Advertisement

ಹಣ ಅವಶ್ಯಕ, ಅದುವೇ ಸರ್ವಸ್ವ ಅಲ್ಲ

12:26 PM Aug 26, 2018 | Team Udayavani |

ಬೆಂಗಳೂರು: ಬದುಕಿಗೆ ಹಣ ಅವಶ್ಯಕ, ಆದರೆ ಅದುವೇ ಸರ್ವಸ್ವ ಅಲ್ಲ. ಸಂಪಾದಿಸಿದ ಹಣಕ್ಕೆ ಲಕ್ಷ್ಮಣ ರೇಖೆ ಹಾಕಿಕೊಂಡು ಯಾವುದೇ ಫ‌ಲಾಪೇಕ್ಷೆ ಇಲ್ಲದೆ ನಿರ್ಗತಿಕರಿಗೆ ಸಹಾಯ ಮಾಡುವುದೇ ಬದುಕಿನ ನಿಜವಾದ ಸಂಭ್ರಮ ಎಂದು ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದ್ದಾರೆ.

Advertisement

ಪಿಇಎಸ್‌ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ನಿಮ್ಮ ಸಂಪಾದನೆಯಲ್ಲಿ ಮತ್ತೂಬ್ಬರಿಗೆ ಸಹಾಯ ಮಾಡುವುದರಲ್ಲಿ ಬದುಕಿನ ಸಂಭ್ರಮ ಕಂಡುಕೊಳ್ಳಿ. ಸಮಾಜದಲ್ಲಿ ನಿಮ್ಮ ನೆರವಿನ ನಿರೀಕ್ಷೆಯಲ್ಲಿರುವವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಗುಣ ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಕೊಡುವ ಕಲೆ ಶ್ರೇಷ್ಠ: ದೃಢ ನಿರ್ಧಾರ ಮತ್ತು ಆತ್ಮಸ್ಥೈಯ ಯಶಸ್ಸಿನ ಪ್ರಮುಖ ಗುಣಗಳು. ವೈಯುಕ್ತಿಕವಾಗಿ ಎಷ್ಟೇ ಸಮರ್ಥರಿದ್ದರೂ, ಸಂಘಟಿತ ಶ್ರಮ ಮುಖ್ಯ. ನಿಜ ಜೀವನದಲ್ಲಿ ಕೌಶಲ್ಯಗಳನ್ನು ಅವಕಾಶಗಳನ್ನಾಗಿ ಬಳಸಿಕೊಳ್ಳಬೇಕು. ಸಾಧಿಸುವ ಕಲೆಗಿಂತ ಕೊಡುವ ಕಲೆ ಶ್ರೇಷ್ಠ.

ಹಾಗಾಗಿ ನಮಗೆ ಸಿಗುವ ಪದವಿಗಳು, ಬಿರುದುಗಳು ಮುಖ್ಯವಲ್ಲ. ನಮ್ಮ ಜೀವನದಲ್ಲಿ ಎಷ್ಟು ಜನರ ಕಷ್ಟಗಳಿಗೆ ಸ್ಪಂದಿಸಿದ್ದೇವೆ ಎನ್ನುವುದು ಮುಖ್ಯ. ಹಾಗಾಗಿ, ಹಂಚುವ, ಕೊಡುವ ಕಲೆಯನ್ನು ಬೆಳೆಸಿಕೊಳ್ಳಿ. ಆ ಮೂಲಕ ಶಿಕ್ಷಕರು, ಪೋಷಕರು ಮತ್ತು ಸಮಾಜಕ್ಕೆ ಕೃತಜ್ಞತೆ ಸಲ್ಲಿಸಿ ಎಂದು ತಿಳಿಸಿದರು.

ಪಿಇಎಸ್‌ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಹಾಗೂ ಪಿಇಎಸ್‌ ವಿವಿ ಕುಲಾಧಿಪತಿ ಡಾ. ಎಂ.ಆರ್‌. ದೊರೆಸ್ವಾಮಿ ಮಾತನಾಡಿ, ಸ್ವತಂತ್ರ ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಏರಿಕೆಯಾಗಿದೆ. ಆದರೆ, ಗುಣಮಟ್ಟ ಕುಸಿದಿದೆ. ದೇಶದ ಶೇ.29ರಷ್ಟು ಮಾತ್ರ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಉದ್ಯೋಗ ಕ್ಷಮತೆ ಇದೆ.

Advertisement

ದೇಶದಲ್ಲಿ ಸುಮಾರು 31 ಸಾವಿರಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಗಳಿವೆ. ಆದರೆ ಅವುಗಳ ಶಿಕ್ಷಣದ ಗುಣಮಟ್ಟ ಸಮಧಾನಕರವಾಗಿಲ್ಲ. ಈ ನಿಟ್ಟಿನಲ್ಲಿ ವಿವಿಗಳು ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.

1627 ವಿದ್ಯಾರ್ಥಿಗಳಿಗೆ ಪದವಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌, ಬಿಬಿಎ, ಎಂಬಿಎ ಕೋರ್ಸ್‌ಗಳಲ್ಲಿ ಉತ್ತೀರ್ಣರಾದ 1,627 ವಿದ್ಯಾರ್ಥಿಗಳಿಗೆ ಇದೇ ವೇಳೆ ಪದವಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಪಿಇಎಸ್‌ ವಿವಿ ಸಮಕುಲಾಧಿಪತಿ ಪ್ರೊ.ಡಿ.ಜವಾಹರ್‌, ಉಪಕುಲಪತಿ ಡಾ.ಕೆ.ಎನ್‌.ಬಿ.ಮೂರ್ತಿ, ರಿಜಿಸ್ಟ್ರಾರ್‌ ಡಾ.ವಿ.ಕೃಷ್ಣಮೂರ್ತಿ ಮತ್ತಿತರರು ಇದ್ದರು.

ಜೀವನದ ವಾಸ್ತವ ಅರಿತು ಬದುಕಿ: “ನಮ್ಮದು “ಆಚಾರ್ಯ ದೇವೋಭವ’ ಪರಂಪರೆ. ಕಚ್ಚಾ ವಸ್ತುಗಳಾಗಿ ಕಾಲೇಜುಗಳಿಗೆ ಬರುವ ನೀವು ಸಿದ್ಧವಸ್ತುಗಳಾಗಿ ಹೊರ ಹೋಗುತ್ತೀರಿ. ನಿಮ್ಮನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಕಾಲೇಜು ದಿನಗಳು ನಿಮ್ಮ ಪಾಲಿಗೆ ಸುರಕ್ಷಿತ.

ಏಕೆಂದರೆ, ಇಲ್ಲಿ ಸಿದ್ಧ ಪಠ್ಯಕ್ರಮ, ಪ್ರಶ್ನೆ ಪತ್ರಿಕೆ, ನಿಗದಿತ ಅವಧಿಯಲ್ಲಿ ಪರೀಕ್ಷೆ ಇರುತ್ತದೆ. ಆದರೆ, ಕಲಿಕೆ ಮುಗಿಸಿ ನಿಜ ಜೀವನ ಪ್ರವೇಶಿಸಿದಾಗ ಎಲ್ಲವೂ ಅನಿಶ್ಚಿತ. ಬದುಕಿನ ಪಠ್ಯಕ್ರಮವೇನು? ಪ್ರಶ್ನೆ ಪತ್ರಿಕೆ ಹೇಗಿರುತ್ತದೆ? ಪರೀಕ್ಷೆ ಯಾವಾಗ ಎದುರಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಈ ವಾಸ್ತವ ಅರಿತು ಬದುಕಿ’ ಎಂದು ಸುಧಾ ಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next