Advertisement

Money ಮಿಕ್ಸ್‌

11:15 AM Sep 10, 2019 | Sriram |

ಬ್ಯಾಂಕ್‌ಗಳ ವಿಲೀನದ ಘೋಷಣೆಯಾಗಿ ಆಗಲೇ 15 ದಿನಗಳು ಕಳೆ ಗ್ರಾಹಕರಿಗೆ ಲಾಭವಿದೆಯಾ? ಏನಾದರೂ ತೊಂದರೆ ಆಗಲಿದೆಯಾ? ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದವರು ಅದನ್ನು ಎಲ್ಲಿ, ಹೇಗೆ ಮರುಪಾವತಿ ಮಾಡಬೇಕು? ವಿಲೀನಕ್ಕೆ ಒಳಗಾಗುವ ಬ್ಯಾಂಕ್‌ ಸಿಬ್ಬಂದಿಯ ಭವಿಷ್ಯವೇನು? ಇವೆಲ್ಲಾ ಪ್ರಶ್ನೆಗಳಿಗೆ ಲೇಖಕರು ಇಲ್ಲಿ ಉತ್ತರಿಸಲು ಪ್ರಯತ್ನಿಸಿದ್ದಾರೆ…

Advertisement

ತೀರಾ ಇತ್ತೀಚಿನವರೆಗೆ ಭಾರತದ ಬ್ಯಾಂಕಿಂಗ್‌ ಉದ್ಯಮದಲ್ಲಿ 27 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಇದ್ದವು. ಆಗಸ್ಟ್‌ 30, 2019ರಂದು ಬ್ಯಾಂಕುಗಳ ವಿಲೀನದ ಮೂರನೇ ಸುತ್ತು ನಡೆದಿದ್ದು 12 ಇಂಥ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ. ಇದರೊಂದಿಗೆ, ದೇಶವು ಜಾಗತಿಕ ಮಟ್ಟದ ಆರು ಬ್ಯಾಂಕುಗಳು, ರಾಷ್ಟ್ರೀಯ ಮಟ್ಟದ ಎರಡು ಮತ್ತು ಪ್ರಾದೇಶಿಕ ನಾಲ್ಕು ಬ್ಯಾಂಕುಗಳನ್ನು ಹೊಂದಬೇಕು, ಅಂತಾರಾಷ್ಟ್ರೀಯ ಬ್ಯಾಂಕುಗಳೊಂದಿಗೆ ಪೈಪೋಟಿ ನಡೆಸುವಂತಿರಬೇಕು, ಕ್ಯಾಪಿಟಲ್‌ ನಿಟ್ಟಿನಲ್ಲಿ ವಿದೇಶಿ ಬ್ಯಾಂಕುಗಳಿಗೆ ಸಮನಾಗಿರಬೇಕು. ಅನುತ್ಪಾದಕ ಸಾಲಗಳ ನಿಯಂತ್ರಣಕ್ಕೆ ಸಹಾಯಕವಾಗಬೇಕು ಎನ್ನುವ ಬ್ಯಾಂಕುಗಳ ವಿಲೀನದ ಮೂಲ ಉದ್ದೇಶ ಸಾಧಿಸಿದಂತಾಗಿದೆ.

ಗ್ರಾಹಕರ ಮೇಲೆ ಅಗುವ ಪರಿಣಾಮ ಏನು?
ಮೇಲುನೋಟಕ್ಕೆ ಗ್ರಾಹಕನ ಮೇಲೆ ಯಾವುದೇ ಪರಿಣಾಮವಿಲ್ಲ. ವಿಲೀನದಿಂದ ಕೆಲವು ಶಾಖೆಗಳು ಮುಚ್ಚುವುದರಿಂದ, ಅಕಸ್ಮಾತ್‌ ಗ್ರಾಹಕನ ಖಾತೆ ಇರುವ ಶಾಖೆ ಮುಚ್ಚುವ ಅನಿವಾರ್ಯತೆ ಉಂಟಾದರೆ, ಪಕ್ಕದಲ್ಲಿರುವ ಅಥವಾ ಸ್ವಲ್ಪ ದೂರದಲ್ಲಿರುವ ವಿಲೀನಗೊಂಡ ಇನ್ನೊಂದು ಬ್ಯಾಂಕ್‌ಗೆ ಹೋಗಬೇಕಾಗುತ್ತದೆ. ವಿಲೀನ ಪ್ರಕ್ರಿಯೆಯಲ್ಲಿ ಗ್ರಾಹಕರ ಅನುಕೂಲತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಎರಡು ಮೂರು ಶಾಖೆಗಳನ್ನು ವಿಲೀನಗೊಳಿಸುವಾಗ, ಹೆಚ್ಚು ಗ್ರಾಹಕರಿಗೆ ಸಮೀಪವಾದ, ಮಧ್ಯವರ್ತಿಯಾದ, ಹೆಚ್ಚು ಬಿಜಿನೆಸ್‌ ಇರುವ ಮತ್ತು ಸ್ವಂತ ಬಿಲ್ಡಿಂಗ್‌ ಇರುವ ಶಾಖೆಯನ್ನು ಉಳಿಸಿಕೊಳ್ಳುತ್ತಾರೆ. ವಿಲೀನದ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಮತ್ತು ಸಿಬ್ಬಂದಿಗಳ ವರ್ಗಾವರ್ಗಿಯನ್ನು ಹಂತ ಹಂತವಾಗಿ ಮಾಡುವುದರಿಂದ, ಗ್ರಾಹಕರಿಗೆ ಬ್ಯಾಂಕ್‌ ಸಿಬ್ಬಂದಿಯೊಡನೆ ವ್ಯವಹರಿಸಲು ಅಡಚಣೆಯಾಗುವುದಿಲ್ಲ.

ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡುಗಳ ಕತೆಯೇನು?
ತಮ್ಮ ಖಾತೆಯ ನಿಟ್ಟಿನಲ್ಲಿ ಗ್ರಾಹಕರು ಯಾವುದೇ ಹೊಸ ದಾಖಲೆಯನ್ನು ಸಲ್ಲಿಸಬೇಕಾಗಿಲ್ಲ. ಪಾಸ್‌ಬುಕ್‌, ಚೆಕ್‌ಬುಕ್‌ ಮತ್ತು ಡಿಪಾಸಿಟ್‌ ರಶೀದಿಗಳು ಅದೇ ಹೆಸರಿನಲ್ಲಿ ಮುಂದುವರಿಯಲಿವೆ. ವಿಲೀನದ ನಂತರ ರಚನೆಯಾಗುವ ಏಕೀಕೃತ ಬ್ಯಾಂಕಿನ ಹೆಸರಿನ ರಬ್ಬರ್‌ ಸ್ಟ್ಯಾಂಪ್‌ಅನ್ನು ಒತ್ತಲಾಗುವುದು. ವಿಲೀನಗೊಂಡ ಬ್ಯಾಂಕುಗಳ ಮುದ್ರಣ ಮತ್ತು ಲೇಖನ ಸಾಮಗ್ರಿಯನ್ನು ನಾಶಪಡಿಸದೇ, ಅವುಗಳ ಮೇಲೆ ಹೊಸ ಏಕೀಕೃತ ಬ್ಯಾಂಕಿನ ರಬ್ಬರ್‌ ಸ್ಟ್ಯಾಂಪನ್ನು ಬಳಸಲಾಗುವುದು. ಇವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು. ಕೆಲವು ಸಂದರ್ಭಗಳಲ್ಲಿ ಚೆಕ್‌ಬುಕ್‌ಗಳು ಖಾಲಿಯಾಗುವ ತನಕ ಅದನ್ನು ಬಳಸಲು ಅವಕಾಶ ನೀಡಲಾಗುತ್ತಿದೆ. ಹೊಸ ಚೆಕ್‌ ಬುಕ್‌ ನೀಡುವಾಗ ಏಕೀಕೃತ ಬ್ಯಾಂಕ್‌ನ ಚೆಕ್‌ಬುಕ್‌ ಕೊಡಲಾಗುತ್ತದೆ. ಪಾಸ್‌ಬುಕ್‌ ವಿಷಯದಲ್ಲೂ ಇದೇ ಮಾನದಂಡವನ್ನು ಬಳಸಲಾಗುತ್ತದೆ. ಏಕೀಕೃತ ಬ್ಯಾಂಕ್‌ ಆಗಿ ಘೋಷಣೆಯಾಗಿ ಅವಶ್ಯಕ ಟೆಕ್ನಿಕಲ್‌ ಸಪೋರ್ಟ್‌ ವ್ಯವಸ್ಥೆ ಅಳವಡಿಸುವ ತನಕ ಬ್ಯಾಂಕಿನ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳು ಮುಂದುವರಿಯುತ್ತವೆ. ಆಮೇಲೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಸಾಲ ಕಟ್ಟುವವರಿಗೆ ಸೂಚನೆ
ಸಾಲ ಮರುಪಾವತಿ, ವಿವಿಧ ರೀತಿಯ ಬಿಲ್‌ ಪೇಮೆಂಟ್‌ಗೆ ನೀಡಿದ ಖಾತೆ ಲಿಂಕೇಜ್‌ ವಿವರಗಳು ಬದಲಾಗುತ್ತವೆ. ವಿದ್ಯುತ್‌, ನೀರಿನ ಬಿಲ್‌ಗ‌ಳು ನೇರವಾಗಿ ಬ್ಯಾಂಕ್‌ಗೆ ತಲುಪಿ ಬಿಲ್‌ನ ಮೊತ್ತ ತನ್ನಿಂದ ತಾನೇ ಕಡಿತಗೊಳ್ಳುವವಂತೆ ಮಾಡಲು ಗ್ರಾಹಕ ಅನುಮತಿ ಹಾಗೂ ನಿರ್ದಿಷ್ಟ ವಿವರಗಳನ್ನು ನೀಡಿರಬೇಕು. ಬ್ಯಾಂಕ್‌ ವಿಲೀನದ ಸಮಯದಲ್ಲಿ ಈ ವಿವರಗಳು ಬದಲಾಗುವುದರಿಂದ ಏಕೀಕೃತ ಬ್ಯಾಂಕ್‌ ಈ ನಿಟ್ಟಿನಲ್ಲಿ ಗ್ರಾಹಕರಿಗೆ ಮಾಹಿತಿ ನೀಡಿದ ನಂತರ, ಪರಿಷ್ಕೃತ ವಿವರಗಳನ್ನು ಸಂಬಂಧಪಟ್ಟ ಬಿಲ್‌ ಮತ್ತು ಮಾಸಿಕ ಕಂತು- ಲೋನ್‌ ಲಿಂಕೇಜ್‌ ಕೇಂದ್ರಗಳಿಗೆ ನೀಡಬೇಕಾಗುತ್ತದೆ. ಇನ್ನೊಂದು ವಿಚಾರವೆಂದರೆ ಸಾಲದ ಬಡ್ಡಿ ದರ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. ಹೀಗಾಗಿ ವಿಲೀನದ ನಂತರ ಬಡ್ಡಿದರ ಎಷ್ಟಾಗುತ್ತದೆ ಎಂಬ ಗೊಂದಲ ಸಹಜವೇ. ಸಾಮಾನ್ಯವಾಗಿ, ಅಸ್ತಿತ್ವದಲ್ಲಿರುವ ಬ್ಯಾಂಕ್‌ಗಳಿಂದ ಪಡೆದ ಸಾಲಗಳ ಮೇಲಿನ ಬಡ್ಡಿದರ ಸಾಮಾನ್ಯವಾಗಿ ಬದಲಾಗುವುದಿಲ್ಲ. ಬ್ಯಾಂಕ್‌ಗಳ ವಿಲೀನದ ನಂತರ ಗ್ರಾಹಕರಿಗೆ ಸೇವೆಯು ಭಾರವಾಗಬಾರದು ಎನ್ನುವ ಮತ್ತು ಎರಡು ಬ್ಯಾಂಕುಗಳು ವಿಲೀನವಾಗುವಾಗ ಗ್ರಾಹಕರಿಗೆ ಅನುಕೂಲವಾಗುವ ಹಾಗಿರಬೇಕು ಎನ್ನುವ ಧಾಟಿಯಲ್ಲಿ ಚಿಂತನೆಗಳು ಇರುತ್ತವೆ. ಏನೇ ಆದರೂ, ವಿಲೀನಗೊಂಡ ಬ್ಯಾಂಕಿನ ಸೇವೆ ಹಿನ್ನೆಲೆಗೆ ಸರಿದು, ಮೂಲ ಬ್ಯಾಂಕಿನ ಸೇವೆಗಳು ಗ್ರಾಹಕರಿಗೆ ಲಭ್ಯವಾಗುತ್ತವೆ.

Advertisement

ಉದ್ಯೋಗ ಕ್ಷೇತ್ರದ ರಹದಾರಿ ಪಟ್ಟ ಕಳಚಲಿದೆಯೇ?
ಭಾರತೀಯ ರೈಲು ಇಲಾಖೆಯ ನಂತರ ಬ್ಯಾಂಕ್‌ ಉದ್ಯಮ ಉದ್ಯೋಗದ ದೃಷ್ಟಿಯಲ್ಲಿ ದೇಶದ ಎರಡನೇ ಅತಿದೊಡ್ಡ ಉದ್ಯಮವಾಗಿದೆ. ಸುಮಾರು 7.50 ಲಕ್ಷ ಉದ್ಯೋಗಿಗಳಿದ್ದಾರೆ. ಆದರೆ, ಬ್ಯಾಂಕುಗಳ ಗಣಕೀಕರಣದ ನಂತರ, ಬ್ಯಾಂಕುಗಳಲ್ಲಿ ಸುಮಾರು 35% ಉದ್ಯೋಗ ಕಡಿತವಾಗಿದೆ. ಈಗ ವಿಲೀನದಿಂದ, ತಕ್ಷಣದಲ್ಲಿ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ , ಶಾಖೆಗಳ ಕಡಿತದಿಂದಾಗಿ ಸಿಬ್ಬಂದಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುವುದನ್ನು ಅಲ್ಲಗೆಳೆಯಲಾಗದು. ಹೆಚ್ಚಿನ ((surplus) ಸಿಬ್ಬಂದಿಗಳನ್ನುredeploy ಮಾಡುವುದರಿಂದ ಮುಂದಿನ ದಿನಗಳಲ್ಲಿ ನೇಮಕಾತಿ ಕಾಟಾಚಾರಕ್ಕೆ ಇರಬಹುದು ಅಥವಾ ವಿಶೇಷ ಹುದ್ದೆಗಳಿಗೆ (speciallized category) ಮಾತ್ರ ಸೀಮಿತವಾಗಬಹುದು. ಬ್ಯಾಂಕುಗಳಿಗೆ ಇದ್ದ gateway to employment ಹಣೆಪಟ್ಟಿ ಕಳಚಬಹುದು.

ಸಿಬ್ಬಂದಿಗಳ ಮೇಲೆ ಪರಿಣಾಮ ಏನು?
ಬ್ಯಾಂಕ್‌ ಸಿಬ್ಬಂದಿಗಳು, ಮುಖ್ಯವಾಗಿ ಕೆಳವರ್ಗದ ಸಿಬ್ಬಂದಿಗಳು Industrial Dispute Act  ಅಡಿಯಲ್ಲಿ ಇರುವುದರಿಂದ ಅವರಿಗೆ job security ಇದೆ. ಅವರನ್ನು ಅಷ್ಟು ಸುಲಭವಾಗಿ ಉದ್ಯೋಗದಿಂದ ತೆಗೆದುಹಾಕಲಾಗದು. ಆದರೆ, ಉನ್ನತ ವರ್ಗದ ಅಧಿಕಾರಿಗಳನ್ನು ಅದೇ ಹುದ್ದೆಯಲ್ಲಿ ಉಳಿಸಿಕೊಳ್ಳುವುದು ಚಾಲೆಂಜಿಂಗ್‌ ಆಗಿರುತ್ತದೆ. ಮೂರು ಬ್ಯಾಂಕುಗಳು ವಿಲೀನಗೊಂಡಾಗ ಎಲ್ಲಾ ಜನರಲ್‌ ಮ್ಯಾನೇಜರ್‌ಗಳನ್ನು ಮತ್ತು ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ಗಳನ್ನು ಏಕೀಕೃತ ಬ್ಯಾಂಕ್‌ನಲ್ಲಿ ಅದೇ ಹುದ್ದೆಯಲ್ಲಿ ಉಳಿಸಿಕೊಳ್ಳುವುದು ಕಷ್ಟ. ಸಿಬ್ಬಂದಿಗಳ ಸಂಬಳ ಸೌಲಭ್ಯದಲ್ಲಿ ಹೆಚ್ಚಳ ಇಲ್ಲದಿದ್ದರೂ ಕಡಿತವಾಗುವುದಿಲ್ಲ. ಸಂಬಳ ಸೌಲಭ್ಯ ನಿರ್ಧರಿಸುವ ಬ್ಯಾಂಕರ್‌ ಮತ್ತು ಉದ್ಯೋಗಿಗಳ ದ್ವಿಪಕ್ಷೀಯ ಒಪ್ಪಂದದೊಳಗೇ ಇರುತ್ತದೆ. ಯಾವುದಾದರೂ allowanceನಲ್ಲಿ ಅಥವಾ ಸಾಲ ಸೌಲಭ್ಯದಲ್ಲಿ ಸ್ವಲ್ಪ marginal ವ್ಯತ್ಯಾಸ ಇರಬಹುದು.

ಬ್ಯಾಂಕುಗಳ ವಿಲೀನದಿಂದ ಶಾಖೆಗಳು, ಕಚೇರಿಗಳು overlap ಆಗುತ್ತಿದ್ದು ಕೆಲವು ಶಾಖೆಗಳ ಮುಚ್ಚುವಿಕೆ ಮತ್ತು ಸ್ಥಳಾಂತರ ಅನಿವಾರ್ಯವಾಗುತ್ತದೆ. ವಿಲೀನದ ಹಿಂದಿನ ಕಾರಣ ಏನೇ ಇರಲಿ, ಏಕೀಕೃತ ಬ್ಯಾಂಕ್‌ ವಿಲೀನಗೊಂಡ ಬ್ಯಾಂಕ್‌ಗಳನ್ನು ವಿಫ‌ಲಗೊಂಡ ಬ್ಯಾಂಕುಗಳು (failed banks) ) ಎಂದು ಪರಿಗಣಿಸುವ ಪ್ರಮೇಯಗಳೇ ಹೆಚ್ಚು. ಸಿಬ್ಬಂದಿಗಳಲ್ಲಿ ಭಾವನಾತ್ಮಕ ಸಂಬಂಧಗಳು ಏರ್ಪಡಲು ವರ್ಷಗಳೇ ಬೇಕು. ಬ್ಯಾಂಕಿನ ಎಲ್ಲಾ ವ್ಯವಹಾರಗಳಲ್ಲಿ , ಸಂಬಂಧಗಳಲ್ಲಿ, ನೀತಿ ನಿರೂಪಣೆಯಲ್ಲಿ ಏಕೀಕೃತ ಬ್ಯಾಂಕಿನದೇ ಮೇಲುಗೈ ಮತ್ತು ಕೊನೆಯ ಮಾತು. ವಿಲೀನಗೊಂಡ ಬ್ಯಾಂಕುಗಳು “ಹೌದಪ್ಪ’ಗಳಾಗಿ ಉಳಿಯಬೇಕಾಗುತ್ತದೆ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next