ಲಭ್ಯವಾದರೆ ಏನು ಮಾಡಲು ಸಾಧ್ಯವಿಲ್ಲ. ಔಷಧಿಗಳಿಗೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದರೆ ಕೂಡಲೇ ನನ್ನ ಗಮನಕ್ಕೆ ತನ್ನಿ. ತಕ್ಷಣ ಆರ್ಥಿಕ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡುತ್ತಿದೆ. ಕಳೆದ ಸಾಲಿನಲ್ಲಿ ಯಾವ ಯಾವ ಗ್ರಾಪಂಗಳಲ್ಲಿ ಹೆಚ್ಚು ಮಂಗಗಳು ಸಾವನ್ನಪ್ಪಿವೆ ಎನ್ನುವುದನ್ನು ಪಟ್ಟಿಮಾಡಿ ಮತ್ತೊಮ್ಮೆ ಅಲ್ಲಿಗೆ ಪಿಡಿಓಗಳು ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಮಾತನಾಡಿ, ಈಗಾಗಲೇ ಮಂಗನ ಕಾಯಿಲೆ ಸಮಸ್ಯೆಗೆ ಒಳಗಾಗಿದ್ದ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. 2019ರಲ್ಲಿ 20 ಸಾವು ಸಾಗರದಲ್ಲಾಗಿತ್ತು. ಅದನ್ನು ಹೊರತುಪಡಿಸಿದರೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ವ್ಯವಸ್ಥಿತ ಕ್ರಮದಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಎಲ್ಲೇ ಮಂಗಗಳು ಸಾವನ್ನಪ್ಪಿದರೂ ಅಧಿಕಾರಿಗಳು ಇನ್ನೊಬ್ಬರಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಅವಶ್ಯಕತೆಯಿಲ್ಲ. ಪಶು ವೈದ್ಯಕೀಯ ಇಲಾಖೆ, ಆರೋಗ್ಯ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಸಾಗರ ಎಸಿ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ಡಿವೈಎಸ್‌ಪಿ ಗೋಪಾಕೃಷ್ಣ ನಾಯಕ್, ಡಾ. ಭರತ್, ಡಾ. ಹರ್ಷವರ್ಧನ್, ಡಾ. ಸುರೇಶ್, ಡಾ. ಗುಡದಪ್ಪ, ಡಾ. ನಾಗರಾಜ್, ಅರಣ್ಯ ಇಲಾಖೆಯ ಶ್ರೀಧರ್, ರಾಘವೇಂದ್ರ, ನಗರಸಭೆಯ ಪೌರಾಯುಕ್ತ ಎಚ್.ಕೆ.ನಾಗಪ್ಪ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next