Advertisement

Money ಪಾಠ

08:57 AM Sep 26, 2019 | mahesh |

ಈಗಿನ ಮಕ್ಕಳಿಗೆ ದುಡ್ಡಿನ ಬೆಲೆಯೇ ಗೊತ್ತಿಲ್ಲ. ಕಣ್ಣಿಗೆ ಕಂಡಿದ್ದೆಲ್ಲವೂ ಬೇಕು ಅಂತಾರೆ… ಅಂತ ಹೇಳುತ್ತಲೇ ಮಕ್ಕಳಿಗೆ ಧಾರಾಳವಾಗಿ ಪಾಕೆಟ್‌ ಮನಿ ಕೊಡುವ ಅಪ್ಪ-ಅಮ್ಮಂದಿರಿದ್ದಾರೆ. ಬಯಸಿದ್ದೆಲ್ಲವೂ ತಕ್ಷಣವೇ ಕೈಗೆ ಸಿಕ್ಕುಬಿಟ್ಟರೆ, ಮಕ್ಕಳಿಗೆ ದುಡ್ಡಿನ ಮಹತ್ವ, ದುಡ್ಡಿನ ಬೆಲೆ ಅರ್ಥವಾಗುವುದಾದರೂ ಹೇಗೆ? ಮನೆಯಲ್ಲಿ ಕಲಿಯದ ಮನಿ ಮ್ಯಾನೇಜ್‌ಮೆಂಟ್‌ ಪಾಠಗಳನ್ನು, ಶಾಲೆ-ಕಾಲೇಜುಗಳು ಕಲಿಸಲು ಸಾಧ್ಯವೇ?…

Advertisement

ಇತ್ತೀಚೆಗೆ, ಶಕೇತಾ ಮರಿಯನ್‌ ಮೆಗ್ರೆಗರ್‌ ಎಂಬ ಮಹಿಳೆ ಸೋಶಿಯಲ್‌ ಮೀಡಿಯಾಗಳಲ್ಲಿ ಬಹಳ ಸದ್ದು ಮಾಡಿದರು. ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿದ್ದ ಪೋಸ್ಟ್‌ ಒಂದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಬಾರಿ ಶೇರ್‌ ಆಯ್ತು. ಅದರಲ್ಲಿ ಶಕೇತಾ, ತನ್ನ ಮಕ್ಕಳಿಗೆ ಜಾಬ್‌ ಇಂಟರ್‌ವ್ಯೂ ನಡೆಸಿ, ಉದ್ಯೋಗ ನೀಡುತ್ತಿರುವುದಾಗಿ ಬರೆದುಕೊಂಡಿದ್ದರು. ಕೇಳಲು ಸ್ವಲ್ಪ ವಿಚಿತ್ರ ಅನ್ನಿಸಿದರೂ, ಮಕ್ಕಳಿಗೆ ಹಣದ ಮಹತ್ವ ತಿಳಿಸಲು ಆಕೆ ಹುಡುಕಿದ ಉಪಾಯ ಬಹಳಷ್ಟು ಜನರಿಗೆ ಇಷ್ಟವಾಯ್ತು.

ಶಕೇತಾ ಮರಿಯನ್‌, ಅಮೆರಿಕದ ಅಟ್ಲಾಂಟ ಸಿಟಿಯ ನಿವಾಸಿ. ಅವರಿಗೆ ಜಹಕೀಮ್‌, ಟೇಕಿಯಾ, ಸೆರಿನಿಟಿ ಎಂಬ, ಹದಿಮೂರು, ಹತ್ತು ಮತ್ತು ಆರು ವರ್ಷದ ಮೂವರು ಮಕ್ಕಳಿದ್ದಾರೆ. ಸಿಂಗಲ್‌ ಮದರ್‌ ಆಗಿರೋ ಆಕೆಯೇ ಕುಟುಂಬದ ಏಕೈಕ ಆಧಾರ ಸ್ತಂಭ.

ಹಾಗಾಗಿ, ದುಡ್ಡು ಕಾಸಿನ ವಿಷಯದಲ್ಲಿ ಸ್ವಲ್ಪ ಜಾಸ್ತಿಯೇ ಸ್ಟ್ರಿಕ್ಟ್ ಆಗಿರಬೇಕು. ಅಷ್ಟೇ ಅಲ್ಲ, ಕಳೆದ ವರ್ಷ ಅಗ್ನಿ ಅವಘಡದಲ್ಲಿ ಮನೆಯ ಮುಕ್ಕಾಲು ಪಾಲು ವಸ್ತುಗಳು ಸುಟ್ಟು ಹೋಗಿ, ಶಕೇತಾ ಸಂಕಷ್ಟಕ್ಕೆ ಸಿಲುಕಿದರು. ಇಂಥ ಕಷ್ಟದ ಮಧ್ಯೆಯೂ ಮಕ್ಕಳು, ಅದು ಬೇಕು, ಇದು ಬೇಕು ಅಂತೆಲ್ಲಾ ಆಗಾಗ್ಗೆ ಪೀಡಿಸುತ್ತಿದ್ದುದರಿಂದ, ಅವರಿಗೆ ಹಣದ ಬೆಲೆಯನ್ನು ಅರ್ಥ ಮಾಡಿಸುವ ಅಗತ್ಯವೂ ಇತ್ತು.

ಹೀಗಿರುವಾಗ ಒಮ್ಮೆ ಅವರು ಮಕ್ಕಳೊಡನೆ ಶಾಪಿಂಗ್‌ಗೆ ಹೋಗಿದ್ದರು. ಪ್ರತಿ ಸಲದಂತೆ ಮಕ್ಕಳು ಕೇಳಿದ್ದನ್ನು ಕೊಡಿಸುವ ಬದಲು, ಮಕ್ಕಳ ಕೈಗೆ ಒಂದಷ್ಟು ದುಡ್ಡು ಕೊಟ್ಟು, “ಕೊಟ್ಟಿರುವ ಇಷ್ಟು ದುಡ್ಡಿನಲ್ಲಿ ಏನು ಬೇಕೋ, ಅದನ್ನು ಖರೀದಿಸಿ. ಮತ್ತೆ ನನ್ನ ಬಳಿ ದುಡ್ಡು ಕೇಳಬೇಡಿ’ ಅಂದರಂತೆ ಶಕೇತಾ. ಆ ದಿನ, ಮಕ್ಕಳು ಕಂಡಿದ್ದೆಲ್ಲ ಬೇಕು ಅನ್ನಲಿಲ್ಲ! ಬಹಳ ಯೋಚಿಸಿ, ವಸ್ತುವಿನ ಬೆಲೆ ನೋಡಿ, ಅಳೆದು- ತೂಗಿ ತಮಗೆ ಅತೀ ಅಗತ್ಯವಾಗಿ ಬೇಕಾಗಿದ್ದನ್ನು ಮಾತ್ರ ಖರೀದಿಸಿದರಂತೆ. “ಇದು ನಿಮ್ಮ ಸ್ವಂತ ಹಣ’ ಅಂತ ಹೇಳಿದಾಗ, ಮಕ್ಕಳಲ್ಲಿ ಆದ ಬದಲಾವಣೆಯನ್ನು ಗಮನಿಸಿದ ಶಕೇತಾಗೆ ಒಂದು ಉಪಾಯ ಹೊಳೆಯಿತು. ಮನೆಗೆ ಬಂದವರೇ NOW HIRING ಎಂದು ತಮ್ಮ ಕೋಣೆಯ ಬಾಗಿಲಿಗೆ ಜಾಹೀರಾತು ಚೀಟಿ ಅಂಟಿಸಿಬಿಟ್ಟರು!

Advertisement

ಕಿಚನ್‌ ಮ್ಯಾನೇಜರ್‌, ಲೀಡ್‌ ಹೌಸ್‌ಕೀಪರ್‌, ಲಾಂಡ್ರಿ ಸೂಪರ್‌ವೈಸರ್‌- ಎಂಬ ಮೂರು ಹುದ್ದೆಗಳಿಗೆ ಮಕ್ಕಳು ಅರ್ಜಿ ಹಾಕಬೇಕು. ಇಂಟರ್‌ವ್ಯೂ ನಡೆಯುವ ಜಾಗ, ಅಮ್ಮನ ರೂಮ್‌. ಯಾವ ಕೆಲಸಕ್ಕೆ ಯಾರು ಹೆಚ್ಚು ಅರ್ಹರೋ, ಅವರಿಗೆ ಆ ಕೆಲಸ. ಮಾಡುವ ಕೆಲಸಕ್ಕೆ ತಕ್ಕಂತೆ ಸಂಬಳ. ಸಂದರ್ಶನದ ನಂತರ, ಆರು ವರ್ಷದ ಸೆರೆನಿಟಿಗೆ ಲೀಡ್‌ ಹೌಸ್‌ಕೀಪರ್‌ ಹುದ್ದೆಗೆ, ಹತ್ತು ವರ್ಷದ ಟೇಕಿಯಾ ಲಾಂಡ್ರಿ ಡ್ನೂಟಿಗೆ, ಜಹಕೀಮ್‌ ಕಿಚನ್‌ ಮ್ಯಾನೇಜರ್‌ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಸಂದರ್ಶನದ ವೇಳೆ ಸಂದರ್ಶಕರಿಗಿಂತ ಜಾಸ್ತಿ ಪ್ರಶ್ನೆಗಳನ್ನು ಅಭ್ಯರ್ಥಿಗಳೇ ಕೇಳಿದರಂತೆ! ಎಷ್ಟು ಸಂಬಳ ಕೊಡುತ್ತೀರಿ? ಎಷ್ಟು ದಿನಕ್ಕೊಮ್ಮೆ ಸಂಬಳ ಸಿಗುತ್ತದೆ, ಟ್ಯಾಕ್ಸ್‌ ಕಟ್‌ ಮಾಡುತ್ತೀರಾ…ಅಂತೆಲ್ಲಾ ಕೇಳಿ ಶಕೇತಾರನ್ನು ಅಚ್ಚರಿಗೆ ತಳ್ಳಿದ್ದಾರಂತೆ ಮಕ್ಕಳು. ಇದ್ದಕ್ಕಿದ್ದಂತೆ ಮಕ್ಕಳಲ್ಲಿ ಮೂಡಿದ ಜವಾಬ್ದಾರಿ ನೋಡಿ ಅಮ್ಮನಿಗೆ ಖುಷಿಯಾಗಿದೆ. ಅದೇ ಖುಷಿಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸುದ್ದಿಯಾಗಿದ್ದಾರೆ.

ನಾನು ಸಣ್ಣವಳಿದ್ದಾಗ ನಮ್ಮ ಮನೆಯಲ್ಲೂ ಇದೇ ರೀತಿ ನಡೆಯುತ್ತಿತ್ತು. ಅಪ್ಪ-ಅಮ್ಮನಿಗೆ ತೋಟದ ಕೆಲಸದಲ್ಲಿ ನಾನೂ, ಅಣ್ಣಂದಿರೂ ನೆರವಾಗಬೇಕಿತ್ತು. ಅದಕ್ಕೆ ತಕ್ಕಂತೆ ಅಪ್ಪ ನಮಗೆ ದುಡ್ಡು ಕೊಡುತ್ತಿದ್ದರು. ಕಾಫಿ ಕೊಯ್ಲಿನ ದಿನಗಳಲ್ಲಿ ತೋಟಕ್ಕೆ ಹೋಗಿ ಕಾಫಿ ಹಣ್ಣು ಕೊಯ್ಯುವುದು ನಮ್ಮ ಕೆಲಸ. ಒಂದು ಕೊಳಗ ಪೂರ್ತಿ ಹಣ್ಣು ಕೊಯ್ದರೆ ಎರಡು ರೂಪಾಯಿ ಸಿಗುತ್ತಿತ್ತು. ಬೇಗ ಕೊಳಗ ತುಂಬಿದರೆ ಜಾಸ್ತಿ ದುಡ್ಡು ಮಾಡಬಹುದು ಅಂತ, ಕಾಯಿಗಳನ್ನು ಕೊಯ್ಯುವಂತಿರಲಿಲ್ಲ; ಹಣ್ಣನ್ನು ಮಾತ್ರ ಕೊಯ್ಯಬೇಕು. ಕೊಯ್ಯುವಾಗ ಗಡಿಬಿಡಿ ಮಾಡಿ ಹಣ್ಣುಗಳನ್ನೆಲ್ಲ ಕೆಳಗೆ ಬೀಳಿಸುವಂತಿರಲಿಲ್ಲ. ಅಚ್ಚುಕಟ್ಟಾಗಿ ಕೆಲಸ ಮಾಡಿದರಷ್ಟೇ ಪೂರ್ತಿ ಹಣ. ಹಾಗೆ ಅಪ್ಪ ಕೊಟ್ಟ ಎರಡು ರೂಪಾಯಿ ನಮ್ಮ ಹುಂಡಿ ಸೇರುತ್ತಿತ್ತು. ನಾವೇನು ಪ್ರತಿದಿನವೂ ಕೆಲಸ ಮಾಡುತ್ತಿರಲಿಲ್ಲ. ಶನಿವಾರ-ಭಾನುವಾರದ ರಜೆಗಳಲ್ಲಿ ಅಪ್ಪ-ಅಮ್ಮನೊಡನೆ ಒಂದೆರಡು ಗಂಟೆ ತೋಟಕ್ಕೆ ಹೋದರೆ ಸಾಕು. ಕೆಲಸ ಮಾಡಬೇಕೆಂಬ ಒತ್ತಾಯವೂ ಇರಲಿಲ್ಲ. ಆದರೆ, ಕೆಲಸಕ್ಕೆ ತಕ್ಕ ಪ್ರತಿಫ‌ಲ ಸಿಗುತ್ತಿದ್ದುದರಿಂದ ಕೆಲಸದ ಬಗ್ಗೆ ನಮ್ಮೊಳಗೇ ಆಸಕ್ತಿ ಹುಟ್ಟಿಬಿಟ್ಟಿತ್ತು.

ನವೆಂಬರ್‌-ಡಿಸೆಂಬರ್‌ನ ಅಡಕೆ ಕೊಯ್ಲಿನ ಸಮಯದಲ್ಲಂತೂ ಕೈ ತುಂಬಾ ಕೆಲಸ. ಕೊನೆ ತೆಗೆಯುವಾಗ ಕೆಳಗೆ ಬಿದ್ದ ಅಡಕೆ ಹೆಕ್ಕುವುದು, ಸಾಧ್ಯವಾದರೆ ಅಡಕೆ ಸುಲಿಯುವುದು…ಇವು ನಮ್ಮ ಮೇಲಿರುತ್ತಿದ್ದ ಜವಾಬ್ದಾರಿ. ಅಪ್ಪ, ದಿನಾ ರಾತ್ರಿ ಅಡಕೆ ಸುಲಿದವರ ಲೆಕ್ಕ ಬರೆಯುತ್ತಿದ್ದರು. ನಾವು ಬೇಗ ಬೇಗ ಹೋಂ ವರ್ಕ್‌ ಮುಗಿಸಿ, ಅಡಕೆ ಸುಲಿಯಲು ಕೂರುತ್ತಿದ್ದೆವು. ಮಧ್ಯದಲ್ಲೇ ನಿದ್ದೆ ಬಂದು, ಅಲ್ಲಿಯೇ ಮಲಗಿದವರನ್ನು ಅಮ್ಮ ಎತ್ತಿಕೊಂಡು ಹೋಗಿ ಹಾಸಿಗೆ ಮೇಲೆ ಮಲಗಿಸುತ್ತಿದ್ದರು. ಬೆಳಗ್ಗೆ ಎದ್ದಾಗ ಮೊದಲು ಕೇಳುತ್ತಿದ್ದುದು, “ಅಪ್ಪಾ, ನನ್ನ ಸುಲಿತದ ಲೆಕ್ಕ ಬರೆದಿದ್ದೀರಲ್ವಾ?’ ಅಂತ. ಕೊಯ್ಲಿನ ಕೊನೆಯಲ್ಲಿ ಲೆಕ್ಕದ ಪುಸ್ತಕ ತೆರೆದು ನೋಡಿದರೆ, ನಮ್ಮದೂ ನೂರಿನ್ನೂರು ರೂಪಾಯಿ ಸಂಪಾದನೆ ಆಗಿರುತ್ತಿತ್ತು. ಆ ದುಡ್ಡು ಪಡೆಯುವಾಗ ಅದೆಷ್ಟು ಹೆಮ್ಮೆಯಾಗುತ್ತಿತ್ತೆಂದರೆ, ಇದು ನಾನು ದುಡಿದ ದುಡ್ಡು ಅಂತ ಹೆಮ್ಮೆಯಿಂದು ಹೇಳಿಕೊಂಡು ತಿರುಗುತ್ತಿದ್ದೆವು.

ಹೀಗೆ ಸಂಗ್ರಹ ಮಾಡಿಟ್ಟ ಹಣವನ್ನು ಕೆಲವೊಮ್ಮೆ ಅಪ್ಪನೇ ನಮ್ಮಿಂದ ಕೇಳಿ ಪಡೆಯುತ್ತಿದ್ದುದುಂಟು. “ಈಗ ಕೊಟ್ಟಿರು, ಆಮೇಲೆ ನಿನಗೆ ವಾಪಸ್‌ ಕೊಡುತ್ತೇನೆ’ ಅಂತ. ಆಗ ನಾನಂತೂ, “ಮರೆಯದೆ ವಾಪಸ್‌ ಕೊಡಬೇಕು’ ಅಂತ ಮೂರು ಮೂರು ಸಲ ಹೇಳುತ್ತಿದ್ದೆ. ಯಾಕಂದ್ರೆ, ನಾನು ದುಡಿದ ಹಣವಲ್ವಾ? ಅಪ್ಪ ಸುಮ್ಮನೆ ಖರ್ಚು ಮಾಡಿಬಿಟ್ಟರೆ…

ಕೂಡಿಟ್ಟ ಹಣವನ್ನು ಖರ್ಚು ಮಾಡಲು ನಮಗಿದ್ದ ಒಂದೇ ಒಂದು ಅವಕಾಶವೆಂದರೆ, ವರ್ಷಕ್ಕೊಮ್ಮೆ ಬರುತ್ತಿದ್ದ ಮಾರಿ ಜಾತ್ರೆ. ಕೇಳಿದ್ದನ್ನೆಲ್ಲ ಕೊಡಿಸುವ, ಜಾತ್ರೆಗೆಂದು ಪಾಕೆಟ್‌ ಮನಿ ಕೊಡುವ ಸಂಪ್ರದಾಯ ಮನೆಯಲ್ಲಿ ಇರಲಿಲ್ಲ. ಆಗ, ಹುಂಡಿಯ ಹಣ ಹೊರಗೆ ಬರುತ್ತಿತ್ತು. ಐಸ್‌ಕ್ರೀಂ, ಬಳೆ-ಸರವನ್ನೆಲ್ಲ ಅಪ್ಪನ ದುಡ್ಡಿನಿಂದ ಖರೀದಿಸಿ, ಹುಂಡಿಯ ಹಣದಿಂದ ಕ್ವಿಝ್ ಪುಸ್ತಕವನ್ನೋ, ಕತೆ ಪುಸ್ತಕವನ್ನೋ ತರುತ್ತಿದ್ದೆವು. ಕಂಡಿದ್ದೆಲ್ಲವೂ ಚಂದ ಅನ್ನಿಸಿದರೂ, ಹುಂಡಿಯ ಹಣ ಕರಗುವ ಭಯದಲ್ಲಿ, ಅಳೆದು ತೂಗಿ ಖರ್ಚು ಮಾಡುತ್ತಿದ್ದೆವು. ಜಾತ್ರೆಯಿಂದ ಬಂದಮೇಲೆ ಅಮ್ಮ, ಎಲ್ಲರಿಂದ ಲೆಕ್ಕ ಕೇಳುತ್ತಿದ್ದರು. ನಿನ್ನ ಬಳಿ ಎಷ್ಟು ದುಡ್ಡಿತ್ತು, ಎಷ್ಟು ಉಳಿದಿದೆ, ಏನೇನೆಲ್ಲಾ ತಗೊಂಡೆ ಅಂತ. ಸ್ವಲ್ಪ ದೊಡ್ಡವರಾದ ಮೇಲೆ, ಮನೆಯ ಆದಾಯ-ಖರ್ಚಿನ ಲೆಕ್ಕಾಚಾರವನ್ನೂ ನಮ್ಮ ಕೈಯಿಂದಲೇ ಮಾಡಿಸುತ್ತಿದ್ದರು. ಹಾಗಾಗಿ ಮನೆಯ ಹಣಕಾಸಿನ ಪರಿಸ್ಥಿತಿಯ ಬಗ್ಗೆ ತಿಳಿದಿದ್ದ ನಾವು, ನಮ್ಮ ಖರ್ಚಿನ ಇತಿಮಿತಿಗಳನ್ನೂ ಅರಿತಿದ್ದೆವು.

ಯಾವ ಸ್ಕೂಲು- ಕಾಲೇಜು ಕೂಡಾ ಕಲಿಸಲಾಗದ ಮನಿ ಮ್ಯಾನೇಜ್‌ಮೆಂಟ್‌ನ ಪಾಠವನ್ನೂ, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಪೂರೈಸಬೇಕೆಂಬ ಬುದ್ಧಿಯನ್ನು ನಾನು ಕಲಿತಿದ್ದು ಹೀಗೆ. ಒಂದು ಪೈಸೆ ಸಂಪಾದಿಸಲೂ ಕಷ್ಟಪಡಬೇಕು ಅನ್ನುವುದು ಬಾಲ್ಯದಿಂದಲೇ ಅರ್ಥವಾಗಿದ್ದರಿಂದ, ಅನಗತ್ಯ ವಸ್ತುಗಳ ಮೇಲೆ ಹಣ ಖರ್ಚು ಮಾಡುವುದು ನನಗೆ ಈಗಲೂ ಸಾಧ್ಯವಿಲ್ಲ.

ಮಕ್ಕಳಿಗೆ, ಮನೆಯೇ ಮೊದಲ ಪಾಠಶಾಲೆ. ಅಮ್ಮನೇ ಮೊದಲ ಗುರು ಎಂಬುದು ಯಾವತ್ತೂ ಸತ್ಯ. ಮೊದಲು, ಹಣದ ಬೆಲೆ, ಅದರ ಮಹತ್ವವನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು. ಆ ನಂತರವೇ ಅವರ ಕೈಗೆ ಹಣ ಕೊಡಬೇಕು. ಹೋಗ್ಲಿ ಪಾಪ ಅನ್ನುತ್ತಾ ಪುಕ್ಕಟೆಯಾಗಿ ಹಣ ಕೊಟ್ಟರೆ, ಅಕಸ್ಮಾತ್‌ ಅದು ಕಳೆದು ಹೋದರೂ ಮಕ್ಕಳಿಗೆ ಫೀಲ್‌ ಆಗುವುದಿಲ್ಲ. ಆದರೆ, ಅದು ದುಡಿಮೆಯ ಹಣವಾಗಿದ್ದರೆ, ಕಳೆದುಕೊಂಡ ಹಣಕ್ಕಾಗಿ ಇಡೀ ದಿನ ಯೋಚಿಸುತ್ತಾರೆ. ದುಡಿದು ಸಂಪಾದಿಸಿದಾಗಲೇ ಹಣದ ಬೆಲೆ ಅರ್ಥವಾಗುವುದು. ಹಾಗಾಗಿ, ಮಕ್ಕಳಿಗೆ ಕೇಳಿದ್ದೆಲ್ಲವನ್ನೂ ಕೊಡಿಸಬೇಡಿ. ಪುಕ್ಕಟೆಯಾಗಿ ಪಾಕೆಟ್‌ಮನಿ ಕೊಡುವ ಬದಲು, ಚಿಕ್ಕ ಚಿಕ್ಕ ಕೆಲಸಗಳ ಜವಾಬ್ದಾರಿ ನೀಡಿ. ನೀನು ಮಾಡುವ ಕೆಲಸಕ್ಕೆ ತಕ್ಕಂತೆ ಹಣ ಕೊಡುತ್ತೇನೆ ಅಂದಾಗಲೇ ಅವರಿಗೆ ದುಡಿಮೆಯ, ಹಣದ ಮಹತ್ವ ಅರ್ಥವಾಗುವುದು.

ಪ್ರಿಯಾಂಕ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next