ಯಳಂದೂರು: ಪಟ್ಟಣದ ಬಸ್ ನಿಲ್ದಾಣದಲ್ಲಿದ್ದ ಎಟಿಎಂನಲ್ಲಿ ಹಣವನ್ನು ಡ್ರಾ ಮಾಡಿಕೊಡುವ ನೆಪದಲ್ಲಿ ಬೇರೆ ಎಟಿಎಂ ಕಾರ್ಡ್ ನೀಡಿ ಹಣವನ್ನು ನೀಡಿ ಅಪರಿಚಿತ ಮಹಿಳೆಯೊಬ್ಬಳು ಹಣ ಡ್ರಾ ಮಾಡಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಂತೆಮರಹಳ್ಳಿ ಮೋಳೆ ಗ್ರಾಮದ ಶಾಂತರಾಜು ಹಣಕಳೆದುಕೊಂಡವರು. ಶಾಂತರಾಜು ಸಂತೆಮರಹಳ್ಳಿ ಗ್ರಾಮದಲ್ಲಿರುವ ಎಸ್‌ಬಿಎಂನಲ್ಲಿ ಖಾತೆ ಹೊಂದಿದ್ದಾರೆ. ಇಲ್ಲಿಂದ ಎಟಿಎಂ ಕಾರ್ಡ್ ಪಡೆದುಕೊಂಡಿದ್ದಾರೆ. ಮೇ 30 ರಂದುಯಳಂದೂರು ಪಟ್ಟಣದ ಇಂಡಿಯಾ-01 ಎಟಿಎಂಗೆ ಭೇಟಿ ನೀಡಿದ್ದಾರೆ.
ಇವರಿಗೆ ಎಟಿಎಂನಲ್ಲಿ ಹಣ ಡ್ರಾ ಮಾಡುವುದು ಗೊತ್ತಿಲ್ಲ. ಈ ಸಂದರ್ಭದಲ್ಲಿ ಇಲ್ಲೇ ಇದ್ದ ಮಹಿಳೆಗೆ ಎಟಿಎಂ ಕಾರ್ಡ್ ಕೊಟ್ಟು ಹಣವನ್ನು ಡ್ರಾ ಮಾಡಿಕೊಡುವಂತೆ ಕೇಳಿದ್ದಾರೆ. ಈಕೆ ಕಾರ್ಡ್ ಪಡೆದು ಪಿನ್ ಒತ್ತುವಂತೆ ಹೇಳಿದ್ದಾಳೆ ನಂತರ ಶಾಂತರಾಜು ಪಿನ್ ಒತ್ತಿದ್ದಾರೆ. ಬಳಿಕ ಈಕೆ ಶಾಂತರಾಜುಗೆ 5000 ರೂ. ಹಣ ಡ್ರಾ ಮಾಡಿ ನಂತರ ಎಟಿಎಂ ಕಾರ್ಡ್‌ನ್ನು ಕೊಟ್ಟಿದ್ದಾಳೆ. ಇವರು ಇದನ್ನು ಪಡೆದು ವಾಪಸ್ಸಾಗಿದ್ದಾರೆ.
ಮಗಳ ಮದುವೆ ಇದ್ದರಿಂದ ಇವರು ಲಗ್ನಪತ್ರಿಕೆಗಳನ್ನು ಹಂಚುವ ಆತುರದಲ್ಲಿದ್ದಾರೆ. ನಂತರ ಜೂ 5 ರಂದು ಇದೇ ಎಟಿಎಂನಲ್ಲಿ ಹಣ ಪಡೆಯಲು ತೆರಳಿದಾಗ ಇದರಲ್ಲಿ ಹಣ ಬರುತ್ತಿರಲಿಲ್ಲ. ನಂತರ ಇವರು ಸಂತೆಮರಹಳ್ಳಿ ಬ್ಯಾಂಕಿನಲ್ಲಿ ಈ ವಿಷಯ ತಿಳಿಸಿದ್ದಾರೆ.
ಆಗ ಇವರ ಬಳಿ ಇರುವುದು ತಮಿಳುನಾಡಿನ ವ್ಯಕ್ತಿಯ ಎಟಿಎಂ ಕಾರ್ಡ್ ಎಂದು ಇದು ವಿಜಯನ್ ಎಂಬ ಹೆಸರಿನಲ್ಲಿದ್ದು ಇದರಲ್ಲಿ 290 ರೂ. ಮಾತ್ರ ಇದೆ ಎಂದು ಮಾಹಿತಿ ದೊರಕಿದೆ. ತಮ್ಮ ಖಾತೆಯಲ್ಲಿ ಹಣವೇ ಇಲ್ಲ 45000 ರೂ.ಗಳನ್ನು ಈಕೆ ಡ್ರಾ ಮಾಡಿದ್ದಾಳೆ ಎಂದು ಬ್ಯಾಂಕಿನವರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಇವರು ಅಪರಿಚಿತ ಮಹಿಳೆಯ ಮೇಲೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.