Advertisement

ಆರ್‌ಟಿಇ ಮಕ್ಕಳಿಂದಲೂ ಹಣ ವಸೂಲಿ

12:01 PM May 19, 2017 | |

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ 2012-13ರಿಂದ 2016-17ರ ವರೆಗೆ ಖಾಸಗಿ ಶಾಲೆಗೆ ಸೇರಿದ ಮಕ್ಕಳ ಪೈಕಿ 92 ಮಕ್ಕಳ ಪಾಲಕರು ಶಾಲಾಡಳಿತ ಮಂಡಳಿಗಳಿಗೆ 9,32,835 ರೂ. ಹಣ ನೀಡಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಆರ್‌ಟಿಇ ಕಾರ್ಯಪಡೆ ಬಹಿರಂಗಪಡಿಸಿದೆ.

Advertisement

ಆರ್‌ಟಿಇ ಕಾಯ್ದೆಯ ಅಡಿಯಲ್ಲಿ ಸೀಟು ಪಡೆದ ಮಕ್ಕಳಿಂದ ಖಾಸಗಿ ಶಾಲೆಗಳು ನಯಾಪೈಸ ಪಡೆದುಕೊಳ್ಳುವಂತಿಲ್ಲ. ಸಾರಿಗೆ ಶುಲ್ಕ ಹೊರತುಪಡಿಸಿ ಬೇರೆಲ್ಲ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಆದರೆ, ಕೆಲವು ಶಾಲೆಗಳ ಆಡಳಿತ ಮಂಡಳಿಗಳು ಅಕ್ರಮವಾಗಿ ಶುಲ್ಕ ವಸೂಲಿ ಮಾಡಿರುವ ಬಗ್ಗೆ ಆರ್‌ಟಿಇ ಕಾರ್ಯಪಡೆ ಪತ್ತೆಹಚ್ಚಿದೆ. ಈ ಕುರಿತ ವರಿದಿಯನ್ನು ಗುರುವಾರ ಪ್ರಕಟಿಸಿದೆ.

2012-13ರಲ್ಲಿ 17, 2013-14ರಲ್ಲಿ 19, 2014-15ರಲ್ಲಿ 20, 2015-16ರಲ್ಲಿ 24 ಹಾಗೂ 2016-17ರಲ್ಲಿ 12 ಪಾಲಕರು ಒಟ್ಟು 9,32,835 ರೂ. ಪಾವತಿಸಿದ್ದಾರೆ ಎಂದು ಕಾರ್ಯಪಡೆ ಸಂಚಾಲಕ ನಾಗಸಿಂಹ ಜಿ.ರಾವ್‌ ತಿಳಿಸಿದರು.

ಹಣ ಪಾವತಿಸಿದ ಮಕ್ಕಳ ಪಾಲಕರ ಪೈಕಿ ಶೇ.61ರಷ್ಟು ಮಂದಿ ಶಾಲೆಗಳ ಆಡಳಿತ ಮಂಡಳಿ ಒತ್ತಡದ ಮೇರೆಗೆ ಹಣ ನೀಡಿದ್ದಾರೆ. ಶೇ. 31ರಷ್ಟು ಮಂದಿ ಪಠ್ಯಪುಸ್ತಕ, ಸಮವಸ್ತ್ರಗಳಿಗೆ ಹಣ ನೀಡಿದ್ದಾರೆ. ಶೇ8ರಷ್ಟು ಮಂದಿ ಶಾಲಾ ನಿರ್ವಹಣೆಗೆ ಹಣ ನೀಡಿದ್ದಾರೆ. ಕೆಲವರು ರಶೀದಿಯನ್ನು ಪಡೆದಿದ್ದಾರೆ ಎಂಬುದು ವರದಿಯಲ್ಲಿ ಬಹಿರಂಗಗೊಂಡಿದೆ. 

ಜಯನಗರ, ಜೆ.ಪಿ.ನಗರ, ಬಸವನಗುಡಿ, ಹನಮಂತನಗರ, ಕುರುಬರಹಳ್ಳಿ, ಲಗ್ಗೆರೆ, ಕೋರಮಂಗಲ, ಇಂದಿರಾ ನಗರ, ಕೆಂಗೇರಿ, ಬನ್ನೇರುಘಟ್ಟ, ನಂದಿನಿ ಲೇಔಟ್‌, ಪ್ರೇಜರ್‌ಟೌನ್‌, ಲಿಂಗರಾಜಪುರಂ, ಮುಂತಾದ ಸ್ಥಳಗಳಲ್ಲಿ ತೀರಾ ಬಡ ಪೋಷಕರನ್ನು ಗುರುತಿಸಿ ಈ ಅಧ್ಯಯನ ನಡೆಸಲಾಗಿದೆ.

Advertisement

ಶಾಲೆಗೆ ಹಣ ನೀಡಿದ ಪೋಷಕರಲ್ಲಿ 10 ಮಂದಿ ಬಿಇಒಗಳಿಗೆ ದೂರು ನೀಡಿದ್ದು, 14 ಮಂದಿ ನೇರವಾಗಿ ಶಿಕ್ಷಣ ಇಲಾಖೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ಪೈಕಿ ಐದು ಪೋಷಕರಿಗೆ ಮಾತ್ರ ದೂರಿನ ಕುರಿತು ಸಂಬಂಧಪಟ್ಟವರಿಂದ ಪ್ರತಿಕ್ರಿಯೆ ಬಂದಿದೆ ಎಂಬ ಮಾಹಿತಿ ನೀಡಿದರು.

ಆರ್‌ಟಿಇ ಕಾರ್ಯಪಡೆ ಶಿಫಾರಸುಗಳು
* ಆರ್‌ಟಿಇ ಅಡಿ ದಾಖಲಾದವರ ಹಣವನ್ನು ಸರ್ಕಾರವೇ ಶಾಲೆಗೆ ನೀಡುತ್ತಿದೆ ಎಂಬುದನ್ನು ಮಕ್ಕಳ ಪೋಷಕರಿಗೆ ಮನವರಿಕೆ ಮಾಡಬೇಕು.
* ಹೆಚ್ಚುವರಿ ಶುಲ್ಕದ ವಿರುದ್ಧ ದೂರು ನೀಡುವ ವ್ಯವಸ್ಥೆ ಬಲಗೊಳಿಸಬೇಕು.
* ಶಾಲೆಯು ವಾರ್ಷಿಕೋತ್ಸ, ಪ್ರವಾಸ, ಕ್ರೀಡೆ, ಪೂಜೆ ಇತ್ಯಾದಿಗಳಿಗೆ ಶುಲ್ಕ ವಸೂಲಿ ಮಾಡುವ ಮೊದಲು ಇಲಾಖೆಯ ಅನುಮತಿ ಪಡೆಯಬೇಕು.
* ಶಾಲೆಗಳಲ್ಲಿ ಕಡ್ಡಾಯವಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚಿಸಬೇಕು.
* ಹಣ ನೀಡಿ ಆರ್‌ಟಿಇ ಸೀಟು ಪಡೆದ ಪಾಲಕರ ಆರ್ಥಿಕ ಸ್ಥಿತಿ ಅಧ್ಯಯನ ಮಾಡಬೇಕು.
* ಖಾಸಗಿ ಶಾಲೆ ಆರ್‌ಟಿಇ ಮಕ್ಕಳನ್ನು ಸೇರ್ಪಡೆ ಮಾಡಿಸಿಕೊಂಡಿದ್ದಕ್ಕಾಗಿ ಸರ್ಕಾರದಿಂದ ಹಣ ಪಡೆದಿರುವ ಬಗ್ಗೆ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಬೇಕು.
* ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾಸಗಿ ಶಾಲೆಗೆ ಭೇಟಿನೀಡಿ, ಆರ್‌ಟಿಇ ಪ್ರವೇಶ ಹಾಗೂ ಮಕ್ಕಳ ಪರಿಸ್ಥಿತಿ ತಿಳಿಯಬೇಕು.
* ಆರ್‌ಟಿಇ ಪ್ರವೇಶ ಇತ್ಯಾದಿಗೆ ಸಂಬಂಧಿಸಿದಂತೆ ಇಲಾಖೆ ಆಗಾಗ ದ್ವಂದ್ವ ನಿಲುವಿನ ಸುತ್ತೋಲೆ ಹೊರಡಿಸುವುದನ್ನು ನಿಲ್ಲಿಸಬೇಕು

ಸೀಟು ನಿರಾಕರಿಸಿದ ಡಿಕೆಶಿ ಒಡೆತನದ ಶಾಲೆ ವಿರುದ್ಧ ವಿದ್ಯಾರ್ಥಿಗಳಿಗೆ ಜಯ 
ಬೆಂಗಳೂರು:
ಶಿಕ್ಷಣ ಹಕ್ಕು ಕಾಯಿದೆ  (ಆರ್‌ಟಿಇ) ಅಡಿಯಲ್ಲಿ ಸರ್ಕಾರ ಮಕ್ಕಳಿಗೆ ಸೀಟು ಹಂಚಿಕೆ ಮಾಡಿದ್ದರೂ ದಾಖಲಾತಿ ಮಾಡಿಕೊಳ್ಳದ ಖಾಸಗಿ ಶಾಲೆಯ ಕ್ರಮ ಪ್ರಶ್ನಿಸಿ ಹೈಕೋರ್ಟ್‌ ಮೊರೆಹೋಗಿದ್ದ 24 ವಿದ್ಯಾರ್ಥಿಗಳಿಗೆ ಜಯ ದೊರೆತಿದೆ.

ರಾಜರಾಜೇಶ್ವರಿ ನಗರದ “ನ್ಯಾಶನಲ್‌ ಹೈ ಹೀಲ್‌ ವ್ಯೂ’ ಶಾಲಾ ಆಡಳಿತ ಮಂಡಳಿ ಮಕ್ಕಳ ದಾಖಲಾತಿಗೆ ನಿರಾಕರಿಸಿತ್ತು. ಶಾಲೆಯ ನಡೆ ಪ್ರಶ್ನಿಸಿ ಪ್ರಕ್ಷಿತ್‌ ಕೆ. ಗೌಡ ಸೇರಿದಂತೆ 24 ವಿದ್ಯಾರ್ಥಿಗಳು ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಗುರುವಾರ ಪುರಸ್ಕರಿಸಿರುವ ನ್ಯಾಯಮೂರ್ತಿ ಬಿ.ಮನೋಹರ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರ ವಿದ್ಯಾರ್ಥಿಗಳಿಗೆ 1ನೇ ತರಗತಿಗೆ ಪ್ರವೇಶಾತಿ ನೀಡುವಂತೆ ಶಾಲಾ ಆಡಳಿತ ಮಂಡಳಿಗೆ ನಿರ್ದೇಶಿಸಿ ನೋಟೀಸ್‌ ಜಾರಿಗೊಳಿಸಿದೆ.

ಅಲ್ಲದೆ ಈ ಸಂಬಂಧ  ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಉಪ  ನಿರ್ದೇಶಕರು, ಬೆಂಗಳೂರು ದಕ್ಷಿಣ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ನ್ಯಾಷನಲ್‌ ಹಿಲ್‌ ವ್ಯೂ ಶಾಲೆಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಇಂಧನ ಸಚಿವ ಡಿ.ಕೆ ಶಿವಕುಮಾರ್‌ ಮಾಲೀಕತ್ವದ “ನ್ಯಾಶನಲ್‌ ಹೀಲ್‌ ವ್ಯೂ’ ಶಾಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಆರ್‌ಟಿಇ ಸೀಟು ಹಂಚಿಕೆಯಾಗಿದ್ದರೂ ದಾಖಲಾತಿ ಮಾಡಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ 40ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಹಾಗೂ ಪೋಷಕರು ಮೇ 10ರಂದು ಶಾಲೆಯ ಮಂದೆ ಪ್ರತಿಭಟನೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next