Advertisement

Karnataka: ಅಕ್ಕಿ ಬದಲಿಗೆ ಹಣ- ಒಂದೂವರೆ ಸಾವಿರ ಕೋ. ರೂ. ಉಳಿಕೆ

11:07 PM Jun 28, 2023 | Team Udayavani |

ಬೆಂಗಳೂರು: “ಅನ್ನಭಾಗ್ಯ”ದಡಿ ಅಕ್ಕಿ ಬದಲಿಗೆ ಹಣ ನೀಡುವ ನಿರ್ಧಾರ ಕೈಗೊಳ್ಳುವ ಮೂಲಕ ಸರಕಾರ, ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದಿದೆ. ಒಂದೆಡೆ “ಹೆಚ್ಚುವರಿ ಅಕ್ಕಿ’ ಹೊಂದಿಸಲು ಪ್ರತಿ ತಿಂಗಳು ಪ್ರತಿ ಹಂತದಲ್ಲಿ ಎದುರಾಗಬಹುದಾದ ತಲೆನೋವಿಗೆ ಬ್ರೇಕ್‌ ಹಾಕುವುದರ ಜತೆಗೆ ಅನಾಯಾಸವಾಗಿ ವಾರ್ಷಿಕ ಸಾವಿರಾರು ಕೋಟಿ ರೂ. ಉಳಿತಾಯ ಮಾಡಲಿದೆ. ಇನ್ನೊಂದೆಡೆ ಮಹಿಳೆಯರಿಗೆ ಪರೋಕ್ಷವಾಗಿ ಮತ್ತೂಂದು ಬಂಪರ್‌ ಕೊಡುಗೆ ನೀಡುವ ಮೂಲಕ ಅವರ ಮನವನ್ನೂ ಗೆಲ್ಲಲು ಹೊರಟಿದೆ!

Advertisement

ಹೇಗೆ ಲೆಕ್ಕಹಾಕಿದರೂ ಕೆಜಿಗೆ 34 ರೂ. ಪಾವತಿಸಿ ತರುವ ಅಕ್ಕಿಯು ಫ‌ಲಾನುಭವಿಗಳ ಕೈಸೇರಲು ಕನಿಷ್ಠ 40ರಿಂದ 42 ರೂ. ಖರ್ಚಾಗುತ್ತಿತ್ತು. ನೆರೆ ರಾಜ್ಯಗಳಿಂದ ಬರುವ ಅಕ್ಕಿಯ ಸಾಗಾಣಿಕೆ ವೆಚ್ಚ, ಖಾಸಗಿ ಗೋದಾಮುಗಳಲ್ಲಿ ಮಾಡಲಾಗುವ ಅದರ ದಾಸ್ತಾನು ವೆಚ್ಚ, ನಿರ್ವಹಣ ವೆಚ್ಚ, ಸೋರಿಕೆ, ಕಮಿಷನ್‌ ಹಾವಳಿ ಇದೆಲ್ಲವೂ ಸೇರಿದರೆ ನಿಗದಿಗಿಂತ 6-8 ರೂ. ಹೆಚ್ಚುವರಿ ಖರ್ಚು ಮಾಡಬೇಕಿತ್ತು. ಈಗ ಅದಾವುದರ ತಲೆನೋವೂ ಇಲ್ಲ. ಇದರಿಂದ ವಾರ್ಷಿಕ ಅಂದಾಜು ಒಂದೂವರೆ ಸಾವಿರ ಕೋಟಿ ರೂ. ಸರಕಾರಕ್ಕೆ ಉಳಿತಾಯ ಆಗಲಿದೆ.

ಲೆಕ್ಕಾಚಾರದ ಪ್ರಕಾರ ಒಬ್ಬ ವ್ಯಕ್ತಿಗೆ ಒಂದು ತಿಂಗಳಿಗೆ ಐದು ಕೆಜಿ ಅಕ್ಕಿ ನೀಡಲು ಕನಿಷ್ಠ 200-210 ರೂ. ಖರ್ಚಾಗುತ್ತಿತ್ತು. ಈಗ ನೇರವಾಗಿ ಕೆಜಿಗೆ 34 ರೂ. ಜಮೆ ಮಾಡುವುದರಿಂದ ಪ್ರತಿ ವ್ಯಕ್ತಿಗೆ 170 ರೂ. ಖರ್ಚಾಗುತ್ತದೆ. ಅದರಂತೆ 30-40 ರೂ. ಉಳಿತಾಯ ಆಗುತ್ತದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಪ್ರಕಾರ ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಗಳ ಸಂಖ್ಯೆ ಅಂದಾಜು 1.10 ಕೋಟಿ ಇದ್ದು, ಪ್ರತಿ ಕುಟುಂಬದಲ್ಲಿ ಸರಾಸರಿ ನಾಲ್ವರು ಸದಸ್ಯರ ಲೆಕ್ಕಹಾಕಿದರೂ ಇದು 1,500 ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತ ಯಾವುದೇ ಕಸರತ್ತಿಲ್ಲದೆ ಉಳಿತಾಯ ಆಗುತ್ತದೆ.

ಅಷ್ಟೇ ಅಲ್ಲ, ಅಕ್ಕಿ ಹೊಂದಿಸುವುದು ಸರಕಾರದ ಪಾಲಿಗೆ “ರಾಜಕೀಯ ಕಾರಣ’ಗಳಿಂದ ಪ್ರತಿ ತಿಂಗಳು ಅಕ್ಷರಶಃ ಗಜಪ್ರಸವ ಆಗುತ್ತಿತ್ತು. ನೆರೆ ರಾಜ್ಯಗಳ ಮೇಲೆ ಅವಲಂಬನೆ ತಪ್ಪುತ್ತಿರಲಿಲ್ಲ. ಪ್ರತಿ ಸಲ ಚೌಕಾಸಿಗಿಳಿಯಬೇಕಿತ್ತು. ಅಕ್ಕಿ ಲಭ್ಯವಾದರೂ ಅದನ್ನು ಸಾಗಿಸಲು ಅಗತ್ಯವಿರುವ ಬೋಗಿಗಳು ಸಕಾಲಕ್ಕೆ ಸಿಗಬೇಕಿತ್ತು. ಅದಕ್ಕೆ ಮತ್ತೆ ರೈಲ್ವೆ ಇಲಾಖೆ ಮೊರೆಹೋಗಬೇಕಿತ್ತು. ಈ ಎಲ್ಲ ಕಿರಿಕಿರಿಯಿಂದ ರಾಜ್ಯ ಸರಕಾರಕ್ಕೆ ಮುಕ್ತಿ ದೊರೆತಂತಾಗಿದೆ.

ಚಂಡೀಗಢ, ಪುದುಚೇರಿ ಮಾದರಿ
ನೇರವಾಗಿ ಫ‌ಲಾನುಭವಿಗೆ ಹಣ ನೀಡುವುದರಿಂದ ಅಕ್ಕಿಗಿಂತ ಇದು ಆಕರ್ಷಕ ಎನಿಸುತ್ತದೆ. ಸೋರಿಕೆಗೆ ಕಡಿವಾಣವೂ ಬಿದ್ದಂತಾಗುತ್ತದೆ. ಅಷ್ಟಕ್ಕೂ ರಾಷ್ಟ್ರೀಯ ಆಹಾರ ಹಕ್ಕು ಕಾಯ್ದೆ ಕೂಡ ಆಹಾರ ಧಾನ್ಯ ನೀಡಬೇಕು. ಇದು ಸಾಧ್ಯವಾಗದಿದ್ದರೆ ಹಣ ಪಾವತಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಚಂಡೀಗಢ ಮತ್ತು ಪುದುಚೇರಿಯಲ್ಲಿ ಐದಾರು ವರ್ಷಗಳಿಂದ ಇದೇ ಮಾದರಿಯಲ್ಲಿ ಹಣವನ್ನು ಪಾವತಿಸಲಾಗುತ್ತಿದೆ.

Advertisement

“ಗೃಹಲಕ್ಷ್ಮೀ’ ಮೊದಲೇ ಬರಲಿರುವ “ಲಕ್ಷ್ಮೀ’!
ಮಹಿಳೆಯರಿಗೆ “ಗೃಹಲಕ್ಷ್ಮೀ’ ಯೋಜನೆ ಅಡಿ ಪ್ರತಿ ತಿಂಗಳು ಎರಡು ಸಾವಿರ ಹಣ ಬರುವುದಕ್ಕೂ ಮೊದಲೇ ಅವರ ಖಾತೆಗೆ ಈಗ “ಅನ್ನಭಾಗ್ಯ’ದಡಿ ಅಂದಾಜು 800ರಿಂದ ಒಂದು ಸಾವಿರ ರೂ. ಜಮೆಯಾಗಲಿದೆ! ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿರುವ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡುದಾರರ ಪೈಕಿ ಶೇ. 90ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯೇ ಆಗಿದ್ದಾಳೆ. ಕುಟುಂಬದ ಒಬ್ಬ ಸದಸ್ಯನಿಗೆ 5 ಕೆಜಿ ಅಕ್ಕಿ ಬದಲಿಗೆ 170 ರೂ. ಬರಲಿದೆ. ಒಂದು ಕುಟುಂಬದಲ್ಲಿ ಸರಾಸರಿ 4-5 ಜನ ಲೆಕ್ಕಹಾಕಿದರೆ 680-850 ರೂ. ಆಗುತ್ತದೆ. ಇದು ಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಸರಕಾರಕ್ಕೆ ರಾಜಕೀಯವಾಗಿ ಅನುಕೂಲ ಆಗಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿ ಅಂತ್ಯೋದಯ, ಬಿಪಿಎಲ್‌, ಎಪಿಎಲ್‌ ಸೇರಿ ಒಟ್ಟಾರೆ ಕಾರ್ಡ್‌ದಾರರ ಸಂಖ್ಯೆ 1.53 ಕೋಟಿ ಇದ್ದು, ಈ ಪೈಕಿ ಮಹಿಳಾ ಮುಖ್ಯಸ್ಥರಿರುವ ಕಾರ್ಡ್‌ಗಳ ಸಂಖ್ಯೆ 1.33 ಕೋಟಿ. ಅಂದರೆ ಶೇ. 87.50 ಆಗುತ್ತದೆ.

“ಗೃಹಲಕ್ಷ್ಮೀ’ ಅಡಿ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ರೂ. ನೀಡುವ ಯೋಜನೆಗೆ ಇನ್ನೂ ಆರಂಭವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next