Advertisement

ಮನಿ money ಕಥೆ ಮನೆ ಬಜೆಟ್‌ ಅಂದು ಇಂದು!

12:33 AM Feb 03, 2020 | Sriram |

ಭವಿಷ್ಯದಲ್ಲಿ ಎದುರಾಗುವ ದುಬಾರಿ ವೆಚ್ಚಗಳನ್ನು ನಿಭಾಯಿಸಬೇಕೆಂದರೆ ಇಂದಿನ ಜೀವನಶೈಲಿಯಲ್ಲಿ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲೇಬೇಕು. ಪ್ರತಿಯೊಬ್ಬರೂ ತಮ್ಮ ಆದಾಯದಲ್ಲಿ ಕನಿಷ್ಠ ಶೇ.30ನ್ನಾದರೂ ಉಳಿತಾಯ ಮಾಡಲೇಬೇಕಾಗುತ್ತದೆ. ಅದು ಆರೋಗ್ಯಕರ ಆರ್ಥಿಕ ನಿರ್ವಹಣ ಶೈಲಿ. ಈಗಿನ ಮತ್ತು ಕೆಲವು ತಿಂಗಳ ಅನಂತರ ಎದುರಾಗುವ ಆರ್ಥಿಕ ಬಿಕ್ಕಟ್ಟಿನ ಕುರಿತಾಗಿ ಮಾತ್ರ ಚಿಂತಿಸುವುದಲ್ಲ. ಇಂದಿನಿಂದ ದಶಕಗಳ ಅನಂತರ ಎದುರಾಗುವ ನಿವೃತ್ತಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

Advertisement

2010ರಲ್ಲೂ, 2020ರಲ್ಲೂ ಭಾರತೀಯರ ಹಣಕಾಸು ನಿರ್ವಹಣ ಶೈಲಿ ಬದಲಾಗಿದೆಯೇ? ಬದಲಾಗಿದ್ದರೆ ಯಾವ ಯಾವ ವಿಷಯಗಳಲ್ಲಿ ಇವೇ ಮುಂತಾದ ದಶಕದ ಬದಲಾವಣೆಗಳ ಮೇಲೆ ಬೆಳಕು ಚೆಲ್ಲುವ ಬರಹವಿದು. ಈ ಸಂಗತಿಗಳು ಭವಿಷ್ಯದ ಹೊಳಹನ್ನೂ ನೀಡಬಲ್ಲವು.

2010ರಲ್ಲಿ ಇದ್ದ ಭಾರತೀಯ ಕುಟುಂಬಗಳ ಟಾಪ್‌ 5 ಧ್ಯೇಯಗಳು- ಮಕ್ಕಳ ಶಿಕ್ಷಣ, ಮದುವೆ, ಮನೆ ಕಟ್ಟುವುದು, ಕಾರು ಖರೀದಿ ಮತ್ತು ನಿವೃತ್ತಿ. 2020ರಲ್ಲಿ ಇದೇ ಟಾಪ್‌ 5 ಪಟ್ಟಿಯಲ್ಲಿ ಫಾರಿನ್‌ ಟೂರ್‌ ಸ್ಥಾನ ಪಡೆದಿರುವುದು ವಿಶೇಷ. ಹಾಗಾದರೆ, ಯಾವ ಧ್ಯೇಯ ಟಾಪ್‌ 5ನಿಂದ ಕೈಬಿಟ್ಟು ಹೋಯಿತು ಎಂಬ ಕುತೂಹಲ ನಿಮಗೂ ಆಗುತ್ತಿರಬಹುದು. 2019ರ ಟಾಪ್‌ 5 ಪಟ್ಟಿಯಿಂದ ಡ್ರಾಪ್‌ ಆದ ಧ್ಯೇಯ “ಮಕ್ಕಳ ಮದುವೆ’. ಉಳಿದ ಧ್ಯೇಯಗಳ ಕುರಿತು ಜನರ ಅಭಿಪ್ರಾಯ ಹಿಂದಿನಂತೆಯೇ ಇದೆ. ಅಂದರೆ, ಮಕ್ಕಳ ಮದುವೆಗಾಗಿ ಪಾಲಕರು ಹಣ ಕೂಡಿಡುವ ಪ್ರವೃತ್ತಿಗೆ ಕತ್ತರಿ ಬಿದ್ದಿದೆ ಎಂಬುದನ್ನು ಇದರಿಂದ ತಿಳಿಯಬಹುದು. 2009ರಲ್ಲಿ ಭಾರತೀಯ ಮನೆಗಳಲ್ಲಿ ತಿಂಗಳ ಖರ್ಚಿಗಾಗಿ ಎತ್ತಿಡುತ್ತಿದ್ದ ಫ‌ಂಡ್‌ನ‌ಲ್ಲಿ ಖರ್ಚಾಗುತ್ತಿದ್ದಿದ್ದು – 10%- 20%, ಇಂದು, ತಿಂಗಳ ಖರ್ಚು 25- 60%ಗೆ ಏರಿಬಿಟ್ಟಿದೆ. ಕೊಳ್ಳುಬಾಕ ಸಂಸ್ಕೃತಿ ನಮ್ಮನ್ನು ಆವರಿಸಿಕೊಂಡಿರುವುದರ ದ್ಯೋತಕವಿದು.

ಆರ್ಥಿಕ ಸಾಕ್ಷರತೆ ಇದ್ದರೂ ಇಂದಿನವರು, ಹಿಂದಿನವರಿಗಿಂತ ಹೆಚ್ಚು ಆರ್ಥಿಕ ಸಾಕ್ಷರತೆಯನ್ನು ಹೊಂದಿದ್ದಾರೆಂಬುದು ಸತ್ಯ. ಹಾಗಿದ್ದೂ ಸಣ್ಣಪುಟ್ಟ ಆಮಿಷಗಳಿಗೆ ಬಲಿಯಾಗಿ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ವಿಪರ್ಯಾಸವೇ ಸರಿ. ಬಹುತೇಕರು ಆರೋಗ್ಯ ವಿಮೆಗಾಗಿ ಉದ್ಯೋಗದಾತರನ್ನೇ ಅವಲಂಬಿಸುವ ಪ್ರವೃತ್ತಿ ಹೆಚ್ಚಾಗಿದೆ.

ನಮ್ಮಲ್ಲಿ ವಾರ್ಷಿಕ ಆದಾಯಕ್ಕಿಂತ 10- 15 ಪಟ್ಟು ಹೆಚ್ಚಿನ ಲೈಫ್ ಇನ್ಶೂರೆನ್ಸ್‌ಗೆ ವೆಚ್ಚ ಮಾಡುತ್ತಾರೆ. ಅಂಥ ಸಂದರ್ಭದಲ್ಲಿ ಕನಿಷ್ಠ ಪಕ್ಷ 5 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನಾದರೂ ಮಾಡಿಸಬೇಕಾಗುತ್ತದೆ. ಮತ್ತು ಆರೋಗ್ಯ ವಿಮೆಯನ್ನು ಐದೈದು ವರ್ಷಗಳಿಗೆ ಪರಾಮರ್ಶಿಸುತ್ತಾ ಇರಬೇಕು. ಇನ್ನೊಂದು ಮುಖ್ಯ ವಿಷಯವೆಂದರೆ, ಆರೋಗ್ಯ ಸಂಬಂಧಿ ಖರ್ಚುಗಳಿಗಾಗಿ ಆರೋಗ್ಯ ವಿಮೆಯೊಂದನ್ನೇ ನೆಚ್ಚಿಕೊಳ್ಳುವುದು ಕೂಡಾ ಒಳ್ಳೆಯದಲ್ಲ. ಬದಲಾದ ಜೀವನಶೈಲಿ ಮತ್ತು ಆರೋಗ್ಯ ಸಮಸ್ಯೆಗಳು ಹಾವಳಿ ಹೆಚ್ಚುತ್ತಿರುವುದರಿಂದ ಅದಕ್ಕಾಗಿ ಪ್ರತ್ಯೇಕ ಫ‌ಂಡ್‌ಅನ್ನು, ಉಳಿತಾಯ ಯೋಜನೆಯನ್ನು ಮಾಡಿಟ್ಟುಕೊಳ್ಳುವುದು ಉತ್ತಮ.

Advertisement

ಭವಿಷ್ಯತ್ತಿನತ್ತ ದೃಷ್ಟಿ
2010 ಮತ್ತು 2020ರ ನಡುವೆ ಜನರ ಹಣಕಾಸು ನಿರ್ವಹಣ ಶೈಲಿಯಲ್ಲಿ ಅಜಗಜಾಂತರ ಇರುವುದಂತೂ ಸ್ಪಷ್ಟ. ಯಾವ ಯಾವ ವಸ್ತುಗಳು ನಮಗೆ ಈ ಸಂದರ್ಭದಲ್ಲಿ ದುಬಾರಿ ಅಥವಾ ಐಷಾರಾಮಿ ಎಂದು ತೋರುತ್ತಿರುವ ವಸ್ತುಗಳು ಭವಿಷ್ಯದ ದಿನಗಳಲ್ಲಿ ಮೂಲ ಆವಶ್ಯಕತೆಯಾಗಿಬಿಡಬಹುದು. ಐಷಾರಾಮಿ ಎಂಬ ವರ್ಗದಲ್ಲಿ ಕೇವಲ ಬಂಗಲೆ, ಹೈಸ್ಪೀಡ್‌ ಕಾರು ಮಾತ್ರವೆ ಸೇರುವುದಿಲ್ಲ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ಖರ್ಚು, ನಿವೃತ್ತಿ ಅನಂತರದ ಜೀವನ, ನೀರಿನ ಬಿಲ್‌, ಮನೆಯ ಸುರಕ್ಷತೆಗಾಗಿ ಅಟೋಮೇಟಿಕ್‌ ಭದ್ರತಾ ವ್ಯವಸ್ಥೆ, ಪ್ರಾಣಿಗಳನ್ನು ಸಾಕುವ ಖರ್ಚು, ಮನೆಗಳಲ್ಲಿ ಏರ್‌ ಕಂಡೀಷನ್‌ ಮುಂತಾದವು ಕೂಡಾ ಐಷಾರಾಮಿ ವರ್ಗದಲ್ಲಿ ಸ್ಥಾನ ಪಡೆಯಬಹುದು.

ಭವಿಷ್ಯದಲ್ಲಿ ಎದುರಾಗುವ ದುಬಾರಿ ವೆಚ್ಚಗಳನ್ನು ನಿಭಾಯಿಸಬೇಕೆಂದರೆ ಇಂದಿನ ಜೀವನಶೈಲಿಯಲ್ಲಿ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲೇಬೇಕು. ಪ್ರತಿಯೊಬ್ಬರೂ ತಮ್ಮ ಆದಾಯದಲ್ಲಿ ಕನಿಷ್ಠ 30% ಅನ್ನಾದರೂ ಉಳಿತಾಯ ಮಾಡಲೇಬೇಕಾಗುತ್ತದೆ. ಅದು ಆರೋಗ್ಯಕರ ಆರ್ಥಿಕ ನಿರ್ವಹಣಾ ಶೈಲಿ. ಹಾಗೆಯೇ ಕೇವಲ ಈಗಿನ ಮತ್ತು ಕೆಲ ತಿಂಗಳ ಅನಂತರ ಎದುರಾಗುವ ಹಣದ ಬಿಕ್ಕಟ್ಟಿನ ಕುರಿತಾಗಿ ಮಾತ್ರ ಚಿಂತಿಸುವುದಲ್ಲ. ಇಂದಿನಿಂದ ದಶಕಗಳ ಅನಂತರ ಎದುರಾಗುವ ನಿವೃತ್ತಿಯನ್ನು ಕೂಡಾ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಮಕ್ಕಳ ಶಿಕ್ಷಣಕ್ಕೆ ಹಣ ಸಹಾಯ ಮಾಡಲು ಬ್ಯಾಂಕುಗಳು ಲೋನ್‌ ಒದಗಿಸುತ್ತವೆ. ಆದರೆ ವಯಸ್ಕರ ನಿವೃತ್ತಿ ಬದುಕಿಗೆ ಯಾವ ಬ್ಯಾಂಕುಗಳೂ ಹಣಸಹಾಯ ಒದಗಿಸುವುದಿಲ್ಲ. ಹೀಗಾಗಿ ನಾಳೆ ಮಕ್ಕಳ ಆಫೀಸಿಗೆ ಹಣ ಹೊಂದಿಸುವಂತೆಯೇ ನಿವೃತ್ತಿ ಕುರಿತೂ ಪ್ಲಾನಿಂಗ್‌ ಮಾಡುತ್ತಿರಬೇಕಾಗುತ್ತದೆ. ಸರಕಾರಿ ನೌಕರರನ್ನು ಹೊರತು ಪಡಿಸಿದರೆ ಹೆಚ್ಚಿನವರ ಉದ್ಯೋಗ ಪರ್ಮನೆಂಟ್‌ ಏನೂ ಆಗಿರುವುದಿಲ್ಲ. ಹೀಗಾಗಿ, ಉದ್ಯೋಗ ಇಲ್ಲದಿದ್ದರೂ ತಾತ್ಕಾಲಿಕವಾಗಿ ಆರ್ಥಿಕ ಸಮಸ್ಯೆ ತಲೆದೋರದಂತೆ ಹಣಕಾಸು ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ.

ಖರ್ಚು ಮಾಡುವುದು ತುಂಬಾ ಸುಲಭ
ಪ್ರವಾಸವನ್ನು ಹೊರತುಪಡಿಸಿ, ದುಬಾರಿ ಎಲೆಕ್ಟ್ರಾನಿಕ್‌ ವಸ್ತುಗಳು, ಐಷಾರಾಮಿ ಕಾರು ಖರೀದಿ, ಕ್ಲಬ್‌ಗಳ ಸದಸ್ಯತ್ವ, ಸ್ವಂತ ಉದ್ದಿಮೆಗೆ ಬಂಡವಾಳ, ಬೇಗನೆ ನಿವೃತ್ತಿಯಾಗುವ ಪ್ರವೃತ್ತಿ- ಇವೆಲ್ಲವೂ ಈಗ ನಮ್ಮ ನಡುವೆ ಚಾಲ್ತಿಯಲ್ಲಿರುವ ಟ್ರೆಂಡ್‌ಗಳು. ಅಲ್ಲದೆ ಫಿಟ್‌ನೆಸ್‌ಗೆ ವ್ಯಯಿಸುವ ಖರ್ಚು, ಖಾಸಗಿ ಟ್ಯಾಕ್ಸಿಗಳ ಬಿಲ್‌, ಸ್ಪಾ ಸೆಂಟರ್‌ ಇವೆಲ್ಲವೂ ನಮ್ಮ ಉಳಿತಾಯ ಖಾತೆಗೆ ಕನ್ನ ಕೊರೆಯುತ್ತಿವೆ. ಇದರ ಶ್ರೇಯ ಸಲ್ಲಬೇಕಾಗಿರುವುದು ಆನ್‌ಲೈನ್‌ ಸೇವೆಗಳಿಗೆ. ಇಂದು, ಕುಳಿತಲ್ಲೇ ವಸ್ತುಗಳನ್ನು ಖರೀದಿಸಬಹುದು, ಆಹಾರ ಆರ್ಡ್‌ರ್‌ ಮಾಡಬಹುದು, ಕ್ಯಾಬ್‌ ಬುಕ್‌ ಮಾಡಬಹುದು, ಪ್ರವಾಸದ ಪ್ಲಾನ್‌ ಮಾಡಿ, ಟಿಕೆಟ್‌ಅನ್ನೂ ಬುಕ್‌ ಮಾಡಬಹುದು. ಖರ್ಚು ಮಾಡುವುದು ಬಹಳ ಸುಲಭವಾಗಿಬಿಟ್ಟಿರುವುದರಿಂದಲೇ ಉಳಿತಾಯಕ್ಕಿಂತ ಖರ್ಚಿನ ಮೊತ್ತವೇ ಹೆಚ್ಚುತ್ತಿರುವುದು.

ಪ್ಲಾನಿಂಗ್‌ ಆವಶ್ಯಕತೆ ಇದೆ
ಬದಲಾಗಿರುವ ಕಾಲದಲ್ಲಿ, ಜನರ ಈಗಿನ ಆರ್ಥಿಕ ನಿರ್ವಹಣೆಯ ಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾದ ಆವಶ್ಯಕತೆ ಎದ್ದು ಕಾಣುತ್ತಿದೆ. ವಸ್ತುಗಳ ಖರೀದಿ ಗೀಳು, ಸಾಲದ ಬಲೆ ಇವುಗಳಿಗೆ ಈಗಿನ ಮಂದಿ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಪರಾಮರ್ಶಿಸದೆ ಕ್ರೆಡಿಟ್‌ ಕಾರ್ಡ್‌ ಬಳಸುವಿಕೆ, ಎಲೆಕ್ಟ್ರಾನಿಕ್‌ ವಸ್ತುಗಳ ಖರೀದಿಗೆ ಲೋನ್‌ ತೆಗೆದುಕೊಳ್ಳುವುದು, ಕ್ಯಾಷ್‌ಬ್ಯಾಕ್‌ ಆಫ‌ರ್‌ಗಳಿಗೆ ಮರುಳಾಗುವುದು ಇವೆಲ್ಲ ಈಗಿನ ಮಂದಿ ಎಸಗುವ ತಪ್ಪುಗಳು. ಈ ಟ್ರೆಂಡುಗಳೆಲ್ಲ ಜನರನ್ನು ಸಾಲದ ಶೂಲಕ್ಕೆ ಸಿಕ್ಕಿಸಿಹಾಕಲೆಂದೇ ಮಾಡಿರುವಂಥವು. ಆದ್ದರಿಂದ ಜನರು ಮೊದಲು ತಮ್ಮ ಖರ್ಚು- ವೆಚ್ಚಗಳನ್ನು ವ್ಯವಸ್ಥಿತವಾಗಿ ವಿಂಗಡಣೆ ಮಾಡಿಟ್ಟುಕೊಳ್ಳಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next