ಕಿರಣ, ಪಟ್ಟಣದ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದ. ಅವನ ತಂದೆ, ಪುಟ್ಟ ಗ್ರಾಮದಲ್ಲಿ ಬೇಸಾಯ ಮಾಡುತ್ತಿದ್ದರು. ತಂದೆಗೆ ಕಿರಣನನ್ನು ಚೆನ್ನಾಗಿ ಓದಿಸಬೇಕೆಂಬ ಆಸೆಯಿತ್ತು. ಕಿರಣನೂ ಪ್ರತಿಬಾರಿ, ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದ. ಪಟ್ಟಣದಲ್ಲಿ ಇದ್ದುಕೊಂಡೇ, ಹಣ ಸಂಪಾದನೆಯ ಮಾರ್ಗ ಹಿಡಿಯಬೇಕೆಂಬುದು ಅವನ ಕನಸು. ಆದರೆ, ವಿಧಿಲಿಖೀತವೇ ಬೇರೆ ಇತ್ತು. ಕೂಡಲೆ ಊರಿಗೆ ಬರುವಂತೆ, ಅವನಿಗೆ ಕರೆ ಬಂದಿತು. ಅಲ್ಲಿ ಹೋಗಿ ನೋಡಿದರೆ, ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ತಮ್ಮ ಕೊನೆಗಾಲ ಸಮೀಪಿಸಿದೆ
ಎನ್ನುವುದು ಅವರಿಗೆ ಗೊತ್ತಾಗಿತ್ತು.
ಅವರು ಕಿರಣನನ್ನು ಕರೆದು, “ನಮ್ಮ ಜಮೀನಿನ ಮೂಲೆಯಲ್ಲಿ ದೊಡ್ಡ ಪೆಟ್ಟಿಗೆ ಇದೆ. ಅದರೊಳಗೆ ಕಂತೆ ಕಂತೆ ಹಣ ಇದೆ’ ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದರು. ಇದಾದ ಕೆಲವೇ
ದಿನಗಳಲ್ಲಿ, ಕಿರಣನ ತಂದೆ ತೀರಿಕೊಂಡರು. ಮುಂದೇನು ಎಂಬ ಚಿಂತೆಯಲ್ಲಿದ್ದ ಕಿರಣನಿಗೆ, ನಿಧಿಯ ನೆನಪಾಗಿತ್ತು. ಆ ಹಣದಿಂದ ತನ್ನ ಓದನ್ನು ಮುಂದುವರಿಸಬಹುದು, ಅಮ್ಮನನ್ನೂ ಚೆನ್ನಾಗಿ ನೋಡಿಕೊಳ್ಳಬಹುದು ಎಂದವನು ಯೋಚಿಸಿದನು. ಒಂದು ದಿನ ಬೆಳಿಗ್ಗೆಯೇ ಗುದ್ದಲಿಯೊಂದಿಗೆ ಬಂದು, ತಂದೆ ಹೇಳಿದ ಜಮೀನಿನ ಮೂಲೆಯಲ್ಲಿ ಅಗೆದ. ಎಷ್ಟು ಅಗೆದರೂ ಪೆಟ್ಟಿಗೆ
ಸಿಗಲಿಲ್ಲ.
ಕೊನೆಗೆ, ತಾನೇ ಎಲ್ಲೋ ಗೊಂದಲ ಮಾಡಿಕೊಂಡಿದ್ದೇನೆ ಎಂದು ಯೋಚಿಸಿ, ನಾಲ್ಕೂ ಮೂಲೆಯನ್ನು ಅಗೆದ. ಹಣದ ಪೆಟ್ಟಿಗೆ ಸಿಗಲಿಲ್ಲ. ಪಕ್ಕದ ಜಮೀನಿನ ಮುದುಕಪ್ಪ ಕಿರಣನ ಬಳಿ ಬಂದ. ಕಿರಣ, ತನ್ನ ತಂದೆ ಹೇಳಿದ್ದನ್ನು ಹೇಳಿದ. ಮುದುಕಪ್ಪನಿಗೆ ಎಲ್ಲವೂ ಅರ್ಥವಾಯಿತು. ಅವನು ಕಿರಣನನ್ನು ಸಮಾಧಾನಿಸಿದ. “ಹೋಗಲಿ ಬಿಡು. ಬೇಜಾರು ಮಾಡಿಕೊಳ್ಳಬೇಡ. ಹೇಗೂ ನೆಲ ಅಗೆದಿದ್ದೀಯಲ್ಲ ಮನೆಯಲ್ಲಿರೋ ಬೀಜವನ್ನ ಬಿತ್ತನೆ ಮಾಡಿಬಿಡು’ ಎಂದ. ಕಿರಣ ಹಾಗೆಯೇ ಮಾಡಿದ.
ಮಳೆ ಬೆಳೆ ಚೆನ್ನಾಗಿ ಆಗಿ, ಆ ಸಲ ತುಂಬಾ ಚೆನ್ನಾಗಿ ಫಸಲು ಬಂದಿತು. ಮಾರುಕಟ್ಟೆಯಲ್ಲಿ ಅದಕ್ಕೆ ಹೆಚ್ಚಿನ ಬೆಲೆಯೂ ಸಿಕ್ಕಿತು. ಕಿರಣನಿಗೆ, ಅಪ್ಪ ಹೇಳಿದ ಪೆಟ್ಟಿಗೆ ಹಣದ ರಹಸ್ಯ ಆಗ
ಅರ್ಥವಾಯಿತು. ಪಟ್ಟಣದ ಕೆಲಸವಾದರೂ, ಕುಗ್ರಾಮದಲ್ಲಿ ಮಾಡುವ ಕೆಲಸವಾದರೂ, ಶ್ರದ್ಧೆಯಿಂದ ಮಾಡಿದರೆ ಹಣ ಸಿಕ್ಕೇ ಸಿಗುತ್ತದೆ ಎಂದು ಅವನು ತಿಳಿದನು.