ಹೊಸದಿಲ್ಲಿ: ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಡಿಕೆ ಶಿವಕುಮಾರ್ ವಿರುದ್ಧದ 2018 ರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸೆಪ್ಟೆಂಬರ್ 2019 ರಲ್ಲಿ ಬಂಧಿಸಿದ್ದರು. ದೆಹಲಿ ಹೈಕೋರ್ಟ್ ಅಕ್ಟೋಬರ್ ನಲ್ಲಿ ಅವರಿಗೆ ಜಾಮೀನು ನೀಡಿತು. ಶಿವಕುಮಾರ್ ಅವರು ಇದು ಬಿಜೆಪಿ ರಾಜಕೀಯ ಸೇಡಿನ ತಂತ್ರ ಎಂದು ಆರೋಪಿಸಿದ್ದರು.
2017 ರಲ್ಲಿ ಡಿಕೆಶಿ ಮತ್ತು ಅವರ ಸಹಾಯಕರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗಳ ಬಳಿಕ ಇಡಿ ತನಿಖೆ ನಡೆದಿತ್ತು. ಈ ದಾಳಿಗಳಲ್ಲಿ ಸುಮಾರು 300 ಕೋಟಿ ರೂ ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಕಳೆದ ವರ್ಷ ನವೆಂಬರ್‌ನಲ್ಲಿ, ಕ್ರಿಮಿನಲ್ ಪಿತೂರಿ – ಐಪಿಸಿಯ 120 ಬಿ ಅಡಿಯಲ್ಲಿ – ಮನಿ ಲಾಂಡರಿಂಗ್ ತಡೆಗಟ್ಟುವಿಕೆ ಕಾಯಿದೆಯಡಿಯಲ್ಲಿ ನಿಗದಿತ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಈ ತೀರ್ಪಿನ ಮರುಪರಿಶೀಲನೆಗೆ ಇಡಿ ಕೋರಿದೆ.
ಇಡಿ ಮರುಪರಿಶೀಲನಾ ಕೋರಿಕೆಯನ್ನು ಅಂಗೀಕರಿಸಿದರೆ ಇಂದಿನ ಆದೇಶವನ್ನು ಮರು ಪಡೆಯಲು ಸಂಸ್ಥೆಯು ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಇಂದು ಹೇಳಿದೆ.